More

    ಬೆಳೆ ಹಾನಿ ಪರಿಶೀಲಿಸಿದ ಶಾಸಕ

    ಬೇಲೂರು: ಬೇಲೂರು ತಾಲೂಕಿನಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣ ರೈತರು ಬೆಳೆದಿದ್ದ ಬೆಳೆಗೆ ನೀರಿಲ್ಲದೆ ಒಣಗಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಅವರು ಎಂ.ಹುಣಸೇಕೆರೆ ಕೊಪ್ಪಲು ಗ್ರಾಮದ ಜಮೀನಿನ ಮುಸುಕಿನ ಜೋಳದ ಹೊಲಕ್ಕೆ ಸೋಮವಾರ ಕೃಷಿ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ರಾಜ್ಯ ಸರ್ಕಾರ ಯಾವ ಆಧಾರದ ಮೇಲೆ ಜಿಲ್ಲೆಯ ಮೂರು ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದ್ದಾರೋ ಗೊತ್ತಿಲ್ಲ. ಆದರೆ ಬೇಲೂರು ತಾಲೂಕು ಮಳೆ ಇಲ್ಲದೆ ಬರ ಪೀಡಿತ ಪ್ರದೇಶವಾಗಿದೆ. ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.
    ಮಳೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ರೈತರ ಬೆಳೆ ಹಾನಿ ಮತ್ತು ಅವರ ಜೀವನಕ್ಕೆ ಪರಿಹಾರವನ್ನು ನಿಗದಿ ಪಡಿಸಿ ಹಣ ಬಿಡುಗಡೆ ಮಾಡಬೇಕು. ಜತೆಗೆ ಮಲೆನಾಡು ಪ್ರದೇಶದಲ್ಲೂ ಕಾಫಿ ನಷ್ಟವಾಗಿದೆ. ಜೋಳ, ತೆಂಗು ಸೇರಿದಂತೆ ಇತರೆ ಬೆಳೆಗೂ ಸಾಕಷ್ಟು ನಷ್ಟವಾಗಿದೆ. ಎಲ್ಲಿ ಯಾವ ಬೆಳೆ ಎಷ್ಟೆಷ್ಟು ನಷ್ಟವಾಗಿದೆ ಎಂಬ ವಿವರವನ್ನು ಅಧಿಕಾರಿಗಳಿಂದ ಪಡೆದು ಮುಖ್ಯಮಂತ್ರಿ ಮತ್ತು ಕೃಷಿ ಸಚಿವರಿಗೆ ಪತ್ರ ಬರೆಯುತ್ತೇನೆ. ಈ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ಕೊಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಕ್ಷೇತ್ರದ ಜನತೆಯ ಪರವಾಗಿ ಖುದ್ದಾಗಿ ಮನವಿ ಮಾಡುತ್ತೇನೆ ಎಂದರು.
    ಹೆಬ್ಬಾಳು ಏತ ನೀರಾರಿ ಯಾವುದೇ ರೀತಿಯಲ್ಲೂ ಇಂಪ್ಲಿಮೆಂಟ್ ಆಗಿಲ್ಲ. ಈ ವಿಚಾರವಾಗಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಯನ್ನು ಭೇಟಿಮಾಡಿ ಮಾತನಾಡಿದ್ದೇನೆ. 6 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವಂತೆ ಏತ ನೀರಾವರಿಗೆ ಸಧ್ಯಕ್ಕೆ ಯಾವುದೇ ಅನುದಾನವಿಲ್ಲ ಎಂದು ಮಂತ್ರಿಗಳು ಹೇಳಿದರೂ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ವಿವರಿಸಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕಾವ್ಯಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಕ್ಷಿತಾ, ಗ್ರಾಮ ಲೆಕ್ಕಾಧಿಕಾರಿ ಹನುಮಂತು ಸೇರಿದಂತೆ ರೈತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts