More

    ಬಾಕಿ ಪ್ರೋತ್ಸಾಹಧನ ಪಾವತಿಗೆ ಆಗ್ರಹ

    ಕಾರವಾರ: ಬಾಕಿ ಪ್ರೋತ್ಸಾಹಧನ ಪಾವತಿಗೆ ಆಗ್ರಹಿಸಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

    ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನಾ ಸಭೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದರು.

    ತಮಗೆ 15 ತಿಂಗಳ ಮದರ್ ಆಂಡ್ ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ (ಎಂಸಿಟಿಎಸ್) ಪ್ರೋತ್ಸಾಹಧನ ಪಾವತಿಯಾಗದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಜ.3 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್

    ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಅಂದಿನಿಂದ ಕೆಲಸವನ್ನೂ ಸ್ಥಗಿತ ಮಾಡಿದ್ದಾರೆ. ಇಷ್ಟಾದ ಮೇಲೂ ಬಾಕಿ ಪಾವತಿ ಬಗ್ಗೆ ಸರ್ಕಾರದಿಂದ ಯಾವುದೇ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾವಿರಾರು ಕಾರ್ಯಕರ್ತೆಯರು ಬುಧವಾರ ರ‍್ಯಾಲಿ ನಡೆಸಿದರು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವಿಶ್ರಾಂತಿ ಕೊಠಡಿ ಒದಗಿಸಬೇಕು ಎಂದು ಮನವಿ ಮಾಡಿದರು.

    ಮನವಿ ಸ್ವೀಕರಿಸಿದ ಆರೋಗ್ಯ ಇಲಾಖೆ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ಡಿಎಚ್​ಒ ಕಚೇರಿಯಲ್ಲಿ ತಕ್ಷಣದಿಂದ ವಿಶ್ರಾಂತಿ ಕೊಠಡಿ ನೀಡಲಾಗುವುದು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲೂ ಕೊಠಡಿ ಒದಗಿಸಲು ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರೋತ್ಸಾಹಧನ ಸರ್ಕಾರದಿಂದ ಬರಬೇಕಾಗಿದ್ದು, ಅದನ್ನು ಸರ್ಕಾರಕ್ಕೆ ತಿಳಿಸಲಾಗುವುದು ಎಂದರು.

    ಪ್ರೋತ್ಸಾಹಧನ ವಿತರಣೆ ಸಂಬಂಧ ಯಾವುದೇ ಖಚಿತ ಭರವಸೆ ದೊರೆಯದ ಕಾರಣ ಕಾರ್ಯಕರ್ತೆಯರು ಮುಷ್ಕರ ಮುಂದುವರಿಸಲಿದ್ದಾರೆ. ಕೆಲಸ ಮಾಡುವು ದಿಲ್ಲ ಎಂದು ಸಂಘಟನೆಯ ಗೌರವ ಅಧ್ಯಕ್ಷ ಗಂಗಾಧರ ಬಡಿಗೇರ ತಿಳಿಸಿದರು.

    ಜಿಲ್ಲಾ ಅಧ್ಯಕ್ಷೆ ಪದ್ಮಾ ಚಲವಾದಿ, ಜಿಲ್ಲಾ ಕಾರ್ಯದರ್ಶಿ ಸಂಗೀತಾ ಅಂಗ್ರೊಳ್ಳಿ, ಪದಾಧಿಕಾರಿಗಳಾದ ಕವಿತಾ ಗಾವಡಾ, ಪ್ರೇಮಾ ದಿಂಡವಾಡ, ಹಾಲಮ್ಮ ನಾಯಕ, ಕಸ್ತೂರಿ, ಅನ್ನಪೂರ್ಣ ನಾಯಕ, ಕಲ್ಪನಾ, ಜಯಶ್ರೀ ನಾಯಕ, ಮೋಹಿನಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts