More

    ಬ್ಯಾಗುಗಳು ಸೃಷ್ಟಿಸಿದ ಆತಂಕ ಬಸ್ ನಿಲ್ದಾಣದಲ್ಲಿ ಒಂದೂವರೆ ಗಂಟೆ ತಪಾಸಣೆ 

    ಚಿಕ್ಕಬಳ್ಳಾಪುರ : ಜನರನ್ನು ಬೆಚ್ಚಿ ಬೀಳಿಸಿದ್ದ ಮಂಗಳೂರಿನ ವಿಮಾನ ನಿಲ್ದಾಣ ಬಾಂಬ್ ಪತ್ತೆ ಪ್ರಕರಣದ ನಡುವೆಯೇ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ನಾಲ್ಕು ಬ್ಯಾಗುಗಳು ಕೆಲ ಕಾಲ ಆತಂಕ ಸೃಷ್ಟಿಸಿದ್ದವು. ಕೊನೆಗೆ ತಂಬಾಕು ಉತ್ಪನ್ನಗಳ ಪಾಕೇಟ್‌ಗಳಿರುವುದು ಗೊತ್ತಾಗುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟರು.
    ಬುಧವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನಿಲ್ದಾಣದ ಬೇಂಚುಗಳ ನಡುವೆ ಎರಡು ಕಪ್ಪು, ಒಂದು ಹಳದಿ ಮತ್ತೊಂದು ಕೆಂಪು ಬಣ್ಣದ ಬ್ಯಾಗುಗಳನ್ನು ಪ್ರಯಾಣಿಕರು ನೋಡಿದ್ದಾರೆ. ಹಲವು ತಾಸು ಕಳೆದರೂ ತೆಗೆದುಕೊಂಡು ಹೋಗಲು ಯಾರೂ ಬಾರದಿದ್ದರಿಂದ ಸಹಜವಾಗಿ ಅನುಮಾನ ಮೂಡಿದೆ. ತಕ್ಷಣ ನಿಲ್ದಾಣದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಒಂದೂವರೆ ಗಂಟೆ ತಪಾಸಣೆ ನಡೆಸಿ ಜನರ ಆತಂಕ ದೂರ ಮಾಡಿದರು.
    ಮೊದಲಿಗೆ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಆಚೆ ಕಳುಹಿಸಿ, ಬಸ್‌ಗಳನ್ನು ಹೊರಗಡೆ ಕಳುಹಿಸಲಾಯಿತು. ಬಾಂಬ್ ಪತ್ತೆ ಉಪಕರಣ ಮತ್ತು ಶ್ವಾನದಿಂದ ಪರಿಶೀಲಿಸಲಾಯಿತು. ಈ ವೇಳೆ ಯಾವುದೇ ಸ್ಫೋಟಕಗಳಿಲ್ಲದಿರುವುದು ಅರಿವಿಗೆ ಬಂತು. ಆದರೂ ನಿರ್ಲಕ್ಷಿಸದೆ ಬ್ಯಾಗುಗಳನ್ನು ಬಿದಿರು ಕಟ್ಟಿಗೆ ಮಧ್ಯೆ ಸಿಕ್ಕಿಸಿಕೊಂಡು ನಿಲ್ದಾಣ ಆವರಣದ ಕೊನೆಯ ಬದಿಯಲ್ಲಿ ಜಿಪ್ ತೆಗೆದು ನೋಡಿದಾಗ ಗುಟ್ಕಾ ಪಾಕೇಟ್‌ಗಳು ಪತ್ತೆಯಾಗಿವೆ.
    ನಕಲಿ ಗುಟ್ಕಾ ಪಾಕೇಟ್ : ಪ್ರಾಥಮಿಕ ತನಿಖೆಯಿಂದ ಚೈನಿ ಕಂಪನಿ ಹೆಸರಿನಲ್ಲಿ ನಕಲಿ ಗುಟ್ಕಾ ಪಾಕೇಟುಗಳಿರುವುದು ಗೊತ್ತಾಗಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಮಾರ್ಗವಾಗಿ ಆಂಧ್ರಕ್ಕೆ ಸಾಗಿಸಲಾಗುತ್ತಿತ್ತು. ಮಧ್ಯಾಹ್ನ ಬೆಂಚುಗಳ ನಡುವೆ ಇಟ್ಟು ನಿಲ್ದಾಣದ ಹೋಟೆಲ್‌ಗೆ ಸಾಗಾಣೆದಾರರು ಊಟಕ್ಕೆ ಹೋಗಿದ್ದು ಈ ಮಧ್ಯೆ ಬ್ಯಾಗುಗಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮತ್ತೊಂದು ಮೂಲದ ಪ್ರಕಾರ, ಬೆಂಗಳೂರಿನಲ್ಲಿ ವ್ಯಾಪಾರಿಗಳು ಚಾಲಕರು ಮತ್ತು ನಿರ್ವಾಹಕರಿಗೆ ಹಣ ಕೊಟ್ಟು, ಪಾರ್ಸಲ್ ಅನ್ನು ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿನ ಏಜೆಂಟರಿಗೆ ನೀಡಲು ತಿಳಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ತೆಗೆದುಕೊಳ್ಳಲು ಯಾರೂ ಬಾರದಿರುವುದರಿಂದ ಬಸ್‌ನ ಸಿಬ್ಬಂದಿ ನಿಲ್ದಾಣದಲ್ಲಿಟ್ಟು ಮಾರ್ಗದತ್ತ ತೆರಳಿದ್ದಾರೆ. ನಕಲಿ ಉತ್ಪನ್ನಗಳಾಗಿರುವುದರಿಂದ ಇದುವರೆಗೂ ಬ್ಯಾಗುಗಳು ತಮ್ಮದು ಎಂದು ಯಾರೂ ಬಂದಿಲ್ಲ.
    ಆತಂಕಕ್ಕೆ ದಂಗಾದ ಜನ : ನಿಲ್ದಾಣದಲ್ಲಿ ಪೊಲೀಸ್ ಪಡೆ, ಶ್ವಾನದಳದ ಸುದೀರ್ಘ ಕಾರ್ಯಾಚರಣೆಯು ಜನರಲ್ಲಿ ಕುತೂಹಲದ ಜತೆಗೆ ಆತಂಕ ಮೂಡಿಸಿತ್ತು. ತೆವಳುತ್ತಲೇ ಬ್ಯಾಗ್ ಬಳಿ ತೆರಳಿದ ವೈಖರಿ, ನಿಲ್ದಾಣದ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಣೆ, ತಪಾಸಣೆ ವೀಕ್ಷಿಸಲು ಜನ ಮುಗಿಬಿದ್ದರು. ಸ್ಥಳದಿಂದ ಜನರನ್ನು ದೂರ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು. ಬೇರೆ ಬೇರೆ ಕಡೆಗಳಿಂದ ಬಂದ ಬಸ್‌ಗಳು ನಿಲ್ದಾಣ ಪ್ರವೇಶಿಸಲಿಲ್ಲ.
    ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾಗುಗಳನ್ನು ಪರಿಶೀಲಿಸಿದ್ದು ಒಳಗೆ ಗುಟ್ಕಾ ಪಾಕೇಟುಗಳಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ.
    ಎಚ್.ವಿ.ಸುದರ್ಶನ್, ವೃತ್ತ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts