More

    ಭಿಕ್ಷಾಟನೆಯಲ್ಲಿ ತೊಡಗಿದ್ದ 11 ಮಕ್ಕಳ ರಕ್ಷಣೆ

    ಕಲಬುರಗಿ: ನಗರದ ವಿವಿಧ ಸ್ಥಳಗಳಲ್ಲಿ ಶುಕ್ರವಾರ ಮತ್ತು ಶನಿವಾರ ಮೂರು ತಂಡಗಳೊಂದಿಗೆ ಕಾರ್ಯಾಚರಣೆ ನಡೆಸಿ 11 ಬಾಲ ಕಾರ್ಮಿಕರು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವ ಆರು ಮಕ್ಕಳನ್ನು ರಕ್ಷಣೆ ಮಾಡಿದ್ದು, ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿದ ಬಳಿಕ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ್ ತಿಳಿಸಿದ್ದಾರೆ.
    ಜಿಲ್ಲಾಧಿಕಾರಿ ಯಶವಂತ ಗುರುಕರ್ ಮಾರ್ಗದರ್ಶನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನಕುಮಾರ ಹಾಗು ಮಂಜುಳಾ ಪಾಟೀಲ್ ನೇತೃತ್ವದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್, ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ-೧೦೯೮ ಸಂಸ್ಥೆ ಮತ್ತು ತೆರೆದ ತಂಗುದಾಣಗಳ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಮಾರ್ಕೆಟ್ ಏರಿಯಾ, ಬಿಲಗುಂದಿ ಸರ್ಕಲ್, ಶರಣಬಸವೇಶ್ವರ ದೇವಸ್ಥಾನ, ರಾಮಮಂದಿರ ಸರ್ಕಲ್, ಗಂಜ್ ಹಾಗೂ ಹುಮನಾಬಾದ್ ರಿಂಗ್ ರೋಡ್ ಸೇರಿ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆ ಮತ್ತು ಬಾಲ ಕಾರ್ಮಿಕದಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸಲಾಗಿದೆ.
    ಹೈಕೋರ್ಟ್ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ನಿರ್ದೇಶದಂತೆ ಕಾರ್ಯಾಚರಣೆ ನಡೆಸಲಾಗಿದೆ. ಭಿಕ್ಷಾಟನೆಯಲ್ಲಿ ಮಕ್ಕಳನ್ನು ತೊಡಗಿಸುವುದು ಕಾನೂನು ಬಾಹಿರವಾಗಿದ್ದು, ಬಾಲ ನ್ಯಾಯ ಕಾಯ್ದೆ ೨೦೧೫ರ ಕಲಂ ೭೬ರನ್ವಯ ಶಿಕ್ಷಾರ್ಹ ಅಪರಾಧ. ಐದು ವರ್ಷದವರೆಗೂ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ವಾಸ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಆದ್ದರಿಂದ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳಬಾರದು ಎಂದು ಮಂಜುಳಾ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
    ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಭಾರತೀಶ ಶೀಲವಂತರ,ದದ ರಕ್ಷಣಾಧಿಕಾರಿ ಬಸವರಾಜ, ಮಕ್ಕಳ ಸಹಾಯವಾಣಿ ಸಂಯೋಜಕ ಬಸವರಾಜ ತೆಂಗಳಿ, ಸುಂದರ್, ಮಲ್ಲಯ್ಯ ಗುತ್ತೇದಾರ್, ಅಶೋಕ, ಕಾರ್ಮಿಕ ಇಲಾಖೆ ಹಿರಿಯ ನಿರೀಕ್ಷಕ ರವಿಕುಮಾರ, ಶಿವರಾಜ್, ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಾಧರ, ರಾಕೇಶ್ ಸೇರಿ ಸ್ವಯಂ ಸೇವಾ ಸಂಸ್ಥೆ ಸದಸ್ಯರು, ಪೊಲೀಸರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts