More

    ಭೂಮಿ ಸೇವೆಯಲ್ಲಿ ಉಡುಪಿಗೆ ಅಗ್ರಸ್ಥಾನ

    ಉಡುಪಿ: ರಾಜ್ಯದಲ್ಲಿ ಕಂದಾಯ ಇಲಾಖೆ ಭೂಮಿ ತಂತ್ರಾಂಶ ಸೇವೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಉಡುಪಿ ಜಿಲ್ಲೆ ಅಗ್ರಸ್ಥಾನವನ್ನು ಕಾಯ್ದು ಕೊಂಡಿದ್ದು, ಡಿಸೆಂಬರ್‌ನಲ್ಲಿ ಸ್ವೀಕರಿಸಿದ 7,215 ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿದೆ. 

    ಡಿಸೆಂಬರ್ ತಿಂಗಳಲ್ಲಿ ಭೂಮಿ ತಂತ್ರಾಂಶದ ಮೂರು ಸೇವೆಗಳು, ಖಾತೆ ಬದಲಾವಣೆ, ಅಫಿಡವಿತ್ ಪರಿವರ್ತನೆ, ಎಸಿ ಕೋರ್ಟ್, ಡಿಸಿ ಕೋರ್ಟ್, ಆರ್‌ಟಿಸಿ, ಪೋಡಿ, ಸರ್ವೇ ಈ 10 ಸೇವೆಗಳ ಅಂತಿಮ ರ‌್ಯಾಂಕ್‌ನಲ್ಲಿ 509 ಅಂಕ ಪಡೆದುಕೊಂಡಿದೆ. ಒಟ್ಟಾರೆಯಾಗಿ ಗರಿಷ್ಠ 56.6 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಕಳೆದ ನಾಲ್ಕು ತಿಂಗಳುಗಳಿಂದ ಅಂಕ ಗಳಿಕೆಯಲ್ಲೂ ಏರಿಯಾಗುತ್ತಲೇ ಇದೆ.

    ಅರ್ಜಿ ವಿಲೇಗೆ ತಾಸುಗಳ ಪೈಪೋಟಿ: ಭೂಮಿ ತಂತ್ರಾಂಶದಲ್ಲಿ ಅರ್ಜಿ ವಿಲೇವಾರಿಯಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಭೂಮಿ ತಂತ್ರಾಂಶಕ್ಕೆ ಬಂದ ಅರ್ಜಿಗಳನ್ನು ವಿಳಂಬವಿಲ್ಲದೆ ತೀವ್ರಗತಿಯಲ್ಲಿ ವಿಲೇ ಮಾಡಲಾಗುತ್ತಿದೆ. ಒಂದು ದಿನಕ್ಕೂ ಕಡಿಮೆ ಅವಧಿಯಲ್ಲಿ ಅರ್ಜಿ ವಿಲೇವಾರಿ ಮಾಡಿದ ಉದಾಹರಣೆಗಳಿವೆ. ಉಳಿದ ಜಿಲ್ಲೆಗಳು 30 ದಿನದ ಸಮಯಾವಕಾಶದೊಂದಿಗೆ ವಿಲೇ ಮಾಡಬೇಕಿದ್ದ ಅರ್ಜಿಗಳಿಗೆ ಸರಾಸರಿ 33.8 ದಿನಗಳನ್ನು ತೆಗೆದುಕೊಂಡಿವೆ. ಇನ್ನು 60 ದಿನಗಳ ಸಮಯಾವಕಾಶದೊಂದಿಗೆ ವಿಲೇವಾರಿ ಮಾಡುವ ಅರ್ಜಿಗಳಿಗೆ 123.5 ದಿನಗಳನ್ನು ತೆಗೆದುಕೊಂಡಿವೆ.

    ಗುರಿ ಮೀರಿದ ಸಾಧನೆ : ಜಿಲ್ಲೆಯೊಂದರಲ್ಲಿ ತಿಂಗಳಿಗೆ ಕನಿಷ್ಠ 100 ಪರಿವರ್ತನೆ (ಕನ್ವರ್ಷನ್) ಅರ್ಜಿಗಳನ್ನು ವಿಲೇ ಮಾಡಬೇಕು. ಉಡುಪಿಯಲ್ಲಿ 329 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಎಸಿ ಕೋರ್ಟ್‌ನಲ್ಲಿ 100 ಪ್ರಕರಣ ಇತ್ಯರ್ಥಕ್ಕೆ ಗುರಿ ನಿಗದಿಯಾಗಿದ್ದರೆ, ಜಿಲ್ಲೆಯಲ್ಲಿ 105 ಪ್ರಕರಣಗಳ ವಿಲೇವಾರಿ ನಡೆದಿದೆ. ಒಬ್ಬ ಸರ್ವೇಯರ್ ತಿಂಗಳಿಗೆ 30 ಸರ್ವೆ ಮಾಡಬೇಕೆಂಬ ನಿಯಮವಿದೆ. ಉಡುಪಿಯಲ್ಲಿ ಪ್ರತಿಯೊಬ್ಬ ಸರ್ವೆಯರ್ 35.39 ಸರ್ವೆಗಳನ್ನು ಮಾಡಿದ್ದಾರೆ.

    ಆಯುಕ್ತರಿಂದ ಪ್ರಶಂಸೆ : ರಾಜ್ಯಮಟ್ಟದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಅಭಿನಂದಿಸಿರುವ ಭೂಮಾಪನ ಇಲಾಖೆ ಆಯುಕ್ತ ಮೌನೀಶ್ ಮೌದ್ಗಿಲ್, ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ 3.54 ಸಿಗ್ಮಾ ಮೌಲ್ಯವನ್ನು ಪಡೆದಿದ್ದು, ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯತತ್ಪರತೆ ಶ್ಲಾಘನೀಯ ಎಂದು ತಿಳಿಸಿದ್ದಾರೆ.

    ಸ್ಥಾನದಲ್ಲಿ ಏರಿಳಿತ ಸಹಜ. ಆದರೆ ಸತತ 4 ತಿಂಗಳುಗಳಿಂದ ಮೊದಲ ಸ್ಥಾನ ಕಾಯ್ದುಕೊಂಡಿರುವುದು ಇಲಾಖೆಯ ಸಾಧನೆ. ಕಂದಾಯ ಮಾತೃ ಇಲಾಖೆ. ಇಲ್ಲಿನ ಕೆಲಸ ಶೀಘ್ರದಲ್ಲಿ ನಡೆಯದಿದ್ದರೆ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ಕಂದಾಯ ಇಲಾಖೆ ಎಲ್ಲ 10 ಸೇವೆಗಳು ಚೆನ್ನಾಗಿ ನಡೆಯಬೇಕು ಎಂಬುದು ನಮ್ಮ ಸಂಕಲ್ಪ.

    ಜಿ. ಜಗದೀಶ ಉಡುಪಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts