More

    ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸಲು ಒತ್ತಾಯ

    ದಾವಣಗೆರೆ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್ 4) ಒತ್ತಾಯಿಸಿದೆ. ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಿದರು.

    ದೇಶದ ಜನರ ಕಲ್ಯಾಣೋನ್ನತಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸರ್ವರಿಗೂ ಸಮಪಾಲು, ಸಮಬಾಳು ನೀಡಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಆದರೆ ಆ ಆಶಯಕ್ಕೆ ವಿರುದ್ಧವಾದ ನೀತಿಗಳನ್ನು ಸರ್ಕಾರಗಳು ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿರುವುದನ್ನು ತಡೆಯಲು ಕಠಿಣ ಕಾನೂನು ಕ್ರಮ ಏಕೆ ತೆಗೆದುಕೊಂಡಿಲ್ಲ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ. ಭಾರತೀಯರೆಲ್ಲರಿಗೂ ಸಮಾನ ಅವಕಾಶಕ್ಕಾಗಿ ವಿದ್ಯೆ, ಭೂಮಿ, ಆರೋಗ್ಯ ಸೇವೆಯನ್ನು ರಾಷ್ಟ್ರೀಕರಣ ಮಾಡಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಒಳಗೊಂಡ ರಾಷ್ಟ್ರೀಯ ಜನಗಣತಿಯನ್ನು ಮಾಡಿಸಬೇಕು ಎಂದು ಆಗ್ರಹಿಸಿದರು.
    ಎಡ, ಬಲ ಪಂಥೀಯ ಸಿದ್ಧಾಂತಗಳೆನ್ನದೆ ಮಾನವೀಯ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಪ್ರಬುದ್ಧ ಭಾರತ ನಿರ್ಮಿಸಬೇಕು. ಸರ್ವಧರ್ಮ ಸಮನ್ವಯತೆಯ ಜಾತ್ಯತೀತ ತತ್ವಕ್ಕೆ ಮನ್ನಣೆ ನೀಡಬೇಕು. ದೇಶದ ರೈತರ, ದುಡಿಯುವ ಜನರ, ಮಹಿಳೆಯರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.

    ಕೇಂದ್ರದ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವ ರಾಷ್ಟ್ರೀಯ ಎಸ್.ಸಿ. ಮತ್ತು ಎಸ್.ಟಿ. ಉಪಯೋಜನಾ ಕಾಯ್ದೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
    ಭಾರತದ ಕೃಷಿ ವಲಯವನ್ನು ಉದ್ಯಮವನ್ನಾಗಿ ಘೋಷಿಸಬೆಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿ ಸುವ್ಯವಸ್ಥಿತ ಕೃಷಿ ಮಾರುಕಟ್ಟೆ ವ್ಯವಸ್ಥೆಗೊಳಿಸಬೇಕು.
    ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರಗಳಂಥ ದೌರ್ಜನ್ಯಗಳನ್ನು ತಡೆಯಲು ಪ್ರಸ್ತುತ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ 2014 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
    ಸಂಘಟನೆಯ ಮುಖಂಡರಾದ ಹೆಗ್ಗೆರೆ ರಂಗಪ್ಪ, ಸಂತೋಷ್ ನೋಟದವರ್, ಎಸ್.ಎಚ್. ಶಾಂತ್‌ರಾಜ್, ಕೆ.ಸಿ. ಮೂರ್ತಿ, ಎಲ್. ಜಯಪ್ಪ, ಕಬ್ಬಳ್ಳಿ ಬಸವರಾಜ್, ನಟರಾಜ್, ವಿನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts