More

    ಪದವಿ ತೋರಿಸಿ ಪತರಗುಟ್ಟಿಸುವ ಶುಶ್ರೂಷಕರು



    ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್್ಸ)ಯಲ್ಲಿ ಶುಶ್ರೂಷಕರಾಗಿ ಸೇರಿ, ಪ್ರತಿನಿಯೋಜನೆ ಮೇಲೆ ನರ್ಸಿಂಗ್ ಕಾಲೇಜ್​ನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಕೆಲವರು, ಆಸ್ಪತ್ರೆಯಲ್ಲೂ ಸ್ವಲ್ಪ ಸೇವೆ ಸಲ್ಲಿಸಲು ಸೂಚಿಸಿದರೆ ರಾಜಕೀಯ ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.

    ಆಸ್ಪತ್ರೆಯಲ್ಲಿ ಶುಶ್ರೂಷಕರ ಕೊರತೆ ಹಿನ್ನೆಲೆಯಲ್ಲಿ, ವಾರದಲ್ಲಿ 3 ದಿನ ಮೂಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ಎಂದು ಈ ಹಿಂದೆ ಕಿಮ್್ಸ ನಿರ್ದೇಶಕರು ಆದೇಶಿಸಿದ್ದರು. ಆದರೆ, ತಾವು ನರ್ಸಿಂಗ್​ನಲ್ಲಿ ಎಂಎಸ್​ಸಿ ಪದವಿ ಪಡೆದಿದ್ದೇವೆ, ಹಾಗಾಗಿಯೇ ನರ್ಸಿಂಗ್ ಕಾಲೇಜ್ ಉಪನ್ಯಾಸಕ ಹುದ್ದೆಗೆ ಪ್ರತಿನಿಯೋಜನೆ ಪಡೆದಿದ್ದೇವೆ, ಈಗ ಮತ್ತೆ ಶುಶ್ರೂಷಕರಾಗಿ ಕೆಲಸ ಮಾಡುವುದೇ ಎನ್ನುವ ಪ್ರಶ್ನೆ ಮುಂದಿಟ್ಟುಕೊಂಡು ಶುಶ್ರೂಷಕರು ಮೂಲ ಹುದ್ದೆಯ ಸೇವೆಗೆ ಬರಲು ಸಿದ್ಧರಿರಲಿಲ್ಲ. ನಿರ್ದೇಶಕರಿಗೆ ರಾಜಕಾರಣಿಗಳು, ಪ್ರಮುಖ ಜನಪ್ರತಿನಿಧಿಗಳಿಂದ ಫೋನ್ ಮಾಡಿಸಿ, ಪೂರ್ಣಾವಧಿಯಾಗಿ ನರ್ಸಿಂಗ್ ಕಾಲೇಜ್​ನಲ್ಲೇ ಮುಂದುವರಿದಿದ್ದರು.

    ಕಿಮ್ಸ್​ನಲ್ಲಿ ನೇರ ನೇಮಕ, ಗುತ್ತಿಗೆ ಆಧಾರ, ಹೈದರಾಬಾದ್ ಕರ್ನಾಟಕ ಮೀಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಗೊಂಡ ಅಂದಾಜು ಮೂರು ನೂರಕ್ಕೂ ಹೆಚ್ಚು ಶುಶ್ರೂಷಕರು ಇದ್ದಾರೆ. ಸೂಪರ್ ಸ್ಪೆಷಾಲಿಟಿ ಆಗಿರುವುದರಿಂದ ಇನ್ನೂ 450 ಶುಶ್ರೂಷಕರ ಅಗತ್ಯವಿದೆ. ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಪ್ರಕಾರ ಐಸಿಯುನಲ್ಲಿ ಒಬ್ಬ ರೋಗಿಗೆ ಒಬ್ಬ ಶುಶ್ರೂಷಕರು, ಸಾಮಾನ್ಯ ವಾರ್ಡ್​ನಲ್ಲಿ 10 ರೋಗಿಗಳಿಗೆ ಒಬ್ಬ ಶುಶ್ರೂಷಕರು ಇರಬೇಕೆಂಬ ನಿಯಮವಿದೆ. ಆದರೆ, ಶುಶ್ರೂಷಕರ ಕೊರತೆ ಇದೆ.

    ಈ ಹಿನ್ನೆಲೆಯಲ್ಲಿ, ಪ್ರತಿನಿಯೋಜನೆ ಮೇಲೆ ನರ್ಸಿಂಗ್ ಕಾಲೇಜ್ ಉಪನ್ಯಾಸಕರಾಗಿರುವ ಸುಮಿತ್ರಾ ಅವ್ವಕ್ಕನವರ, ಸುಜಾತಾ ಜಾಪಣ್ಣವರ, ಸೋಮಶೇಖರ ಆಕಳದ, ಚಂದ್ರಶೇಖರ ಅವರು ವಾರದಲ್ಲಿ 3 ದಿನ ಉಪನ್ಯಾಸಕರಾಗಿ, ಉಳಿದ 3 ದಿನ ಶುಶ್ರೂಷಕರಾಗಿ ಕೆಲಸ ಮಾಡಬೇಕು ಎಂದು ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಅವರು ಮತ್ತೆ ಆದೇಶ ಮಾಡಿದ್ದಾರೆ.

    ಈ ಸಲವಾದರೂ ಶುಶ್ರೂಷಕರು ನಿರ್ದೇಶಕರ ಆದೇಶದಂತೆ (ವಾರದಲ್ಲಿ 3 ದಿನ) ರೋಗಿಗಳ ಸೇವೆ ಮಾಡುತ್ತಾರೆಯೆ ಅಥವಾ ಮತ್ತೆ ಜನಪ್ರತಿನಿಧಿಗಳ ಪ್ರಭಾವ ಬಳಸಿ, ಮೂಲ ಹುದ್ದೆಯ ಕೆಲಸದಿಂದ ತಪ್ಪಿಸಿಕೊಳ್ಳುತ್ತಾರೆಯೆ ಎನ್ನುವ ಕುರಿತು ಕಿಮ್್ಸ ಆವರಣದಲ್ಲಿ ಚರ್ಚೆ ಆರಂಭವಾಗಿದೆ.

    ಸ್ನಾತಕೋತ್ತರ ಪದವಿ ಪಡೆದಿದ್ದೇವೆ ಎನ್ನುವ ಒಂದೇ ಕಾರಣ ಮುಂದಿಟ್ಟುಕೊಂಡು ರೋಗಿಗಳ ಸೇವೆ ನಿರಾಕರಿಸುವುದು ಸರಿಯೆ? ಹಾಗಿದ್ದರೆ ಶುಶ್ರೂಷಕ ಹುದ್ದೆಗೆ ಸೇರಿದ್ದಾದರೂ ಏಕೆ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.

    ಉದಾಸೀನ ಪ್ರವೃತ್ತಿ

    ಜಾತಿ, ಹಣ, ರಾಜಕೀಯ ಪ್ರಭಾವ ಇದ್ದರೆ ಇಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಕೆಲವರು ಅರ್ಥೈಸಿಕೊಂಡಂತಿದೆ. ಹಾಗಾಗಿಯೇ ಮೇಲಧಿಕಾರಿಗಳ ಎಚ್ಚರಿಕೆಗಳನ್ನು ಕೆಲವರು ಉದಾಸೀನ ಮಾಡುತ್ತಾರೆ. ಇಂಥವರ ಪರ ನಿಲ್ಲುವ ಜನಪ್ರತಿನಿಧಿಗಳಿಗೂ ಬುದ್ಧಿ ಇಲ್ಲ ಎಂಬ ಟೀಕೆ ಸಾಮಾನ್ಯವಾಗಿದೆ.

    ಆಸ್ಪತ್ರೆಯಲ್ಲಿ ಶುಶ್ರೂಷಕರ ಕೊರತೆ ಇದೆ. ಹಾಗಾಗಿ ಪ್ರತಿನಿಯೋಜನೆ ಮೇಲೆ ನರ್ಸಿಂಗ್ ಕಾಲೇಜ್​ನಲ್ಲಿ ಉಪನ್ಯಾಸಕರಾಗಿರುವ ನಾಲ್ವರನ್ನು ಆಸ್ಪತ್ರೆ ಸೇವೆಗೆ ಬಿಡುಗಡೆಗೊಳಿಸುವಂತೆ ಕೋರಿದ್ದೇವೆ. ಆಸ್ಪತ್ರೆಯಲ್ಲಿ ಮೂರು ದಿನ ಹಾಗೂ ನರ್ಸಿಂಗ್ ಕಾಲೇಜ್​ನಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.

    | ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts