More

    ಬೆಳೆ ವಿಮೆ ಪರಿಹಾರ ಕನ್ನಡಿಯೊಳಗಿನ ಗಂಟು

    ಪರಶುರಾಮ ಕೆರಿ ಹಾವೇರಿ

    ಜಿಲ್ಲೆಯ ರೈತರಿಗೆ ಅದ್ಯಾವ ಶಾಪವೋ ಏನೋ, ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರಗಳು ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸತೊಡಗಿವೆ. ಕೃಷಿ ಇಲಾಖೆ, ವಿಮೆ ಕಂಪನಿಯವರ ಬೇಜವಾಬ್ದಾರಿತನದಿಂದ ರೈತರ ಖಾತೆಗೆ ಮಾತ್ರ ಹಣ ಜಮೆಯಾಗುತ್ತಿಲ್ಲ.

    2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 75,347 ರೈತರಿಗೆ 160.50 ಕೋಟಿ ರೂ. ಬೆಳೆ ವಿಮೆ ಪರಿಹಾರ ಹಣ ಬಿಡುಗಡೆಗೊಂಡಿತ್ತು. ಇದರಲ್ಲಿ ಈವರೆಗೂ 70,078 ರೈತರಿಗೆ 149.85 ಕೋಟಿ ರೂ. ಮಾತ್ರ ಜಮೆಯಾಗಿದೆ. ಇನ್ನುಳಿದ 5,269 ರೈತರಿಗೆ 10.65 ಕೋಟಿ ರೂ. ಕೆಲ ತಾಂತ್ರಿಕ (ಬೆಳೆ ದೃಢೀಕರಣ ಮಿಸ್​ವ್ಯಾಚ್) ಕಾರಣದಿಂದ ಕಳೆದ ಆರು ತಿಂಗಳಿನಿಂದ ಜಮೆಯಾಗಿಲ್ಲ.

    ಇದಲ್ಲದೆ, ಪ್ರಸಕ್ತ ಸಾಲಿನಲ್ಲಿ (2019-20) ನೆರೆ ಹಾಗೂ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆಯನ್ನು ಕಳೆದುಕೊಂಡಿರುವ ರೈತರಿಗೆ ಮುಂಗಡವಾಗಿ ಬೆಳೆ ವಿಮೆ ಪರಿಹಾರ ಮೊತ್ತದ ಪೈಕಿ ಶೇ. 25ರಷ್ಟು ಹಣವನ್ನು ಬಿಡುಗಡೆಗೊಳಿಸಲು ಸರ್ಕಾರವು ವಿಮೆ ಕಂಪನಿಗೆ ಸೂಚನೆ ನೀಡಿದೆ. ಇದರಂತೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 64,660 ರೈತರಿಗೆ ಮುಂಗಡವಾಗಿ ಶೇ. 25ರಷ್ಟು ಮೊತ್ತವಾದ 48.97 ಕೋಟಿ ರೂಪಾಯಿಯ ಬೆಳೆ ವಿಮೆ ಪರಿಹಾರ ಹಣವನ್ನು ವಿಮೆ ಕಂಪನಿ ಬಿಡುಗಡೆಗೊಳಿಸಿದೆ. ಆದರೆ, ಸಂರಕ್ಷಣಾ ಸಾಫ್ಟ್​ವೇರ್ ಮೂಲಕ ಹಾಕಬೇಕು ಎಂಬ ನೆಪವನ್ನಿಟ್ಟುಕೊಂಡು ಪಾವತಿ ಮಾಡುವಲ್ಲಿ ಕಾಲಹರಣವನ್ನು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಇನ್ನು ಬೆಳೆ ಹಾನಿ ಪರಿಹಾರವನ್ನೂ ಸರ್ಕಾರ ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ 1.48 ಲಕ್ಷ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ. ಇದರಲ್ಲಿ ಈವರೆಗೂ 94,132 ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ಜಮೆಯಾಗಿದೆ. ಇನ್ನುಳಿದ 64 ಸಾವಿರ ರೈತರಿಗೆ ಇದುವರೆಗೂ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿರುವುದೇ ಸಮಸ್ಯೆಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.

    ಈ ರೀತಿ ಮೂರು ಪ್ರಕರಣಗಳಲ್ಲಿ ಸಾಕಷ್ಟು ರೈತರಿಗೆ ಪರಿಹಾರ ಮೊತ್ತ ಕೈಗೆಟುಕಿಲ್ಲ. ಮೊದಲೇ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಗಾಯದ ಬರೆ ಎಳೆದಂತಾಗಿದೆ.

    ಆಣೆವಾರಿ ಲೆಕ್ಕ ಹೊಂದಿಸಲು ನೆಪ: ಬೆಳೆ ವಿಮೆ ಕಂಪನಿಯೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು, ಸಂರಕ್ಷಣಾ ಸಾಫ್ಟ್​ವೇರ್ ಮೂಲಕ ವಿಮೆ ಪರಿಹಾರ ಮುಂಗಡ ಹಣವನ್ನು ಹಾಕುವ ನೆಪದಲ್ಲಿ ಕಾಲಹರಣ ಮಾಡುವ ಹುನ್ನಾರ ನಡೆಸಿದ್ದಾರೆ. ಇನ್ನು ಸ್ವಲ್ಪ ವಿಳಂಬ ಮಾಡುತ್ತ ಹೋದರೆ ಬೆಳೆ ವಿಮೆ ಸಮೀಕ್ಷೆಯನ್ನು ಪಡೆದುಕೊಂಡು ನಂತರ ಎಷ್ಟು ಪ್ರಮಾಣದ ಇಳುವರಿ ಬಂದಿದೆ, ಎಷ್ಟು ಹಾನಿಯಾಗಿದೆ ಎಂಬ ಲೆಕ್ಕ ತೆಗೆದು ವಿಮೆ ಹಣವನ್ನು ನೀಡುವ ಲೆಕ್ಕಾಚಾರ ಕಂಪನಿಯದ್ದಾಗಿದೆ. ಮುಂಗಡ ಕೊಟ್ಟರೆ, ಕೆಲ ರೈತರ ಜಮೀನಿನಲ್ಲಿ ಇಳುವರಿ ಬಂದಿದ್ದರೆ ಅವರ ಹಣವನ್ನು ಮರಳಿ ಪಡೆಯುವ ಬದಲು ಕೊಡುವ ಮುನ್ನವೇ ಕಡಿತ ಮಾಡಿಕೊಳ್ಳುವ ವಿಮೆ ಕಂಪನಿಯವರ ಹುನ್ನಾರಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಕೈಜೋಡಿಸಿದ್ದಾರೆ. ರೈತರ ಸಂಕಷ್ಟ ಅವರ ಕಣ್ಣಿಗೆ ಕಾಣುತ್ತಿಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸುತ್ತಾರೆ.

    ಬೆಳೆ ವಿಮೆ ತುಂಬಿದ ರೈತರಿಗೆ ಪ್ರಕೃತಿ ವಿಕೋಪದ ಸಮಯದಲ್ಲಿ ವಿಮೆಯ ಕ್ಲೇಮ್ ಶೇ. 25ರಷ್ಟು ಹಣವನ್ನು ಮುಂಗಡವಾಗಿ ನೀಡುವ ನಿಯಮವಿದೆ. ಅದರಂತೆ ಜಿಲ್ಲೆಗೆ 48.97 ಕೋಟಿ ರೂ.ಗಳ ಮುಂಗಡ ವಿಮೆ ಹಣ ಬಿಡುಗಡೆಗೊಂಡಿದೆ. ಇದನ್ನು ಸಂರಕ್ಷಣಾ ಸಾಫ್ಟ್​ವೇರ್ ಮೂಲಕ ನೀಡಿದರೆ ಯಾವ ರೈತರಿಗೆ ಎಷ್ಟು ಕೊಡಲಾಗಿದೆ? ಮುಂದೆ ಪೂರ್ಣ ಕ್ಲೇಮ್ ಆದ ನಂತರ ಎಷ್ಟು ಕೊಡಬೇಕು ಎಂಬ ಲೆಕ್ಕ ಸಿಗಲಿದೆ. ಇದಕ್ಕಾಗಿ ಸಂರಕ್ಷಣಾ ಸಾಫ್ಟ್​ವೇರ್​ಗೆ ಅಳವಡಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ಆರಂಭಗೊಂಡಿದೆ. ಇನ್ನೊಂದು ವಾರದಲ್ಲಿ ಇದು ಮುಗಿಯಲಿದ್ದು, ನಂತರ ರೈತರ ಖಾತೆಗೆ ಹಣ ಜಮೆಯಾಗಲಿದೆ. | ಬಿ. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts