More

    ಫೆ. 28ರಿಂದ ಜಿಲ್ಲಾ ಉತ್ಸವ

    ಚಿಕ್ಕಮಗಳೂರು: ಹಲವು ವರ್ಷಗಳ ಕನಸಿನ ಜಿಲ್ಲಾ ಉತ್ಸವ ಆಯೋಜನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. 20 ವರ್ಷಗಳ ನಂತರ ಜಿಲ್ಲಾ ಉತ್ಸವ ಆಯೋಜನೆಗೆ ನಿರ್ಧಾರ ಮಾಡಲಾಗಿದೆ.

    ದಿನಾಂಕವೂ ನಿಗದಿಯಾಗಿದ್ದು, ಫೆಬ್ರವರಿ 28ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಣೆ ಮಾಡಲು ನಿರ್ಧರಿಸಲಾಗಿದೆ.

    20 ವರ್ಷಗಳ ಬಳಿಕ ನಡೆಯುತ್ತಿರುವ ಈ ಉತ್ಸವ ಜಾನಪದ ವಿಶೇಷ, ಕ್ರೀಡೆ, ಸಾಂಸ್ಕೃತಿಕ ವೈಭವ, ಮಲೆನಾಡು ಆಹಾರ ಮೇಳ ಹಾಗೂ ಹೆಲಿಟೂರಿಸಂ ಒಳಗೊಂಡಿರಲಿದೆ ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ವಿಜಯವಾಣಿಗೆ ತಿಳಿಸಿದ್ದಾರೆ.

    ಏಪ್ರಿಲ್​ನಲ್ಲಿ ಶಿಲಾನ್ಯಾಸ: ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಹಾಗೂ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣಕ್ಕೆ ಏಪ್ರಿಲ್ ಒಳಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈಗಾಗಲೇ ಈ ಎರಡು ಕಟ್ಟಡಗಳಿಗೆ ಹಣ ಮೀಸಲಿಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ ಎಂದು ತಿಳಿಸಿದರು.

    ಕಳೆದ ಜುಲೈ ತಿಂಗಳಲ್ಲೇ ಭಾರತೀಯ ವೈದ್ಯಕೀಯ ಪರಿಷತ್ ಅನುಮೋದನೆ ಪಡೆದಿದ್ದರೆ ಈ ವರ್ಷದಿಂದಲೇ ತಾತ್ಕಾಲಿಕ ಕಟ್ಟಡದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬಹುದಿತ್ತು. ಈ ವರ್ಷವೇ ಆರಂಭಿಸಲು ವಿಶೇಷ ಅನುಮತಿ ನೀಡಲು ಕೋರಲಾಗಿದೆ. ಒಂದು ವೇಳೆ ಅನುಮತಿ ದೊರೆಯದಿದ್ದಲ್ಲಿ ಮುಂದಿನ ವರ್ಷ ಆರಂಭವಾಗುತ್ತದೆ. ಆ ವೇಳೆಗೆ ಕಾಲೇಜಿನ ಕಟ್ಟಡ ಸಹ ಒಂದು ಸ್ವರೂಪ ಪಡೆಯಲಿದೆ ಎಂದು ಹೇಳಿದರು.

    ಈ ವರ್ಷ ಜಿಲ್ಲೆಯಲ್ಲಿ ಕೆಲವು ಯೋಜನೆಗಳು ಕಾರ್ಯರೂಪಕ್ಕಿಳಿಯಲೇಬೇಕಿದೆ. ಗೋಂದಿ ಅಣೆಕಟ್ಟೆಯಿಂದ ಕಡೂರು, ತರೀಕೆರೆ ತಾಲೂಕುಗಳ ಹಾಗೂ ಚಿಕ್ಕಮಗಳೂರು ಬಯಲು ಭಾಗದ ಕೆರೆಗಳನ್ನು ತುಂಬಿಸುವ 1350 ಕೋಟಿ ರೂ. ಯೋಜನೆ ಆರಂಭಿಸುವುದು ಖಚಿತ ಎಂದು ತಿಳಿಸಿದರು.

    ರಸ್ತೆ ಡಾಂಬರೀಕರಣ ಆರಂಭ: ನಗರಕ್ಕೆ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡುವ ಅಮೃತ್ ಯೋಜನೆ ಮತ್ತು ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ನೀರಿನ ಪೂರೈಕೆಗೆ ಪೈಪ್ ಅಳವಡಿಸಿ ಮನೆಗಳಿಗೆ ಸಂಪರ್ಕ ಕಲ್ಪಿಸಲು ಕಾಮಗಾರಿ ನಡೆದಿರುವ ರಸ್ತೆಗಳ ಮರು ಡಾಂಬರೀಕರಣ ಕಾರ್ಯ ಆರಂಭವಾಗಿದೆ ಎಂದರು.

    ಕದ್ರಿಮಿದ್ರಿ ಆಗಲಿದೆ ವಿದ್ಯಾನಗರ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸ್ಥಳ ಪರಿಶೀಲನೆ ನಡೆದಿದ್ದು ವೈದ್ಯಕೀಯ ಕಾಲೇಜು ಆರಂಭವಾಗಲಿರುವ ಕದ್ರಿಮಿದ್ರಿಯಲ್ಲೇ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ಕೇಂದ್ರೀಯ ವಿದ್ಯಾಲಯ ಕೂಡ ಇಲ್ಲಿಗೇ ಸ್ಥಳಾಂತರಗೊಳ್ಳುವುದರಿಂದ ಈ ಪ್ರದೇಶ ಶೈಕ್ಷಣಿಕ ಕೇಂದ್ರಗಳನ್ನು ಹೊಂದಿದ ವಿದ್ಯಾನಗರವಾಗಲಿದೆ ಎಂದು ಸಿ.ಟಿ. ರವಿ ಹೇಳಿದರು.

    ಏರ್​ಸ್ಟ್ರಿಪ್​ಗೆ ಇನ್ನೂ 19 ಎಕರೆ ಭೂಸಾಧಿÌೕನವಾಗಬೇಕಿದ್ದು ನಗರ ಹೊರವಲಯದಲ್ಲಿ ಈ ವರ್ಷ ಏರ್​ಸ್ಟ್ರಿಪ್ ನಿರ್ವಣವಾಗುವುದು ಖಚಿತ. ಉಡಾನ್ ಯೋಜನೆಯಲ್ಲಿ ಮಿನಿ ವಿಮಾನ ನಿಲ್ದಾಣ ಆರಂಭಿಸಲಾಗುವುದು. ಈಗಾಗಲೇ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಲಘು ವಿಮಾನ ಹಾರಾಟ ವ್ಯವಸ್ಥೆ ಇರುವಂತೆ 25 ಮಂದಿ ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಲಘು ವಿಮಾನಗಳು ಬೆಂಗಳೂರು-ಚಿಕ್ಕಮಗಳೂರು ಹಾಗೂ ಮಂಗಳೂರು ನಡುವೆ ಹಾರಾಡುವಂತೆ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts