More

    ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ಧರಾಗಿರಿ

    ಗದಗ: ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಾದರೂ ಪ್ರವಾಹ ಪರಿಸ್ಥಿತಿ ಎದುರಾಗಬಹುದು. ಪ್ರವಾಹ ಹಾಗೂ ಅತಿವೃಷ್ಟಿ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಮಾಡಿಟ್ಟುಕೊಳ್ಳಬೇಕು. ಅತಿವೃಷ್ಟಿ ನಿರ್ವಹಣೆಯಲ್ಲಿ ಅಧಿಕಾರಿಗಳು ಯದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರವಾಹ ಪರಿಸ್ಥಿತಿ, ಬೆಳೆಹಾನಿ, ಸ್ವಾತಂತ್ರೋತ್ಸವ ಅಮೃತ ಮಹೋತ್ಸವ, ಹರ್ ಘರ್ ತಿರಂಗಾ ಕಾರ್ಯಕ್ರಮ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ ಹಾಗೂ ಮನೆ ಬೆಳೆ ಹಾನಿ ಕುರಿತು ಅಧಿಕಾರಿಗಳಿಂದ ಅಂಕಿ-ಅಂಶಗಳ ಮಾಹಿತಿ ಪಡೆದ ಸಚಿವರು, ಪ್ರವಾಹ ಪರಿಸ್ಥಿತಿ ಉಂಟಾದರೆ ಯದ್ಧೋಪಾದಿಯಲ್ಲಿ ನಿರ್ವಹಿಸಬೇಕು. ಜನ-ಜಾನುವಾರು ಜೀವ ಹಾನಿ ಆಗದಂತೆ ಮುಂಜಾಗ್ರತೆ ವಹಿಸಬೇಕು. ಅಲ್ಲದೆ, ಮನೆ ಹಾಗೂ ಬೆಳೆ ಹಾನಿ ಕುರಿತು ನಿಖರ ಸಮೀಕ್ಷೆ ಕೈಗೊಳ್ಳುವ ಮೂಲಕ ಸರ್ಕಾರದಿಂದ ನಿಗದಿಪಡಿಸಲಾದ ಪರಿಹಾರ ತಲುಪಿಸಲು ಶ್ರಮಿಸುವಂತೆ ತಿಳಿಸಿದರು.

    ಬೆಳೆಹಾನಿ ಶೇ.33ಕ್ಕಿಂತ ಅಧಿಕವಾದಲ್ಲಿ ಸರ್ಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಒದಗಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಮನೆ ಹಾನಿ ಸಮೀಕ್ಷೆ ಕೈಗೊಳ್ಳುವಲ್ಲಿ ಮಾನವೀಯತೆ ದೃಷ್ಟಿಯಿಂದ ನಿಯಮಾನುಸಾರ ಪರಿಹಾರ ದೊರಕಿಸಿಕೊಡಲು ಅಧಿಕಾರಿಗಳು ಕಾರ್ಯ ಪ್ರವತ್ತರಾಗಬೇಕು ಎಂದರು.

    ನಿರಂತರ ಮಳೆಯಿಂದಾಗಿ ಗದಗ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಗುಂಡಿ ಮುಚ್ಚುವ ತಾತ್ಕಾಲಿಕ ಕಾರ್ಯ ಶೀಘ್ರವಾಗಿ ಕೈಗೊಳ್ಳಲು ಲೋಕೊಪಯೋಗಿ, ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು. ನಂತರದ ದಿನಗಳಲ್ಲಿ ಶಾಶ್ವತ ರಸ್ತೆ, ಚರಂಡಿ ನಿರ್ವಣಕ್ಕೆ ಮುಂದಾಗುವಂತೆ ಹೇಳಿದರು.

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್ 13 ರಿಂದ 15ರವರೆಗೆ ಕೈಗೊಳ್ಳಲಾಗುತ್ತಿದೆ. ಈ ಅಭಿಯಾನದ ಯಶಸ್ಸಿಗೆ ಜಿಲ್ಲೆಯ ಅಧಿಕಾರಿಗಳು, ಸಾರ್ವಜನಿಕರು ಕೈಗೂಡಿಸಬೇಕು. ಆ.13ರ ಬೆಳಗ್ಗೆ 8 ಗಂಟೆಯಿಂದ ಆ.15ರ ಸಂಜೆ 6 ಗಂಟೆಯವರೆಗೆ ಜಿಲ್ಲೆಯ ಎಲ್ಲ ಮನೆಗಳ ಮೇಲೆ ಹಗಲೂ-ರಾತ್ರಿ ರಾಷ್ಟ್ರ ಧ್ವಜ ರಾರಾಜಿಸಬೇಕು. ಈ ಮೂಲಕ ಸಾರ್ವಜನಿಕರೆಲ್ಲರೂ ರಾಷ್ಟ್ರಾಭಿಮಾನ ಹೊರಹೊಮ್ಮಿಸಬೇಕು ಎಂದರು. ಸರ್ಕಾರಿ ಕಟ್ಟಡಗಳಲ್ಲಿ ಆಗಸ್ಟ್ 13 ರಿಂದ 15ರವರೆಗೆ ಸೂರ್ಯೋದಯದಿಂದ ಸೂಯಾಸ್ತದವರೆಗೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮಾತನಾಡಿ, ಜಿಲ್ಲೆಯಲ್ಲಿ ಜುಲೈನಲ್ಲಿ ಸರಾಸರಿಗಿಂತ ಶೇ. 82 ರಷ್ಟು ಅಧಿಕ ಮಳೆಯಾಗಿದೆ. ಇದರಿಂದಾದ ಹಾನಿ ಪ್ರಮಾಣ ಹಾಗೂ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಅತಿವೃಷ್ಟಿ ನಿರ್ವಹಣೆಗಾಗಿ ಅಗತ್ಯ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ಹಾಗೂ ಗೋಶಾಲೆಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ. ಜೂನ್ 1 ರಿಂದ ಈವರೆಗೆ ಜಿಲ್ಲೆಯಲ್ಲಿ 1ಮಾನವ ಜೀವಹಾನಿ, 2 ಜಾನುವಾರು ಜೀವ ಹಾನಿಯಾಗಿದ್ದು ಪರಿಹಾರ ವಿತರಿಸಲಾಗಿದೆ ಎಂದರು.

    ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ಶೇ. 97 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮಳೆಯಿಂದಾಗಿ 93,912 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಇದರಲ್ಲಿ 76,672 ಹೆ. ಪ್ರದೇಶದಲ್ಲಿ ಹೆಸರು, 13,821 ಹೆ. ಪ್ರದೇಶದ ಮೆಕ್ಕೆ ಜೋಳ, 1149 ಹೆ. ಪ್ರದೇಶದಲ್ಲಿ ಶೇಂಗಾ ಹಾಗೂ 785 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ರಸ್ತೆ ಗುಂಡಿ ಮುಚ್ಚಿ: ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಹಾಗೂ ಚರಂಡಿ ದುರಸ್ತಿಗೆ ಶೀಘ್ರ ಮುಂದಾಗಬೇಕು. ಬೆಳೆ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ಕೈಗೊಂಡು ಹೆಸರು ಬೆಳೆಹಾನಿಗೆ ವಿಶೇಷ ಪರಿಹಾರ ಘೊಷಿಸಬೇಕು. ಹಾಗೂ ಮಣ್ಣಿನ ಮನೆಗಳಿಗೆ ಹಾನಿಯಾದಲ್ಲಿ ಪೂರ್ಣ ಪ್ರಮಾಣದ ಹಾನಿ ಎಂದು ಪರಿಗಣಿಸಿ ಸಂಪೂರ್ಣ ಮನೆ ನಿರ್ವಣಕ್ಕೆ ಪರಿಹಾರ ಒದಗಿಸಲು ಪರಿಗಣಿಸುವಂತೆ ಸಚಿವರಲ್ಲಿ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts