More

    ಪೊಲೀಸರಿಗೆ ವಿದೇಶಿ ತಜ್ಞರಿಂದ ತರಬೇತಿ

    ಹಾವೇರಿ: ಮುಂಬರುವ ದಿನಗಳಲ್ಲಿ ಪೊಲೀಸರಿಗೆ ವಿದೇಶಿ ತಜ್ಞರಿಂದ ತರಬೇತಿ ನೀಡಲು ಅವಕಾಶ ಕಲ್ಪಿಸುವ ಚಿಂತನೆಯಿದೆ ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆರೆಮತ್ತಿಹಳ್ಳಿಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೖೆಂ ಹೆಚ್ಚುತ್ತಿದ್ದು, ಇವುಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪ್ರತಿ ಕಾನ್​ಸ್ಟೇಬಲ್​ಗಳಿಗೂ ಆಧುನಿಕ ತಂತ್ರಜ್ಞಾನದ ತರಬೇತಿ ನೀಡಲು ಪಠ್ಯಕ್ರಮ ಹಾಗೂ ತರಬೇತುದಾರರನ್ನು ಸಿದ್ಧಪಡಿಸಲಾಗುತ್ತಿದೆ. ಸರ್ವಿಸ್​ನಲ್ಲಿರುವ ಪೊಲೀಸರಿಗೆ ಐದು ವರ್ಷಕ್ಕೊಮ್ಮೆ ತರಬೇತಿ ಕೊಡಿಸಲಾಗುವುದು ಎಂದರು.

    ಮುಂದಿನ ಹಣಕಾಸು ವರ್ಷದಲ್ಲಿ್ಲ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಗಳನ್ನು ಪರಿಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲು ತೀರ್ವನಿಸಲಾಗಿದೆ. ಈ ಶಾಲೆಗಳಲ್ಲಿ ಕಾಲೇಜ್​ನಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ, ಕರಾಟೆ ಹಾಗೂ ಇತರ ಮಹಿಳೆಯರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಒಂದರಿಂದ ಎರಡು ತಿಂಗಳವರೆಗೆ ವಿಶೇಷ ತರಬೇತಿ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಅವರಿಗೆ ಆತ್ಮಸ್ಥೈರ್ಯ ತುಂಬಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

    99 ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ನಡೆದ ನಿರ್ಗಮನ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು. ತೆರೆದ ಜೀಪಿನಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಪಥಸಂಚಲನ ತಂಡದ ಪರಿವೀಕ್ಷಣೆ ಮಾಡಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ ವರದಾಪಡೆ ಎಂಬ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು. ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಶಾಸಕ ವಿರೂಪಾಕ್ಷಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜಿ.ಪಂ. ಸದಸ್ಯ ಸಿದ್ದರಾಜ ಕಲಕೋಟಿ ಇತರರಿದ್ದರು. ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ವರದಿ ವಾಚಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಎಸ್​ಪಿ ಕೆ.ಜಿ. ದೇವರಾಜ್ ಸ್ವಾಗತಿಸಿದರು. ಡಿವೈಎಸ್​ಪಿ ವಿಜಯಕುಮಾರ ವಂದಿಸಿದರು.

    ಸವೋತ್ತಮ ಪ್ರಶಸ್ತಿ ಪಡೆದ ಮಾಸಪ್ಪ…

    ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ 10 ತಿಂಗಳ ತರಬೇತಿ ಅವಧಿಯಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಪ್ರಶಿಕ್ಷಣಾರ್ಥಿ ಬೆಂಗಳೂರು ಜಿಲ್ಲೆಯ ಮಾಸಪ್ಪ ಎಸ್. ಅವರಿಗೆ ಸಚಿವ ಬಸವರಾಜ ಬೊಮ್ಮಾಯಿ ಸವೋತ್ತಮ ಪ್ರಶಸ್ತಿ ಪ್ರದಾನ ಮಾಡಿದರು.ಒಳಾಂಗಣ, ಹೊರಾಂಗಣ ಹಾಗೂ ಫೈರಿಂಗ್ ಪರೀಕ್ಷೆಯಲ್ಲಿ 11 ಪ್ರಶಿಕ್ಷಣಾರ್ಥಿಗಳು ವಿಜೇತರಾಗಿದ್ದಾರೆ. ಒಳಾಂಗಣ ಪರೀಕ್ಷೆಯಲ್ಲಿ ಬಳ್ಳಾರಿಯ ಆರ್. ಶಿವರಾಜಕುಮಾರ ಪ್ರಥಮ, ಕುರುಬರ ನಾಗರಾಜ ದ್ವಿತೀಯ, ಬೆಂಗಳೂರಿನ ಡೊಂಗ್ರೀಸಾಬ್ ಗೋರೆಖಾನ ತೃತೀಯ ಸ್ಥಾನ ಪಡೆದಿದ್ದಾರೆ. ಹೊರಾಂಗಣ ಪರೀಕ್ಷೆಯಲ್ಲಿ ಬೆಂಗಳೂರಿನ ಮಾಸಪ್ಪ ಎಸ್. ಪ್ರಥಮ, ಬಳ್ಳಾರಿಯ ಕೆ.ಆರ್. ಉಮಾಕಾಂತ ದ್ವಿತೀಯ, ಬೆಂಗಳೂರಿನ ಅಲ್ಲಯ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಫೈರಿಂಗ್ ಪರೀಕ್ಷೆಯಲ್ಲಿ ಬೆಂಗಳೂರಿನ ಪರಸಪ್ಪ ಅಡವಿ ಪ್ರಥಮ, ಮೈಸೂರಿನ ಕೃಷ್ಣಮೂರ್ತಿ ಬಿ.ಟಿ. ದ್ವಿತೀಯ, ಬಳ್ಳಾರಿಯ ಟಿ. ಮಲ್ಲಿಕಾರ್ಜುನ, ಬೆಂಗಳೂರಿನ ವಿರೇಶ ಬಡಿಗೇರ ತೃತೀಯ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts