More

    ನಿರಂತರ ನೀರು, ವಿದ್ಯುತ್​ನಿಂದ ರೈತರ ಏಳ್ಗೆ

    ಹಾನಗಲ್ಲ: ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೆಂದರೆ ನೀರಾವರಿ ಹಾಗೂ ಗುಣಮಟ್ಟದ ವಿದ್ಯುತ್ ಒದಗಿಸುವುದು. ಇದರಿಂದ ರೈತರ ಸ್ಥಿತಿ ಸುಧಾರಿಸಲು ಸಾಧ್ಯವಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ತಾಲೂಕಿನ ಮಕರವಳ್ಳಿ ಹಾಗೂ ಬ್ಯಾತನಾಳ ಗ್ರಾಮಗಳಲ್ಲಿ ಒಟ್ಟು 260 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿರುವ 8 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗಳಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

    ತಾಲೂಕಿನಲ್ಲಿ ಎಲ್ಲ ಗ್ರಾಮಗಳ ಜಮೀನಿಗೂ ನೀರು ತಲುಪುವಂತಹ ನೀರಾವರಿ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ 503 ಕೋಟಿ ರೂ.ಗಳ ಬಾಳಂಬೀಡ, ಹಿರೇಕಾಂಶಿ, 80 ಕೋಟಿ ರೂ.ಗಳ ನರೇಗಲ್ ಹಾಗೂ ಕ್ಯಾಸನೂರು ಏತ ನೀರಾವರಿ ಯೋಜನೆಗಳೂ ಮಂಜೂರಾತಿಯಾಗಿವೆ. ಹುಲಗಡ್ಡಿ ನೀರಾವರಿ ಯೋಜನೆ ಟೆಂಡರ್ ಹಂತದಲ್ಲಿದೆ. ತಾಲೂಕಿನಾದ್ಯಂತ ಇರುವ ಎಲ್ಲ ಕೆರೆಗಳನ್ನೂ ವರದಾ-ಧರ್ವ ನದಿ ನೀರಿನಿಂದ ವರ್ಷವಿಡೀ ತುಂಬಿಸಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅಗತ್ಯವಿದ್ದಷ್ಟೆ ನೀರು ಬಳಸಿ ಹೆಚ್ಚು ಫಸಲು ಬೆಳೆಸುವ ತರಬೇತಿ ಪಡೆದುಕೊಳ್ಳಬೇಕು ಎಂದರು.

    ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ತಾಲೂಕಿನ ಏಳು ಗ್ರಾಮಗಳು ಆಯ್ಕೆಯಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ತಲಾ 40 ಲಕ್ಷ ರೂ. ಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.

    ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ ಮಾತನಾಡಿ, ಕಳೆದ ವಿಧಾನಸಭೆ ಹಾಗೂ ಸಂಸತ್ ಚುನಾವಣೆಗಳಲ್ಲಿ ನೀಡಿದ್ದ ಭರವಸೆಯಂತೆ ನೀರಾವರಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. 30 ವರ್ಷಗಳಿಂದ ತಾಲೂಕಿನ ರೈತರು ಕಾಯುತ್ತಿದ್ದ ನೀರಾವರಿ ಯೋಜನೆಗಳು ದೊರಕುತ್ತಿವೆ. 3 ಕೋಟಿ ರೂ.ಗಳ ಲಕ್ಷ್ಮೀಪುರ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂಬರುವ ದಿನಗಳಲ್ಲಿ ಇಡೀ ತಾಲೂಕು ನೀರಾವರಿ ಪ್ರದೇಶವಾಗಿ ಮಾರ್ಪಾಡಾಗಲಿದೆ ಎಂದರು.

    ಮುಖಂಡ ಚಂದ್ರಪ್ಪ ಜಾಲಗಾರ ಮಾತನಾಡಿ, ಬೃಹತ್ ಯೋಜನೆಗಳಿಗೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ, ಹಣ ಬಿಡುಗಡೆ ಕಷ್ಟ ಸಾಧ್ಯದ ಕೆಲಸ. ಆದರೆ, ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ಶಾಸಕ ಉದಾಸಿ ಅವರಿಗೆ ಸಾಧ್ಯವಾಗಿದೆ ಎಂದರು.

    ಮಕರವಳ್ಳಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಕರಬಳ್ಳಿ, ಕೆಲವರಕೊಪ್ಪ ಗ್ರಾಪಂ ಅಧ್ಯಕ್ಷೆ ಜಾನಕಮ್ಮ ಲಮಾಣಿ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ನಿಂಗಪ್ಪ ಗೊಬ್ಬೇರ, ದುರಗಪ್ಪ ಗೂರನವರ, ಸಿದ್ದಪ್ಪ ಬಂಗಾರೇರ, ರಮೇಶ ತಳವಾರ, ಚಂದ್ರಪ್ಪ ದೊಡ್ಡಮನಿ, ಬಸಪ್ಪ ಗೊಂದಿ, ಸದಾನಂದಗೌಡ ಪಾಟೀಲ, ಗೋವಿಂದಪ್ಪ ಕಾನ್ಮನಿ, ಕರಿಯಪ್ಪ ದಿಬ್ಬಣ್ಣನವರ, ಮಲ್ಲೇಶಪ್ಪ ಸಣ್ಣಕಂಬಿ, ಸಮಾಜಕಲ್ಯಾಣ ಅಧಿಕಾರಿ ಜಿ.ಬಿ. ಹಿರೇಮಠ, ಸಣ್ಣ ನೀರಾವರಿ ಇಂಜಿನಿಯರ್ ಗಂಗಾಧರ ಪಟ್ಟಣಶೆಟ್ಟಿ, ಪಿಡಿಒ ಕುಮಾರ ಮಕರವಳ್ಳಿ, ಗುತ್ತಿಗೆದಾರ ಸತ್ಯ ಇತರರು ಉಪಸ್ಥಿತರಿದ್ದರು.

    ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಆಗಿರುವ ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ತಕ್ಷಣಕ್ಕೆ ವಿಮೆ ಕಂಪನಿ ನೀಡಬೇಕಿದ್ದ ಶೇ. 25ರಷ್ಟು ಪರಿಹಾರ ಹಾವೇರಿ ಜಿಲ್ಲೆಗೆ 48.97 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲಿ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ.
    | ಸಿ.ಎಂ. ಉದಾಸಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts