More

    ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ರಸ್ತೆ ಗುಂಡಿ ತುಂಬ ಕೆಸರು, ಕ್ರಷರ್ ಹಾವಳಿಗೆ ನಲುಗಿದ ಜನ

    ರಾಜೇಶ್ ಎಸ್.ಜಿ. ಮುಕ್ಕೇನಹಳ್ಳಿ
    ತಾಲೂಕಿನ ಚನ್ನವೀರನಹಳ್ಳಿಯ ಗ್ರಾಮಸ್ಥರು ಕ್ರಷರ್‌ಗಳ ಹಾವಳಿಯಿಂದ ಸಂಕಷ್ಟ ಎದುರಿಸುವಂತಾಗಿದೆ. ಕಲ್ಲು, ಜಲ್ಲಿ ತುಂಬಿದ ಲಾರಿಗಳು ಗ್ರಾಮದ ಮಧ್ಯೆಯೇ ಸಂಚರಿಸುವುದರಿಂದ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ.

    ಈ ಭಾಗದಲ್ಲಿ ಸಾಕಷ್ಟು ಕ್ವಾರಿಗಳು ಇರುವುದರಿಂದ ಬಂಡೆ ಸ್ಫೋಟಿಸುವ ಶಬ್ದದ ಜತೆಗೆ ಬೇಸಿಗೆಯಲ್ಲಿ ಧೂಳಿನ ಹಾವಳಿ, ಮಳೆಗಾಲದಲ್ಲಿ ರಸ್ತೆ ಗುಂಡಿಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಸಂಚಾರ ಕಷ್ಟವಾಗಿದೆ. ವರ್ಷಪೂರ್ತಿ ಒಂದಿಲ್ಲೊಂದು ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಚನ್ನವೀರನಹಳ್ಳಿಯ ಕೂಗಳತೆ ದೂರದಲ್ಲಿರುವ ಹಳೇಕೋಟೆ ಗ್ರಾಮದ ಬಳಿ ಸಾಕಷ್ಟು ಕ್ರಷರ್‌ಗಳಿವೆ. ಇದರಿಂದ ಅಪಾರ ಪ್ರಮಾಣದ ಶಬ್ದ, ಧೂಳು ಹಾಗೂ ಅಧಿಕ ಭಾರ ಹೊತ್ತ ವಾಹನಗಳ ಸಂಚಾರದಿಂದ ಕಿರಿಕಿರಿ ಸಾಮಾನ್ಯ ಎಂಬಂತಾಗಿದೆ.

    ಮಳೆಗಾಲವಾಗಿರುವುದರಿಂದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿವೆ. ಈ ರಸ್ತೆಯಲ್ಲಿ ವಾಹನಗಳ ಚಾಲನೆಗೆ ಹರಸಾಹಸಪಡಬೇಕಿದೆ. ಗುಂಡಿ ಯಾವುದು ರಸ್ತೆ ಯಾವುದೆಂದು ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳು ಇವೆ ಎನ್ನುತ್ತಾರೆ ಗ್ರಾಮಸ್ಥರು.

    ಮನವಿಗೆ ಸ್ಪಂದಿಸದ ಅಧಿಕಾರಿಗಳು: ಅಧಿಕ ಭಾರ ತುಂಬಿಕೊಂಡು ಸಂಚರಿಸುವ ಲಾರಿಗಳ ವಿರುದ್ಧ ಸಾರಿಗೆ ಅಧಿಕಾರಿಗಳಿ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ಮತ್ತೆ ಕೆಲವು ಕ್ರಷರ್‌ಗಳಿಗೆ ಅನುಮತಿ ನೀಡಲು ಅಧಿಕಾರಿಗಳು ಚಿಂತಿಸಿರುವ ಮಾಹಿತಿ ಇದೆ. ಈಗಿರುವ ಕ್ರಷರ್‌ಗಳ ಆರ್ಭಟಕ್ಕೆ ಜನರ ಬದುಕು ನರಕವಾಗಿದೆ. ಮತ್ತಷ್ಟು ಕ್ರಷರ್‌ಗಳಿಗೆ ಅನುಮತಿ ನೀಡಿದಲ್ಲಿ ಜನರು ಗ್ರಾಮವನ್ನೇ ಬಿಟ್ಟು ಹೋಗಬೇಕಾಗುತ್ತದೆ.

    ಹೊಸ ಕ್ರಷರ್‌ಗಳಿಗೆ ಅನುಮತಿ ನೀಡಬಾರದು. ಗ್ರಾಮದ ಸನಿಹವೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ.
    ಸಿ.ನರಸಿಂಹಮೂರ್ತಿ, ಸ್ಥಳೀಯ

    ನಾನು ದೊಡ್ಡಬಳ್ಳಾಪುರಕ್ಕೆ ಬಂದು 20 ದಿನಗಳಾಗಿವೆ. ಅಲ್ಲಿನ ಸಮಸ್ಯೆ ಬಗ್ಗೆ ಅಷ್ಟಾಗಿ ತಿಳಿಯದ ಕಾರಣ ನಮ್ಮ ಇಂಜಿನಿಯರ್‌ಗಳನ್ನು ಕಳುಹಿಸಿ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು.
    ಪುಟ್ಟ ಹನುಮಂತರಾಜು, ಲೋಕೋಪಯೋಗಿ ಇಲಾಖೆ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts