More

    ಬಾಲ ಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ: ಎಡಿಸಿ ಆನಂದ್

    ಹಾಸನ: ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಿ ಅವರ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆನಂದ್ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬಾಲ ಕಾರ್ಮಿಕ ನಿರ್ಮೂಲನಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಷಕರ ನಿರ್ಲಕ್ಷೃ, ಬಡತನ ಅಥವಾ ಮಾಲೀಕರ ದುರಾಸೆಗಳಿಂದ ಮಕ್ಕಳು ಶಿಕ್ಷಣ ವಂಚಿತರಾಗಿ, ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳು ಹೆಚ್ಚಿನ ತಪಾಸಣೆ ನಡೆಸಿ ಅಂತಹ ಮಕ್ಕಳನ್ನು ರಕ್ಷಿಸಿ ಪುನರ್‌ವಸತಿ ಕಲ್ಪಿಸಿ ಎಂದು ಸೂಚನೆ ನೀಡಿದರು.
    ಬಾಲ ಕಾರ್ಮಿಕರು ಪತ್ತೆಯಾದ ಕೂಡಲೇ ಎಫ್‌ಐಆರ್ ದಾಖಲಿಸಿ ತಪ್ಪಿಸಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ ಹಾಗೂ ಬಾಲಕಾರ್ಮಿಕರ ಪತ್ತೆಗಾಗಿ ನಡೆಸುವ ಅನಿರೀಕ್ಷಿತ ದಾಳಿ ವೇಳೆ ಸಮಿತಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕಾಲ ಕಾಲಕ್ಕೆ ಸಮಿತಿ ಸದಸ್ಯರ ಸಭೆ ನಡೆಸಿ ಸರ್ಕಾರೇತರ ಸದಸ್ಯರು ಸಂಘ- ಸಂಸ್ಥೆಗಳ ಸಹಕಾರ ಪಡೆದು ಬಾಲ ಕಾರ್ಮಿಕರ ಪತ್ತೆ ಹಾಗೂ ಪುನರ್ವಸತಿ ಕಾರ್ಯ ಕೈಗೊಳ್ಳಿ. ಪುನರ್ವಸತಿ ಕೇಂದ್ರದಲ್ಲಿ ಇರುವ ಮಕ್ಕಳಿಗೆ ವಿವಿಧ ಚಟುವಟಿಕೆ ನಡೆಸಿ ಪ್ರೋತ್ಸಾಹಧನ ನೀಡಬೇಕು ಹಾಗೂ ಉತ್ತಮ ಶಿಕ್ಷಣ ಕಲ್ಪಿಸಬೇಕು ಎಂದು ಸೂಚಿಸಿದರು.
    ಕಾರ್ಮಿಕ ಅಧಿಕಾರಿ ಯಮುನಾ ಅವರು ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ವಿವರ ಹಾಗೂ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 2022- 23ನೇ ಸಾಲಿನಲ್ಲಿ 132 ತಪಾಸಣೆ ನಡೆದಿದ್ದು 13 ಮಕ್ಕಳನ್ನು ರಕ್ಷಿಸಲಾಗಿದೆ ಹಾಗೂ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಮಾಡಿ ಮೂರು ಪ್ರಕರಣಗಳ ವಿಚಾರಣೆ ನಡೆದು ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, 40,000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುರೇಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಕನಕಲಕ್ಷ್ಮೀ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಟಿ ಕೋಮಲಾ, ಪ್ರಚೋದನಾ ಸಂಸ್ಥೆಯ ನಿರ್ದೇಶಕರಾದ ಸಿ.ಸಿ. ಪೌಲಸ್, ಸಮಿತಿಯ ಸದಸ್ಯರಾದ ಹೆತ್ತೂರು ನಾಗರಾಜು, ಲೀಲಾವತಿ, ಭಾರತ್ ಗೈಡ್ಸ್ ಜಿಲ್ಲಾ ಆಯುಕ್ತ ಎಂ.ಬಿ. ಗಿರಿಜಾಂಬಿಕೆ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts