More

    ಪಠ್ಯದಲ್ಲಿ ಜಾನಪದ ವಿಷಯ ಅಳವಡಿಕೆಗೆ ಯತ್ನ

    ಶಿಗ್ಗಾಂವಿ: ನೆಲ ಮೂಲದ ಪಾರಂಪರಿಕವಾಗಿರುವ ಜಾನಪದ ಜ್ಞಾನ, ವಿಜ್ಞಾನ ತಂತ್ರಜ್ಞಾನವನ್ನು ಮೀರಿಸಿದ್ದಾಗಿದೆ. ಜಾನಪದ ವಿಷಯವನ್ನು ಪ್ರಾಥಮಿಕ ಶಾಲಾ ಪಠ್ಯದಲ್ಲಿ ಅಳವಡಿಸಲು ಪ್ರಯತ್ನಿಸುತ್ತೇನೆ ಎಂದು ಗೃಹ, ಸಹಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ತಾಲೂಕಿನ ಗೋಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಹಮ್ಮಿಕೊಂಡ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಭಾಷಾ ರಹಿತವಾದ ಅಭಿವ್ಯಕ್ತಿಯೇ ಜನಪದವಾಗಿದೆ. ಇದು ಬದುಕಿನ ನಿಜ ಅರ್ಥವನ್ನು ತಿಳಿಸುತ್ತದೆ. ವೇಗದ ಬದುಕಿಗೆ ಅಲ್ಪ ವಿರಾಮ ದೊರೆಯುವುದು ಜನಪದದಿಂದ. ಹೀಗಾಗಿ ಮನಸ್ಸು ಮತ್ತು ಹೃದಯಕ್ಕೆ ಹತ್ತಿರವಾಗಿದೆ. ಮಾನಸಿಕ ನೆಮ್ಮದಿಗೆ ಜನಪದ ಪ್ರೇರಣೆಯಾಗಿದೆ ಎಂದರು.

    ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದ ಜವಾಬ್ದಾರಿ ಮತ್ತು ಸವಾಲುಗಳನ್ನು ಜಾವಿವಿ ಎದುರಿಸುತ್ತಿದೆ. ಇದರ ನಡುವೆ ಶೈಕ್ಷಣಿಕವಾಗಿ ವಿಭಾಗಗಳನ್ನು ನಡೆಸುವುದರೊಂದಿಗೆ, ಸಂಶೋಧನಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಸ್ಥಳೀಯ ಜನಪದ ಕಲಾವಿದರಿಗೆ ಆದ್ಯತೆ ನಿಡುವುದರೊಂದಿಗೆ ರಾಜ್ಯದ ಎಲ್ಲ ಕಲಾವಿದರಿಗೂ ಇದು ಪ್ರಯೋಜನವಾಗುವಂತೆ ಇಲ್ಲಿನವರು ಕಾರ್ಯನಿರ್ವಹಿಸಬೇಕು ಎಂದರು.

    ಶಿವಮೊಗ್ಗ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ಜನಪದ ಗಣಿಯನ್ನು ಸಂಸ್ಕರಿಸಿ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಜಾವಿವಿ ಮಾಡುತ್ತಿದೆ. ಜನಪದ ವೈಭವಕ್ಕೆ ಇಂಬು ನೀಡುವ, ಶೈಕ್ಷಣಿಕ ಶಿಸ್ತಿಗೆ ಜನಪದವನ್ನು ಒಳಗೊಳಿಸುವ ಕಾರ್ಯ ಮುಂದಿನ ದಿನಗಳಲ್ಲಿ ಹೆಚ್ಚಾಗಲಿ ಎಂದರು.

    ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಟಿ.ಬಿ. ಸೊಲಬಕ್ಕನವರ ಮಾತನಾಡಿದರು.

    ವಿವಿಯ ಕಲಾವಿದರು ಮತ್ತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಾಡಗೀತೆ ಹಾಗೂ ಜಾನಪದ ವಿವಿಯ ಧ್ಯೇಯಗೀತೆಯನ್ನು ಹಾಡಿದರು. ಜಾವಿವಿ ಕುಲಪತಿ ಪ್ರೊ. ಡಿ.ಬಿ. ನಾಯ್ಕ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ನಿರ್ವಹಿಸಿದರು. ಕುಲಸಚಿವ ಪ್ರೊ. ಚಂದ್ರಶೇಖರ ವಂದಿಸಿದರು.

    3 ಕೋಟಿ ಅನುದಾನ ಭರವಸೆ: ಜಾನಪದ ವಿವಿಯ ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯ, ವಿದ್ಯಾರ್ಥಿನಿಲಯ ಹಾಗೂ ಕಲಾಭವನದ ನಿರ್ವಣಕ್ಕಾಗಿ ಮುಂದಿನ ಬಜೆಟ್​ನಲ್ಲಿ 3 ಕೋಟಿ ಅನುದಾನ ನೀಡುವುದಾಗಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

    ಗ್ರಂಥಗಳ ಲೋಕಾರ್ಪಣೆ: ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದಿಂದ ಪ್ರಕಟಣೆಗೊಂಡ ಲಂಬಾಣಿ ಜನಪದ ಸಾಹಿತ್ಯ, ದೊಡ್ಡಾಟಗಳು, ಕೃಷಿ ಜ್ಞಾನ ಪ್ರದೀಪಿಕೆ, ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಮುದಾಯದ ಸ್ಥಿತಿಗತಿಗಳು, ಬಾರವ್ವ ಸೋಬಾನೆ ಪದಹೇಳು. ಬಸಪ್ಪ ಮಾಯಣ್ಣವರ ಹಾಡಿರುವ ಡೊಳ್ಳಿನ ಹಾಡುಗಳು, ಚೆಂಚು ಬುಡಕಟ್ಟು ಸಂಸ್ಕೃತಿ, ನಮ್ಮೂರು ಮರಸು, ನಮ್ಮೂರು ಅಕ್ಕೂರು, ತುಳುನಾಡಿನ ಕಂಬುಲ, ಶಿಗ್ಗಾಂವಿ ತಾಲೂಕಿನ ದರಗಾಗಳು, ಜನಪದ ಔಷಧ, ಕರ್ನಾಟಕ ಜನಪದ ಚಿತ್ರಕಲೆ, ಹಾವೇರಿ ಜಿಲ್ಲೆಯ ಜನಪದ ಕ್ರೀಡೆಗಳು, ಪ್ರೊ. ಡಿ.ಬಿ. ನಾಯಕ, ಡಾ. ಹರಿಲಾಲ ಪವಾರ ಅವರ ಸಂಪಾದಕತ್ವದ ಲಂಬಾಣಿ ಒಗಟುಗಳು, ಲಂಬಾಣಿ ಗಾದೆಗಳು, ಭೀಮಾಸತಿ ಕಥನ ಕಾವ್ಯ, ಹೂನಾಸತಿ ಕಥನ ಕಾವ್ಯ ಎಂಬ ಕೃತಿಗಳನ್ನು ವಿವಿಯ ಸಿಂಡಿಕೇಟ್ ಸದಸ್ಯ ಕೆ. ವಸಂತಕುಮಾರ ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts