More

    ಪಡುವರಿಯಲ್ಲಿ ಡೆಂಘೆ ಜ್ವರ

    ನರಸಿಂಹ ನಾಯಕ್ ಬೈಂದೂರು
    ಬೈಂದೂರು ವ್ಯಾಪ್ತಿಯ ಪಡುವರಿ ಗ್ರಾಮದ ಮಾಸ್ತಿಕಟ್ಟೆ ಮುಂತಾದ ಕಡೆ ಡೆಂಘೆ ಜ್ವರ ಕಾಣಿಸಿಕೊಂಡಿರುವುದು ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದೆ. ಡೆಂಘೆ ಜ್ವರ ಮಳೆಗಾಲದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದರೂ ಈ ಭಾಗದಲ್ಲಿ ಬೇಸಿಗೆಯಲ್ಲಿ ಜ್ವರ ಹರಡಿದೆ.
    ನಾಲ್ಕೈದು ದಿನಗಳ ಹಿಂದೆ ಇಲ್ಲಿನ ಮಾಸ್ತಿಕಟ್ಟೆ ಕಾಲನಿಯಲ್ಲಿರುವ ಆರೇಳು ಜನರಿಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೆಲವರಿಗೆ ಜ್ವರ ಕಡಿಮೆಯಾಗಲಿಲ್ಲ. ರಕ್ತ ಪರೀಕ್ಷೆ ನಡೆಸಿದಾಗ ಇಬ್ಬರಿಗೆ ಡೆಂಘೆ ದೃಢಪಟ್ಟಿದೆ. ಇವರು ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇತರ ಕಡೆಯಿಂದ ಜ್ವರ ಬಂದಿರುವ ಸಾಧ್ಯತೆಗಳಿವೆ. ಆರೋಗ್ಯ ಇಲಾಖೆ ತಕ್ಷಣ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಂಡು ಚಿಕಿತ್ಸೆ ನೀಡಿದ್ದು ಜನ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಕಳೆದ ವರ್ಷ ಕೂಡ ಶಿರೂರಿನಲ್ಲಿ ಇಬ್ಬರಿಗೆ ಡೆಂಘೆ ಜ್ವರ ಬಂದಿತ್ತು. ಅಲ್ಲದೆ ನೀರ‌್ಗದ್ದೆ ಬಳಿ ಮಂಗನ ಕಾಯಿಲೆ ಕೂಡ ಪತ್ತೆಯಾಗಿತ್ತು.

    ಡೆಂಘೆ ಜ್ವರದ ಲಕ್ಷಣಗಳು: ಸಾಮಾನ್ಯವಾಗಿ ಜ್ವರಗಳು ಕೆಲವೊಮ್ಮೆ ಒಂದೆರಡು ದಿನ ಬಾಧಿಸಿ ಬಿಡುಗಡೆಯಾಗುತ್ತದೆ. ಆದರೆ ಡೆಂಘೆ ಜ್ವರ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತದೆ. ಅತಿಯಾದ ತಲೆನೋವು, ವಾಂತಿ ಭೇದಿ, ಕಣ್ಣಿನ ಹಿಂಭಾಗದಲ್ಲಿ ಉರಿ, ಮೈಕೈ ನೋವು, ಗಂಟು ನೋವು, ಕರಳು ಉಬ್ಬುವುದು, ಡೆಂಘೆ ಜ್ವರದ ಪ್ರಮುಖ ಲಕ್ಷಣಗಳು. ಜ್ವರ ಬಂದ ತಕ್ಷಣ ಚಿಕಿತ್ಸೆ ಹಾಗೂ ರಕ್ತ ಪರೀಕ್ಷೆ ಅತ್ಯವಶ್ಯಕ.

    ಮುನ್ನೆಚ್ಚರಿಕೆ ಕ್ರಮ: ಜ್ವರದ ಲಕ್ಷಣ ಕಂಡು ಬಂದ ಬಳಿಕ ಆರೋಗ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಗ್ರಾಮ ಪಂಚಾಯಿತಿ ವತಿಯಿಂದ ಡೆಂಘೆ ಮಾಹಿತಿ, ಕರಪತ್ರ ವಿತರಣೆ, ಆಶಾ ಕಾರ್ಯಕರ್ತರಿಂದ ಮನೆ ಮನೆ ಭೇಟಿ, ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಸೊಳ್ಳೆ ನಿಯಂತ್ರಣ ಮುಂತಾದ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಬಹುತೇಕ ಊರುಗಳಲ್ಲಿ ಜಾತ್ರೆ, ಹಬ್ಬಗಳು ನಡೆಯುವುದರಿಂದ ಸೇವಿಸುವ ತಿಂಡಿ, ಕುಡಿಯುವ ನೀರಿನ ಬಗ್ಗೆ ವಿಶೇಷ ಎಚ್ಚರಿಕೆ ಅಗತ್ಯ.

    ತಾಲೂಕು ಆಸ್ಪತ್ರೆಯಲ್ಲಿಲ್ಲ ಸವಲತ್ತು: ಬೈಂದೂರು ತಾಲೂಕು ಆಗಿ ಘೋಷಣೆಯಾಗಿ ಎರಡು ವರ್ಷ ಸಂದಿದೆ. ಆದರೆ ಇದುವರೆಗೆ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಾದರೂ ಕೂಡ ಸವಲತ್ತುಗಳು ಬಂದಿಲ್ಲ. ಪ್ರತಿದಿನ 200ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಜವಾಬ್ದಾರಿ ಇದೆ. ತುರ್ತು ಸೇವೆ ಸೇರಿದಂತೆ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುವ ಕಾರಣ ಸರ್ಕಾರ, ಜನಪ್ರತಿನಿಧಿಗಳು ತಾಲೂಕು ಆಸ್ಪತ್ರೆ ಸೇವೆ ಬೈಂದೂರಿನಲ್ಲೇ ಸಿಗುವ ಹಾಗೆ ಮಾಡಿ ಜನಸಾಮಾನ್ಯರಿಗೆ ಹೆಚ್ಚಿನ ಸೇವೆ ದೊರೆಯುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪ್ರತಿವರ್ಷ ವಿವಿಧ ಕಡೆ ಈ ರೀತಿಯ ಕಾಯಿಲೆ ಕಂಡು ಬರುತ್ತಿದೆ. ಈ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಮತ್ತು ಜಾಗೃತಿ ಅಗತ್ಯ. ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಕರಪತ್ರ ಸೇರಿದಂತೆ ಮಾಹಿತಿ ಅಭಿಯಾನ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜನರು ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸಬೇಕು.
    -ಸದಾಶಿವ ಡಿ. ಪಡುವರಿ, ಉಪಾಧ್ಯಕ್ಷ ಗ್ರಾಪಂ ಪಡುವರಿ

    ಡೆಂಘೆ ಪೀಡಿತ ಪ್ರದೇಶದ ಮನೆ ಮನೆಗಳಿಗೆ ಭೇಟಿ ನೀಡಿದ್ದೇನೆ. ಮಾತ್ರವಲ್ಲದೆ ಜ್ವರದ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದೆ. ಸದ್ಯ ಜ್ವರಕ್ಕೆ ಚಿಕಿತ್ಸೆ ನೀಡಲಾಗಿದೆ. ಬಾಧಿತರು ವಿಶ್ರಾಂತಿಯಲ್ಲಿದ್ದು, ಸಹಜ ಸ್ಥಿತಿಯಲ್ಲಿದ್ದಾರೆ. ಇಲಾಖೆಯ ನಿರ್ದೇಶನದ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
    -ಡಾ.ಸಹನಾ, ಆರೋಗ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು

    ಡೆಂಘೆ ಜ್ವರ ಕುರಿತಂತೆ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತಾ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕ್ರಮಕೈಗೊಳ್ಳಲಾಗುವುದು. ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಜನಸಾಮಾನ್ಯರಲ್ಲಿ ಜ್ವರ ನಿಯಂತ್ರಣ ಕ್ರಮಗಳ ಅರಿವು ಮೂಡಿಸುವ ಯೋಜನೆ ರೂಪಿಸಲು ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿದೆ.
    -ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts