More

    ನಮ್ಮ ದಂಧೆ ಉಳಿಸಿ, ನಮಗೂ ಬದುಕಲು ಬಿಡಿ.. ಖಾಸಗಿ ಬಸ್ ಮಾಲೀಕರ ಅಳಲು

    ಡಿ.ಎಂ.ಮಹೇಶ್, ದಾವಣಗೆರೆ: ರಾಜ್ಯದ ಎಲ್ಲ ವರ್ಗದ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಗೆ ಜೂನ್ 11ರಿಂದ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದ ಪರೋಕ್ಷ ಪರಿಣಾಮದ ಆತಂಕದಲ್ಲಿರುವ ರಾಜ್ಯದ 6 ಸಾವಿರ ಸ್ಟೇಜ್ ಕ್ಯಾರೇಜ್ (ಪ್ರಯಾಣಿಕರು) ಬಸ್‌ಗಳ ಕಾರ್ಯಾಚರಣೆ ಹಂತ ಹಂತವಾಗಿ ‘ಹೋಲ್ಡಾನ್’ ಆಗುವ ಅಪಾಯದಲ್ಲಿದೆ.
    ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಅಖಿಲ ಭಾರತ ಪರವಾನಿಗೆ ಪಡೆದ ಬಸ್‌ಗಳು ಹಾಗೂ ಒಪ್ಪಂದ ಮೇರೆಗೆ ನಡೆಸುವ ಕ್ಯಾರೇಜ್ ಬಸ್‌ಗಳಿಗೆ ಯಾವುದೇ ತೊಂದರೆ ಆಗದು. ಆದರೆ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಸ್ಟೇಜ್ ಕ್ಯಾರೇಜ್ ಬಸ್‌ಗಳ ನಿರ್ವಹಣೆ ಮೇಲೆ ದೊಡ್ಡ ಹೊಡೆತ ಬೀಳಲಿದೆ.
    ಕರೊನಾ ನಂತರದಲ್ಲಿ ಸ್ಟೇಜ್ ಕ್ಯಾರೇಜ್ ಬಸ್‌ಗಳನ್ನು ನಡೆಸುವುದೇ ದುಸ್ತರವಾಗಿದೆ. ಕೆಲವರು ಶೇ.50ರಷ್ಟು ಹೊಸ ಬಸ್‌ಗಳನ್ನು ಖರೀದಿಸಿ ನಡೆಸುತ್ತಿದ್ದಾರೆ. ನಿರೀಕ್ಷಿತ ಆದಾಯವೇ ಬರುತ್ತಿಲ್ಲ. ಇದೀಗ ಸರ್ಕಾರದ ಹೊಸ ಯೋಜನೆ ಖಾಸಗಿ ಬಸ್ ಮಾಲೀಕರಿಗೆ ಬರೆ ಹಾಕಿದೆ.
    ಚಾಲಕ, ನಿರ್ವಾಹಕ, ಲೈನ್ ಏಜೆಂಟರು, ಸ್ಟಾೃಂಡ್ ಏಜೆಂಟರು, ಕ್ಲೀನರ್, ಮೆಕ್ಯಾನಿಕ್, ಟೈರ್ ಮಾರಾಟಗಾರರು, ಪಂಕ್ಚರ್ ಹಾಕುವವರು ಸೇರಿ ಒಂದು ಬಸ್‌ನಿಂದ 20 ಜನರ ಜೀವನ ನಿರ್ವಹಣೆಯಾಗುತ್ತಿದೆ. ಈಗ ಅವರೆಲ್ಲರ ಕೆಲಸದ ಭದ್ರತೆಗೂ ಸಂಚಕಾರ ಬರಲಿದೆ ಎಂಬುದು ಬಸ್ ಮಾಲೀಕರ ಆತಂಕ.
    ಸರ್ಕಾರದ ನೂತನ ಯೋಜನೆಯನ್ವಯ ದಾವಣಗೆರೆ ಜಿಲ್ಲೆಯ ಸಾಮಾನ್ಯ, ಎಕ್ಸ್‌ಪ್ರೆಸ್ ಹಾಗೂ ನಗರ ಸಾರಿಗೆ ಸೇರಿ 603 ಬಸ್‌ಗಳಲ್ಲಿ ಶಾಲಾ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಸಿಗಲಿದೆ. ಆದರೆ ಇದೇ ಜಿಲ್ಲೆಯಲ್ಲಿ ಕಾರ್ಯಾಚರನೆ ಮಾಡುತ್ತಿರುವ 250 ಖಾಸಗಿ ಬಸ್‌ಗಳಿಗೆ ಕುತ್ತು ಬಂದಿದೆ.
    ‘ಬಂದ ಆದಾಯ, ಸಂಬಳ ಹಾಗೂ ದುರಸ್ತಿಗೇ ಹೋಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಬರುವ ಮುನ್ನವೇ 75 ವರ್ಷದಿಂದ ಖಾಸಗಿ ಬಸ್‌ಗಳನ್ನು ನಡೆಸುತ್ತಿದ್ದೇವೆ. ನಮಗೆ ಬೇರೆ ಉದ್ಯೋಗ ಗೊತ್ತಿಲ್ಲ. ನಮಗೂ ವಯಸ್ಸಾಗಿದೆ. ಬಸ್ ಓಡದೇ ಇದ್ದರೆ ನಮ್ಮ ಹೆಂಡತಿ ಮಕ್ಕಳ ಪಾಡೇನು?’ ಎಂಬುದು ಬಸ್ ಮಾಲೀಕರೊಬ್ಬರು ಕೇಳುವ ಪ್ರಶ್ನೆ.
    ಕರೊನಾ ಅವಧಿಯಲ್ಲಿ ಕೆಲ ಬಸ್‌ಗಳು ಸ್ಕ್ರಾಪ್ ಆಗಿದ್ದರೆ, ಕೆಲವು ಬಂದ್ ಆದವು. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನೀಡಲಾದ ತೆರಿಗೆ ಸಬ್ಸಿಡಿ ಖಾಸಗಿ ಬಸ್‌ಗಳಿಗೆ ಅನ್ವಯವಾಗಲಿಲ್ಲ. ಈಗ ಬಸ್ ಮಾರುತ್ತೇವೆ ಎಂದರೂ ಯಾರೂ ಕೊಂಡು ನಿರ್ವಹಣೆ ಮಾಡುವವರಿಲ್ಲ. ಕರೊನಾ ನಂತರದಲ್ಲಿ ಹೊಸ ಬಸ್‌ಗಳನ್ನು ಕೊಂಡವರು ಸಾಲಗಾರರಾಗಿದ್ದಾರೆ.
    ಬಸ್ ನಿಂತುಬಿಟ್ಟರೆ ಸಾಲಕ್ಕೆ ಬ್ಯಾಂಕ್‌ನವರು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ತಪ್ಪದು. ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿ ಪ್ರತಿಭಟನೆ ಮಾಡಿದಾಗಲೂ ಸಾರ್ವಜನಿಕರ ಕಳಕಳಿಯಿಂದ ಖಾಸಗಿ ಬಸ್ ಓಡಿವೆ. ಈಗ ಅವೂ ನಿಂತರೆ ಅವರನ್ನು ಅವಲಂಭಿಸಿದ ಕುಟುಂಬಗಳು ಬೀದಿಗೆ ಬರುವುದು ಗ್ಯಾರಂಟಿ!
    ನಮ್ಮ ದಂಧೆಯನ್ನೂ ಉಳಿಸಿ, ನಮಗೂ ಬದುಕಲು ಬಿಡಿ ಎಂಬುದಾಗಿ ಕರ್ನಾಟಕ ಸ್ಟೇಜ್ ಕ್ಯಾರೇಜ್ ಬಸ್ ಮಾಲೀಕರ ಒಕ್ಕೂಟ ಸರ್ಕಾರದ ಮುಂದೆ ಇನ್ನಷ್ಟೆ ಅಲವತ್ತುಕೊಳ್ಳಲಿದೆ. ವಿವಿಧೆಡೆ ಸಭೆಗಳನ್ನು ನಡೆಸುತ್ತಿದೆ.
    ಪ್ರತಿ ಖಾಸಗಿ ಬಸ್‌ನಿಂದ ಒಂದು ವರ್ಷಕ್ಕೆ ಕಟ್ಟಿಸಿಕೊಳ್ಳುವ 2 ಲಕ್ಷ ರೂ.ಗಳಷ್ಟು ರಸ್ತೆ ತೆರಿಗೆಯಲ್ಲಿ ಶೇ.50ರಷ್ಟು ವಿನಾಯ್ತಿ ನೀಡಬೇಕು. ಶಕ್ತಿ ಯೋಜನೆ ನಿರ್ವಹಣೆಗೆ ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡುವ ಸಂಭವವಿದೆ. ಯಾವುದೇ ಕಾರಣಕ್ಕೂ ಈ ಸುಂಕ ಏರಿಸದೇ ಇಳಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ನವರಿಗೆ ನೀಡುವ ಮಾದರಿಯಲ್ಲೇ ನಮಗೂ ಸಬ್ಸಿಡಿ ಹಣ ಮರುಪಾವತಿ ಮಾಡಬೇಕು ಎಂದು ಮನವಿ ಮಾಡುತ್ತಿದೆ.

    * ಕೋಟ್
    ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ ಖಾಸಗಿ ಬಸ್ ಮಾಲೀಕರು ಮತ್ತು ಅದನ್ನೇ ಅವಲಂಭಿಸಿದ ಸಿಬ್ಬಂದಿ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ನಮ್ಮ ಬೇಡಿಕೆಗಳ ಈಡೇರಿಕೆಗೆ ಗಮನ ನೀಡಬೇಕು. ಇಲ್ಲವಾದಲ್ಲಿ ನಮ್ಮ ದಂಧೆಗೆ ನಾವೇ ಸೂಯಿಸೈಡ್ ನೀಡುವ ಪರಿಸ್ಥಿತಿ ಬರಲಿದೆ.
    ಕೆ.ಎಸ್.ಮಲ್ಲೇಶಪ್ಪ
    ಕರ್ನಾಟಕ ರಾಜ್ಯ ಸ್ಟೇಜ್ ಕ್ಯಾರೇಜ್ ಬಸ್ ಮಾಲೀಕರ ಒಕ್ಕೂಟದ ಉಪಾಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts