More

    ನಾಲ್ವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

    ಮೈಸೂರು: ನಗರಪಾಲಿಕೆ ಉಪ ಆಯುಕ್ತ, ನಂಜನಗೂಡು ಉಪ ನೋಂದಣಾಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
    ರಾಜ್ಯ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಆದಾಯಕ್ಕಿಂತ ಹೆಚ್ಚು ಆಸ್ತಿ ಇರುವ ಬಗ್ಗೆ ಬಂದ ದೂರಿನ ಮೇರೆಗೆ ಮೈಸೂರು ನಗರಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಮಹೇಶ್, ನಂಜನಗೂಡು ಉಪ ನೋಂದಣಾಧಿಕಾರಿ ಶಿವಶಂಕರಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯ ಲೆಕ್ಕಾಧಿಕಾರಿ ಎನ್.ಮುತ್ತಾ, ಸಹಾಯಕ ಇಂಜಿನಿಯರ್ ನಾಗೇಶ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
    ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ತಂಡ ಬೆಳಗ್ಗೆಯೇ ಏಕಕಾಲಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ, ಮನೆ, ತೋಟದ ಮನೆ, ಆಪ್ತರ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.
    ಈ ನಾಲ್ವರು ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇರೆಗೆ ದಾಖಲಾದ ದೂರಿನಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು 13 ತಂಡಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿವೆ.
    ಮೈಸೂರು ನಗರಪಾಲಿಕೆ ಅಧೀಕ್ಷಕ ಎಂಜಿನಿಯರ್ ಜತೆಗೆ ಉಪ ಆಯುಕ್ತ (ಅಭಿವೃದ್ಧಿ) ಪ್ರಭಾರ ನಿರ್ವಹಿಸುತ್ತಿರುವ ಮಹೇಶ್ ವಿರುದ್ಧ ವಿದ್ಯಾರ್ಹತೆ ಸೇರಿದಂತೆ ಹಿಂದಿನಿಂದಲೂ ಅನೇಕ ದೂರುಗಳು ಕೇಳಿಬಂದಿದ್ದವು. ಕುವೆಂಪುನಗರದಲ್ಲಿರುವ ಅವರ ಮನೆ, ತೋಟದ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ.
    ಮುಡಾ ಮುಖ್ಯ ಲೆಕ್ಕಾಧಿಕಾರಿ ಎನ್.ಮುತ್ತಾ ಅವರ ಕಚೇರಿ, ವಿಜಯನಗರ ನಾಲ್ಕನೇ ಹಂತದಲ್ಲಿರುವ ಮನೆ, ಮುಡಾ ಎಇ ನಾಗೇಶ್ ಅವರ ಕಚೇರಿ ಮತ್ತು ದಟ್ಟಗಳ್ಳಿಯಲ್ಲಿರುವ ಮನೆ, ನಂಜನಗೂಡಿನ ಉಪ ನೋಂದಣಾಧಿಕಾರಿ ಶಿವಶಂಕರಮೂರ್ತಿ ಅವರ ಕಚೇರಿ, ನಿವೇದಿತಾನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೇ ಚಾಮರಾಜನಗರ ತಾಲೂಕಿನಲ್ಲಿರುವ ತೋಟದ ಮನೆಯ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ.
    ದಾಳಿ ವೇಳೆ ಹಲವು ದಾಖಲೆ, ನಗದು, ಆಭರಣ ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯಮಾಪನ ನಡೆಸಬೇಕಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts