More

    ನೀರುನಾಯಿಗಳ ಸಂರಕ್ಷಣೆಗೆ ಆದ್ಯತೆ ಸಿಗಲಿ

    ಶ್ರೀರಂಗಪಟ್ಟಣ: ನಮ್ಮ ಪರಿಸರದಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುವ ಹಾಗೂ ಅಳಿವಿನಂಚಿನಲ್ಲಿರುವ ವಿಶೇಷ ಜೀವಿ ನೀರುನಾಯಿಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಲು ಅರಣ್ಯ ಇಲಾಖೆಯೊಂದಿಗೆ ನೆರವಾಗಬೇಕು ಎಂದು ಮೈಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದರು.

    ತಾಲೂಕಿನ ವಿಶ್ವಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನೀರುನಾಯಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ನೆರೆದಿದ್ದ ಮೈಸೂರಿನ ವಿಜಯನಗರದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದರು.

    ಭಾರತದಲ್ಲಿ ಒಟ್ಟು 13 ಪ್ರಭೇದದಲ್ಲಿ ಕಾಣಸಿಗುವ ಈ ನೀರುನಾಯಿಗಳು ಪ್ರಸ್ತುತ ವಿಶ್ವದ ಪ್ರತಿಷ್ಠಿತ ರಾಮ್ಸರ್ ಜೌಗು ತಾಣಕ್ಕೆ ಸೇರಿರುವ ಕರ್ನಾಟಕದ ಏಕೈಕ ಜೌಗುತಾಣ ರಂಗತಿಟ್ಟು ಪಕ್ಷೀಧಾಮದಲ್ಲಿ 3 ಪ್ರಭೇದಗಳು ನಮಗೆ ನೋಡಲು ಒಟ್ಟಿಗೆ ಕಾಣ ಸಿಗುತ್ತದೆ. ಪ್ರಕೃತಿ ನಿಯಮದಂತೆ ಆಹಾರ ಸರಪಳಿಯಲ್ಲಿ ಭೂಮಿಯ ಮೇಲೆ ಹುಲಿಗಳು ಹೇಗೆ ಪರಿಸರ ಸಮತೋಲನೆಗೆ ಸಹಕಾರ ನೀಡುತ್ತದೆಯೋ ಅಂತೆಯೇ, ಜಲಚರವಾಸಿಯಾದ ಈ ನೀರುನಾಯಿ ಪಾತ್ರವು ಸಹ ಅಷ್ಟೆ ಪ್ರಮುಖವಾಗಿದೆ. ಆದರೆ, ಸ್ವಾರ್ಥ ಜೀವಿ ಮನುಷ್ಯನ ದುರಾಸೆಗೆ ಇಂತಹ ಅಪರೂಪದ ಪ್ರಾಣಿಗಳು ಬಲಿಯಾಗುತ್ತಿದ್ದು, ಕೆಲವೆಡೆ ಕಳ್ಳಬೇಟೆಗಾರರ ಬೇಟೆಯಾಡುವ ವರದಿಯಾಗುತ್ತವೆ. ಆದರೆ, ರಾಜ್ಯ ಸರ್ಕಾರ ಇವುಗಳ ರಕ್ಷಣೆಗೆ ಸಾಕಷ್ಟು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿ ಕಳ್ಳಬೇಟೆಗೆ ಕಡಿವಾಣ ಹಾಕಿದೆ. ಆದರೂ ಕೆಲ ನದಿಗಳಲ್ಲಿ ಕಂಡುಬರುವ ಅಪರೂಪದ ಜೀವಸಂಕುಲವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಇವುಗಳ ಬಗೆಗಿನ ಜಾಗೃತಿ ಅಭಿಯಾನಕ್ಕೆ ವಿದ್ಯಾರ್ಥಿಗಳು, ಯುವಜನರು ನೆರವಾಗಿ ಸಮಾಜವನ್ನು ಎಚ್ಚರಿಸುವ ಜತೆಗೆ ಮುಂದಿನ ಪೀಳಿಗೆಗೂ ಇವುಗಳನ್ನು ಉಳಿಸಿ ಸಂಭವಿಸಬಹುದಾದ ನಮ್ಮ ಪ್ರಕೃತಿ ವಿನಾಶವನ್ನು ತಪ್ಪಿಸಬಹುದಾಗಿದೆ ಎಂದರು.

    ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ನಿಮ್ಮ ನಿತ್ಯದ ಶೈಕ್ಷಣಿಕ ವ್ಯವಸ್ಥೆ ಜತೆಗೆ ನಮ್ಮ ಪರಿಸರ ಹಾಗೂ ಪ್ರಕೃತಿ ಸೃಷ್ಠಿಯಲ್ಲಿನ ಜೀವಿಗಳ ಕುರಿತು ಕಿರು ಮಾಹಿತಿಗಳನ್ನು ನಾವು ಹೊಂದಿರಬೇಕು. ರಂಗತಿಟ್ಟು ಪಕ್ಷಿಧಾಮದಂತಹ ಪುಟ್ಟ ಸ್ಥಳವು ವಿವಿಧ ಪ್ರಭೇಧದ ದೇಶಿ-ವಿದೇಶಿ ಪಕ್ಷಿಗಳು, ಮೊಸಳೆ, ಮೀನು, ನೀರುನಾಯಿ ಸೇರಿದಂತೆ ಹಲವು ರೀತಿಯ ಜೀವಿರಾಶಿಗಳ ಅಪರೂಪದ ನೆಲೆಯಾಗಿರುವ ವೈಶಿಷ್ಟ್ಯತೆ ಕುರಿತು ಅಧ್ಯಯನ ನಡೆಸಿ ಕ್ರೀಯಾಶೀಲರಾಗಬೇಕು ಎಂದರು.

    ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಂಡವಪುರ ಉಪ ವಿಭಾಗಾಧಿಕಾರಿ ನ್ಯೋಂಜೈ ಮೊಹದ್ ಅಲಿ ಅಕ್ರಮ್ ಷಾ ಮತ್ತು ನೀರುನಾಯಿ ಕುರಿತು ಮಾಹಿತಿ ಒದಗಿಸಲು ಕೊಯಮತ್ತೂರಿನ ಸ್ಯಾಕಾನ್‌ನಿಂದ ನೀರುನಾಯಿ ತಜ್ಞ ಕೆವಿನ್ ಡಿ. ಅವರು ಆಗಮಿಸಿದ್ದರು.

    ಈ ವೇಳೆ ಮೈಸೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಸಂತೋಷ್ ಹೂಗಾರ್, ರಂಗನತಿಟ್ಟು ಪಕ್ಷಿಧಾಮದ ಉಪವಲಯಾಧಿಕಾರಿ ಜೈ ಶ್ರೀ ಸಾಲಿಯಾನ್, ಗಸ್ತು ಅರಣ್ಯ ಪಾಲಕ ಪ್ರವೀಣ್ ಜೀವರ್ಗಿ, ವಿಜಯನಗರ ಮಹಿಳಾ ಸರ್ಕಾರಿ ಕಾಲೇಜಿನ ಸಸ್ಯ ಶಾಸ್ತ್ರಜ್ಞೆ ಹೇಮಲತಾ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts