More

    ಪೊಲೀಸರ ನಿಸ್ವಾರ್ಥ ಸೇವೆ ಸ್ಮರಣೀಯ: ಜಿಲ್ಲಾಧಿಕಾರಿ ಸೆಲ್ವಮಣಿ

    ಶಿವಮೊಗ್ಗ: ನಮ್ಮ ಸಮಾಜದ ಒಳಿತಿಗಾಗಿ ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿದು ಸಮಾಜದಲ್ಲಿ ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸರ ಕಾರ್ಯದಕ್ಷತೆ, ಪ್ರಾಮಾಣಿಕತೆ, ಕಾಯಕ ನಿಷ್ಠೆ ಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

    ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ತಮ್ಮ ಖಾಸಗಿ ಬದುಕನ್ನು ನಿರ್ಲಕ್ಷಿಸಿ, ಹಬ್ಬ-ಹರಿದಿನಗಳಲ್ಲೂ ದಿನವಿಡೀ ಕಾರ್ಯನಿರ್ವಹಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹವಾದುದು ಎಂದರು.
    ವ್ಯವಸ್ಥೆಯ ಯಾವುದೇ ಕ್ಷೇತ್ರದಲ್ಲಿ ನೆಮ್ಮದಿಯ ಜೀವನ ನಡೆಸುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ. ದುಷ್ಟ, ಮಾನವೀಯತೆ ಮರೆತ ಮನುಷ್ಯರಿಂದ ತುಂಬಿದ ಇಂದಿನ ಸಮಾಜದಲ್ಲಿ ಹಣ, ಆಸ್ತಿಗಾಗಿ ಹಪಾಹಪಿಸುವ ಜನರನ್ನು ಮಟ್ಟಹಾಕುವಲ್ಲಿ, ಅವರನ್ನು ನಿಯಂತ್ರಿಸಿ ಸರಿದಾರಿಗೆ ಕೊಂಡೊಯ್ಯುವಲ್ಲಿ, ಅನ್ಯಾಯ, ಅಧರ್ಮ, ಕೊಲೆ-ಸುಲಿಗೆಯಂತಹ ಅಪರಾಧ ಕೃತ್ಯಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಕಾರ್ಯ ಮಹತ್ವದ್ದಾಗಿದೆ ಎಂದರು.
    ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿದರು. ಕಳೆದ ಸಾಲಿನಲ್ಲಿ ಕರ್ತವ್ಯದಲ್ಲಿ ನಿರತರಾಗಿ ಹುತಾತ್ಮರಾದ ರಾಷ್ಟ್ರದ 189 ಮತ್ತು ರಾಜ್ಯದ 16 ಪೊಲೀಸ್ ಸಿಬ್ಬಂದಿಯ ಪಟ್ಟಿ ವಾಚಿಸಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಕರ್ತವ್ಯನಿರತ ಅಸಂಖ್ಯಾತ ಪೊಲೀಸ್ ಸಿಬ್ಬಂದಿ ನಮ್ಮನ್ನು ಬದುಕಿಸಿ, ತಮ್ಮ ಪ್ರಾಣ ಸಮರ್ಪಣೆ ಮಾಡಿದ್ದಾರೆ. ಇಂತಹ ಹೃದಯವಂತಿಕೆ, ಧೈರ್ಯ, ಎದೆಗಾರಿಕೆ ಪ್ರದರ್ಶಿಸುವ ಪೊಲೀಸ್ ಇಲಾಖೆಯ ಸಿಬ್ಬಂದಿ ಸದಾ ಅಭಿನಂದನಾರ್ಹರು ಎಂದರು.
    ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮ ಪೊಲೀಸರ ಸ್ಮರಣಾರ್ಥ ಗಣ್ಯರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಮೂರು ಬಾರಿ ಕುಶಾಲ ತೋಪು ಹಾರಿಸಿ, ಪೊಲೀಸ್ ಬ್ಯಾಂಡ್‌ನೊಂದಿಗೆ ಗೌರವ ಸಲ್ಲಿಸಲಾಯಿತು. ಎಎಸ್ಪಿ ಅನಿಲ್ ಭೂಮರೆಡ್ಡಿ ಸೇರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ-ಸಿಬ್ಬಂದಿ, ಅವರ ಕುಟುಂಬದ ಅವಲಂಬಿತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts