More

    ಬೂಕನ ಬೆಟ್ಟದಲ್ಲಿ ವಿಜೃಂಭಣೆಯಿಂದ ನೆರವೇರಿದ ರಥೋತ್ಸವ, ಸಾವಿರಾರು ಭಕ್ತರು ಭಾಗಿ

    ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಬೂಕನಬೆಟ್ಟದಲ್ಲಿ 89 ನೇ ಬೃಹತ್ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನಡೆಯಿತು.
    ಮುಂಜಾನೆಯಿಂದಲೇ ಶ್ರೀ ರಂಗನಾಥಸ್ವಾಮಿಗೆ ಅಭಿಷೇಕ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

    ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ಒಡವೆ, ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿದ್ದು, ಗೋವಿಂದ ನಾಮ ಭಜಿಸುವ ಮೂಲಕ ತುಪ್ಪದ ಹಾರತಿ ಬೆಳಗಿಸಲಾಯಿತು.

    ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಮಂಗಳವಾದ್ಯದೊಂದಿಗೆ ಶ್ರೀರಂಗನಾಥಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಬೆಟ್ಟದ ಬೀದಿಗಳಲ್ಲಿ ಸಾಗಿತು.
    ಮಧ್ಯಾಹ್ನ 1.15 ರ ಸುಮಾರಿನಲ್ಲಿ ಸಿಂಗಾರಗೊಂಡಿದ್ದ ರಥದ ಮೇಲೆ ಶ್ರೀ ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು, ಪ್ರಧಾನ ಅರ್ಚಕರು ರಥಕ್ಕೆ ಶಾಂತಿ ಪೂಜೆ ಸಲ್ಲಿಸಿದ ಬಳಿಕ ನೂರಾರು ಭಕ್ತರು ಜೈಂಕಾರದೊಂದಿಗೆ ರಥವನ್ನು ಎಳೆದರು.

    ಹರಕೆ ಹೊತ್ತಿದ್ದ ಭಕ್ತರು ರಥದ ಸಾಗಿದಂತೆಲ್ಲ ಬಾಳೆಹಣ್ಣು, ಹೂವು, ಪತ್ರೆ ಹಾಗೂ ದವನ ಎಸೆದು ಹರಕೆ ಸಲ್ಲಿಸಿದರು.
    ಕಳೆದ ನಾಲ್ಕು ದಿನಗಳ ಹಿಂದೆ ಜರುಗಿದ ಸ್ಪರ್ಧೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳು ಹಾಗೂ ನಿನ್ನೆ ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ ಜಯಗಳಿಸಿದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷ ಬಿ.ಸಿ.ಬೊಮ್ಮೆಗೌಡ, ಉಪ ತಹಸೀಲ್ದಾರ್ ಮೋಹನ್ ಕುಮಾರ್, ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್ಐ ಭವಿತ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts