More

    ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

    ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

    ಎಲ್ಲ ಕಡೆಯೂ ಪೊಲೀಸರ ಬಿಗಿ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಫ್ತಿಯಲ್ಲಿರುವ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಲು ತರಬೇತಿ ಪಡೆದ ಮೂವರು ಅಥವಾ ನಾಲ್ವರಿರುವ 25 ಪೊಲೀಸರ ವಿಶೇಷ ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ. ಅವು ನಿರ್ದಿಷ್ಟ ಸಮಯದಲ್ಲಿ ತಮ್ಮ ಜವಾಬ್ದಾರಿಯಲ್ಲಿರುವ ಪ್ರದೇಶಗಳಿಗೆ ವಿದ್ಯುನ್ಮಾನ ವಸ್ತುಗಳನ್ನು ಪತ್ತೆ ಹಚ್ಚುವ ಎನ್​ಎಲ್​ಜೆಡಿ ಉಪಕರಣಗಳ ಸಹಿತ ಭೇಟಿ ನೀಡುತ್ತಿರುತ್ತವೆ.

    ಬಸ್ ನಿಲ್ದಾಣಗಳಲ್ಲಿ ಸಹ ಪ್ರತಿನಿತ್ಯ ನಿಗಾ ವಹಿಸುವ ಪೊಲೀಸರ ಜತೆಗೆ ಮಫ್ತಿಯಲ್ಲಿರುವ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ತಕ್ಷಣ ಕಾರ್ಯೋನ್ಮುಖರಾಗುವಂತೆ ನಿರ್ದೇಶನ ನೀಡಲಾಗಿದೆ. ಯಾವುದೇ ವಿಧ್ವಂಸಕ ಕೃತ್ಯಗಳು ಸಂಭವಿಸಿದಲ್ಲಿ ಕೇವಲ ಎರಡೇ ನಿಮಿಷದಲ್ಲಿ ಆ ಸ್ಥಳ ತಲುಪಲು ಅಣಿಯಾಗಿರುತ್ತವೆ. ಅಗತ್ಯ ಬಿದ್ದಲ್ಲಿ ನಕ್ಸಲ್ ನಿಗ್ರಹ ದಳದ ನೆರವನ್ನೂ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.

    ಎಷ್ಟೇ ರಕ್ಷಣೆ ಅಥವಾ ಕಟ್ಟೆಚ್ಚರ ವಹಿಸುವುದು ಸಹಜವಾಗಿದ್ದರೂ ವಿಧ್ವಂಸಕ ಕೃತ್ಯ ತಡೆಯಲು ಅತ್ಯಂತ ಅಗತ್ಯವಿರುವ ಸಂಗತಿ ಎಂದರೆ ಗುಪ್ತಚರ ಮಾಹಿತಿ. ಈ ಹಿನ್ನೆಲೆಯಲ್ಲಿ ಇಲ್ಲಿರುವ ಪೊಲೀಸ್ ಸಿಬ್ಬಂದಿಗೆ ಮಾಹಿತಿ ಸಂಗ್ರಹಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಈ ರೀತಿ 25 ತಂಡಗಳನ್ನು ಸಿದ್ಧಪಡಿಸಲಾಗಿದೆ. ವಿಧ್ವಂಸಕ ಕೃತ್ಯಕ್ಕೂ ಮುನ್ನ ಅಂಥವುಗಳಿಗೆ ಪ್ರೇರಣೆ ನೀಡುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕಾಗಿರುವುದು ಅಗತ್ಯ. ಈ ಕಾರಣಕ್ಕಾಗಿಯೇ ಗುಪ್ತದಳದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅದಕ್ಕೆ ಪೂರಕ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

    ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಾಕಷ್ಟು ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಪೂರಕವಾದ ಮಾಹಿತಿಗಳು ಬಿತ್ತರಗೊಳ್ಳುವ ಸಾಧ್ಯತೆ ಇದ್ದು, ಅವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಶ್ಲೇಷಿಸುವ ಬಗ್ಗೆ ಕೂಡ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಅನೇಕ ಬಾರಿ ಈ ಮೂಲಗಳಿಂದ ಸಹ ಸುಳಿವು ದೊರೆಯುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಮುಂದಾಲೋಚನೆ ಮಾಡಿದೆ.

    ಇನ್ನೂ ಬೇಕು 400 ಸಿಸಿ ಕ್ಯಾಮರಾ: ಜಿಲ್ಲೆ ಮಟ್ಟಿಗೆ ಇನ್ನಷ್ಟು ಕಣ್ಗಾವಲು ವೃದ್ಧಿಪಡಿಸುವ ಸಲುವಾಗಿ ಕನಿಷ್ಠ 400 ಆಧುನಿಕ ತಂತ್ರಜ್ಞಾನದ ಸಿಸಿ ಕ್ಯಾಮರಾದ ಅವಶ್ಯಕತೆ ಇದೆ. ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ 300ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲೆಯೊಳಗೆ ಬೇರೆ ಬೇರೆ ಕಡೆಗಳಿಗೆ ಸಾಗುವ ಮಾರ್ಗದ ಕೂಡುರಸ್ತೆಗಳಿದ್ದು, ಅಂತಹ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಅಗತ್ಯವಾಗಿದೆ. ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಇನ್ನಷ್ಟು ಸಿಸಿ ಕ್ಯಾಮರಾ ಅಳವಡಿಸಬೇಕಾದ ಅನಿವಾರ್ಯತೆ ಇದೆ ಎನ್ನುವುದು ಗಮನಾರ್ಹ.

    ಗಸ್ತು ವ್ಯವಸ್ಥೆಯಲ್ಲಿ ಇನ್ನಷ್ಟು ಹೆಚ್ಚಳ: 5 ರಿಂದ 6 ಗಸ್ತು ವ್ಯವಸ್ಥೆ ಇದ್ದುದನ್ನು 12ಕ್ಕೆ ಏರಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗಿದೆ. ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇತ್ತೀಚೆಗೆ ನಡೆದ ಪ್ರತಿಭಟನೆ ಹಿಂದಿನ ರಾತ್ರಿ ನಾಲ್ಕು ಬೈಕ್​ಗಳನ್ನು ಸುಟ್ಟ ಪ್ರಕರಣದ ಬಳಿಕ ನಗರದಲ್ಲಿ ರಾತ್ರಿ ಗಸ್ತು ಹೆಚ್ಚು ಮಾಡಲಾಗಿದ್ದು, ಅದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮುಂದುವರಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಓರ್ವ ದಫೇದಾರ್ ಹಾಗೂ ಪೇದೆ ಸದಾ ಸಂಚಾರದಲ್ಲಿರಲಿದ್ದು, ಈ ತಂಡಕ್ಕೆ ವಹಿಸಿರುವ ನಿರ್ದಿಷ್ಟ ಪ್ರದೇಶದಲ್ಲಿ ಗಸ್ತು ಜವಾಬ್ದಾರಿ ನೀಡಲಾಗಿದೆ. ಇ-ಬೀಟ್ ವ್ಯವಸ್ಥೆ ಕೂಡ ಜಾರಿಯಲ್ಲಿದೆ. ನಾಲ್ಕು ತನಿಖಾ ಠಾಣೆಗಳು ರಾತ್ರಿ ವೇಳೆ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾದ್ಯಂತ ಗಸ್ತು ವ್ಯವಸ್ಥೆ ದ್ವಿಗುಣ ಮಾಡಿ ಬಲಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts