More

    ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ

    ಹನೂರು: ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರೋಟಿನ್‌ಯುಕ್ತ ಆಹಾರ ಸೇವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಸಲಹೆ ನೀಡಿದರು.


    ತಾಲೂಕಿನ ಮಲೆಮಹದೇಶ್ವರಬೆಟ್ಟ ಸಮೀಪದ ಆನೆಹೊಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಇತ್ತೀಚಿನ ದಿನಗಳಲ್ಲಿ ಪೌಷ್ಟಿಕ ಆಹಾರ ಸೇವನೆ ಕೊರತೆಯಿಂದ ಮನುಷ್ಯ ಒಂದಲ್ಲ ಒಂದು ರೋಗರುಜಿನಗಳಿಗೆ ತುತ್ತಾಗುತ್ತಿದ್ದು, ತುಂಬ ತೊಂದರೆಗೆ ಒಳಗಾಗುತ್ತಿದ್ದಾನೆ. ಜತೆಗೆ ಜನಿಸುವ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ ವಿಟಮಿನ್ ಹಾಗೂ ಪ್ರೋಟಿನ್‌ಯುಕ್ತ ಆಹಾರ ಸೇವನೆ ಅಗತ್ಯವಾಗಿದೆ. ಆರೋಗ್ಯಕರ ಆಹಾರವು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸುವುದರ ಮೂಲಕ ದೀರ್ಘಕಾಲದ ಕಾಯಿಲೆಗಳಿಂದ ದೂರವಿಡುವಂತೆ ಮಾಡುತ್ತದೆ. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜತೆಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸೆ.1ರಿಂದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.


    ಬಾಲ್ಯವಿವಾಹ ತಡೆಗಟ್ಟಬೇಕು: ಬಾಲ್ಯ ವಿವಾಹ ಒಂದು ದೊಡ್ಡ ಪಿಡುಗಾಗಿದ್ದು, ಕಾನೂನಿನ ಅಪರಾಧವಾಗಿದೆ. ತಪ್ಪಿತಸ್ಥರು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಆದರೂ ಇಂದಿನ ಆಧುನಿಕ ಯುಗದಲ್ಲೂ ಹಳ್ಳಿಗಳಲ್ಲಿ ಜನರು ಮೌಢ್ಯ ಹಾಗೂ ಸಂಪ್ರದಾಯಕ್ಕೆ ಮಾರುಹೋಗಿ ಬಾಲ್ಯ ವಿವಾಹವನ್ನು ನೆರವೇರಿಸುತ್ತಿರುವುದು ವಿಪರ್ಯಾಸ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯಾಗುವ ಹೆಣ್ಣು ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ತುಂಬ ತೊಂದರೆಗೆ ಒಳಗಾಗಬೇಕಾಗುತ್ತದೆ. ಜತೆಗೆ ಜನಿಸುವ ಮಗುವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಬಾಲ್ಯ ವಿವಾಹವನ್ನು ತಡೆಗಟ್ಟುವುದು ಅಗತ್ಯವಾಗಿದೆ. ಈ ಕೆಲಸ ನ್ಯಾಯಾಲಯದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಹಾಗೆಯೇ ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಕಿರುಕುಳದಿಂದ ತಡೆಗಟ್ಟಲು ಪೋಕ್ಸೊ ಕಾಯ್ದೆ ಜಾರಿಯಲ್ಲಿದ್ದು, ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದರೆ ಕೆಲ ಯುವಕ, ಯುವತಿಯರು ಪ್ರೀತಿ, ಪ್ರೇಮದ ವ್ಯಾಮೋಹಕ್ಕೆ ಒಳಗಾಗಿ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಪ್ರಜ್ಞೆ ಹಾಗೂ ಕಾನೂನಿನ ಅರಿವನ್ನು ಹೊಂದುವುದರ ಮೂಲಕ ಸಂವಿಧಾನದ ನೀತಿ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕು. ಹಾಗೆಯೇ ಮಾದಕ ವ್ಯಸನ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಹಾಗಾಗಿ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.


    ಅಪರ ಸಿವಿಲ್ ನ್ಯಾಯಾಧೀಶ ಸಿ.ಜೆ. ರಘು ಮಾತನಾಡಿ, ಸಾಮಾನ್ಯ ಜ್ಞಾನ ಎಲ್ಲರಲ್ಲೂ ಇರುತ್ತದೆ. ಆದರೆ ಕಾನೂನಿನ ಅರಿವು ಬಹುತೇಕ ಜನರಿಗೆ ತಿಳಿದಿರುವುದೇ ಇಲ್ಲ. ಇದರಿಂದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಈ ದಿಸೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ವಕೀಲ ನಂದಕುಮಾರ್, ಮುಖ್ಯ ಶಿಕ್ಷಕ ಅಶೋಕ್, ಪಿಡಿಒ ಕಿರಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts