More

    ಬೇಕಾಬಿಟ್ಟಿಯಾಗಿ ಮದ್ಯದಂಗಡಿ ಪರವಾನಗಿ ನೀಡಬೇಡಿ: ಶಾಸಕ ಸ್ವರೂಪ್ ಕಟ್ಟುನಿಟ್ಟಿನ ಸೂಚನೆ

    ಹಾಸನ: ನಗರದಲ್ಲಿ ಸಿಎಲ್-7 ಮದ್ಯದಂಗಡಿಗಳು ನಿಯಮ ಉಲ್ಲಂಘಿಸುತ್ತಿದ್ದು, ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿಕಾರಿಗೆ ಶಾಸಕ ಎಚ್.ಪಿ.ಸ್ವರೂಪ್ ಸೂಚನೆ ನೀಡಿದರು.
    ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೊದಲ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದೇ ಸಿಎಲ್-7 ಮದ್ಯದಂಗಡಿಯಲ್ಲಿ ನಾಲ್ಕು ದಿಕ್ಕಿನಲ್ಲೂ ನಾಲ್ಕು ಕೌಂಟರ್‌ಗಳನ್ನು ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದೆ. ರಿಂಗ್ ರಸ್ತೆಯಲ್ಲಿ ಹೋಗುವವರೆಲ್ಲ ನಮ್ಮ ಮನೆ ಹತ್ತಿರ ಬಂದು ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲೇ ಕುಡಿದು ಹೋಗುತ್ತಿದ್ದಾರೆ. ಇದರಿಂದ ಕಾನೂನು ವ್ಯವಸ್ಥೆಗೂ ಧಕ್ಕೆಯುಂಟಾಗಿದ್ದು, ಬಹಳಷ್ಟು ಗಲಾಟೆಗಳೂ ನಡೆಯುತ್ತಿವೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದರು.
    ನಗರದಲ್ಲಿ ಸಿಎಲ್-7 ಹೆಚ್ಚಿರುವುದರಿಂದ ಕಾನೂನು ಸುವ್ಯವಸ್ಥೆ ಹಿಡಿತ ತಪ್ಪಿದೆ. ಹುಡುಗರು ಹಾಳಾಗಲು ಇದು ಪ್ರಮುಖ ಕಾರಣವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಿಎಲ್-7ಗೆ ಪರವಾನಗಿ ನೀಡುವಾಗ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ತಾವು ಯಾವುದೇ ರಾಜಕೀಯ ಒತ್ತಡ ಹಾಕುವುದಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗಮನ ಹರಿಸಬೇಕು ಎಂದು ಸೂಚಿಸಿದರು.
    ಈ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ಕೇಶವ ಮೂರ್ತಿ, ಈ ಹಿಂದೆ ಒತ್ತಡ ಮತ್ತು ಪೈಪೋಟಿಗೆ ಬಿದ್ದು ಸಿಎಲ್-7 ಪರವಾನಗಿ ಪಡೆದುಕೊಂಡಿದ್ದಾರೆ. ಈ ಹಿಂದೆ ಬಿ.ಎಂ ರಸ್ತೆಯಲ್ಲಿದ್ದ ಮದ್ಯದಂಗಡಿಗಳನ್ನು ರಿಂಗ್ ರಸ್ತೆಗೆ ಸ್ಥಳಾಂತರ ಮಾಡಿದ್ದರಿಂದ ಆ ಭಾಗದಲ್ಲಿ ಅಂಗಡಿಗಳು ಹೆಚ್ಚಾಗಿವೆ. ಮುಂದೆ ನೀವು ನೀಡಿದ ನಿರ್ದೇಶನ ಪಾಲನೆ ಮಾಡುವುದಾಗಿ ತಿಳಿಸಿದರು.
    ನಗರದ ಆರ್.ಸಿ.ರಸ್ತೆಯಲ್ಲಿ 60-70 ವರ್ಷದ ಹಳೆಯ ಮರಗಳನ್ನು ಕಡಿದು ನಾಶ ಮಾಡಲಾಗಿದೆ. ಮಹಾರಾಜ ಪಾರ್ಕ್‌ನಲ್ಲೂ ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಸಾಧ್ಯವಾದಷ್ಟು ಹೆಚ್ಚು ಗಿಡಗಳನ್ನು ನೆಡುವತ್ತ ಗಮನ ಹರಿಸಬೇಕು. ಗಿಡಗಳನ್ನು ನೆಡುವುದು ಮಾತ್ರವಲ್ಲ, ಅವುಗಳ ಸಂರಕ್ಷಣೆಯೂ ನಡೆಯಬೇಕು ಎಂದು ಶಾಸಕ ಸ್ವರೂಪ್ ನಿರ್ದೇಶನ ನೀಡಿದರು.
    ಶಿಕ್ಷಕರ ಹಾಜರಾತಿ ಕಡ್ಡಾಯ:
    ಕೆಲ ಶಿಕ್ಷಕರು ಶಾಲೆಗೆ ಹೋಗದೆ ಹಾಸನ ನಗರದ ಹೋಟೆಲ್‌ಗಳಲ್ಲಿ ಕುಳಿತುಕೊಂಡು ತಮ್ಮ ತಮ್ಮ ವ್ಯವಹಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಶಿಕ್ಷಕರೂ ಶಾಲೆಯ ಸಮಯದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬಿಇಒ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲೆಯಲ್ಲಿ ಇರದ ಶಿಕ್ಷಕರಿಗೆ ನೋಟಿಸ್ ನೀಡಬೇಕು. ನಾನು ಕೂಡ ಶಾಲೆಗಳಿಗೆ ಭೇಟಿ ನೀಡುತ್ತೇನೆ. ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ, ಮುಂದಿನ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
    ಡೆಂೆ ಪ್ರಕರಣ ಹೆಚ್ಚಳ:
    ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ತಾಲ್ಲೂಕು ವ್ಯಾಪ್ತಿಯಲ್ಲಿ ಡೆಂೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಪ್ರದೇಶ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ನಗರಸಭೆ ವ್ಯಾಪ್ತಿಯಲ್ಲಿ ಸರ್ವೆ ನಡೆಸುವ ಮೂಲಕ ಡೆಂೆ ನಿಯಂತ್ರಣಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
    ಇದಕ್ಕೆ ಪ್ರಕ್ರಿಯಿಸಿದ ಶಾಸಕರು, ನಗರಸಭೆ ಅಧಿಕಾರಿಗೊಂದಿಗೆ ಚರ್ಚಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಗಳಿದ್ದರೆ ಗಮನಕ್ಕೆ ತರಬೇಕು. ಮುಂದಿನ ದಿನಗಳಲ್ಲಿ ವೈದ್ಯರೊಂದಿಗೆ ಸಭೆ ಆಯೋಜಿಸುವಂತೆ ತಿಳಿಸಿದ ಅವರು, ತಾವು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
    ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಸಕಾಲದಲ್ಲಿ ರೈತರಿಗೆ ರಸಗೊಬ್ಬರ, ಕೀಟನಾಶಕಗಳನ್ನು ವಿತರಿಸಬೇಕು. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಹಣ ಜಮೆಯಾಗುತ್ತಿದಿಯಾ ಎಂಬುದನ್ನು ಪರಿಶೀಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
    ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಜತೆಗೆ ಸಕಾಲದಲ್ಲಿ ಸೇವೆ ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕು. ದುಸ್ಥಿತಿ ಹಂತದಲ್ಲಿರುವ ಅಂಗನವಾಡಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.
    ರೇಷ್ಮೆ ಬೆಳೆ ಬೆಳೆಯಲು ಕೃಷಿಕರಿಗೆ ಅರಿವು ಮೂಡಿಸುವುದರ ಮೂಲಕ ಉತ್ತೇಜನ ನೀಡಬೇಕು. ಮಳೆಯಿಂದ ಹಾನಿಗೊಳಗಾಗಿರುವ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಗೆ ಕ್ರಮವಹಿಸಬೇಕು. ನಗರ ಕೈಗಾರಿಕಾ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಬಸ್ ಸೇವೆ ಒದಗಿಸಬೇಕು ಎಂದು ಆಯಾ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
    ಸಭೆಯಲ್ಲಿ ಹಾಸನ ತಹಸೀಲ್ದಾರ್ ಮೋಹನ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಎಲ್. ಯಶವಂತ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ದಿನೇಶ್, ನಟರಾಜ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ರವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಹಾಗೂ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts