More

    ನನಸಾಗಲಿ ಕೃಷಿ ಪದವಿ ಕಾಲೇಜ್ ಕನಸು

    ಶಂಕರ ಶರ್ಮಾ ಕುಮಟಾ

    ಧಾರವಾಡ ಕೃಷಿ ವಿಶ್ವವಿದ್ಯಾಲಯದಡಿ ಕುಮಟಾದಲ್ಲಿ ಕೃಷಿ ಪದವಿ ಕಾಲೇಜ್ ಸ್ಥಾಪನೆ ಮತ್ತು ಇದಕ್ಕಾಗಿ ‘ಕರಾವಳಿ ಕೃಷಿ ಅಭಿವೃದ್ಧಿ ಮತ್ತು ಚಿಂತನಾ ಸಮಿತಿ’ ನಡೆಸುತ್ತಿರುವ ಪ್ರಯತ್ನಗಳು ದಡ ಮುಟ್ಟುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ.

    ಕರಾವಳಿಯ ಉತ್ತರ ಕನ್ನಡ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಒಂದೂ ಕೃಷಿ ಪದವಿ ಕಾಲೇಜ್ ಇಲ್ಲ. ಜಿಲ್ಲೆಗೊಂದು ಕೃಷಿ ಪದವಿ ಕಾಲೇಜ್ ಎಂಬುದು ಭರವಸೆಯಾಗಿಯೇ ಉಳಿದಿದೆ. ಈಗಾಗಲೇ ಕುಮಟಾದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೊಮಾ ಕಾಲೇಜಿನೊಟ್ಟಿಗೆ ಕೃಷಿ ಪದವಿ ಕಾಲೇಜನ್ನೂ ಆರಂಭಿಸಿದರೆ ಬಹಳ ಉಪಯುಕ್ತ ಎನ್ನಲಾಗುತ್ತಿದೆ.

    ಕುಮಟಾದಲ್ಲಿ 2011ರಲ್ಲಿ ಧಾರವಾಡ ಕೃಷಿ ವಿವಿಯಡಿ ಕೃಷಿ ಸಂಶೋಧನಾ ಕೇಂದ್ರ ಆರಂಭವಾಗಿದೆ. ಕೃಷಿ ಇಲಾಖೆಯ ಸುಪರ್ದಿಯಲ್ಲಿದ್ದ ಅಂದಾಜು 62 ಎಕರೆ ಭೂಮಿಯನ್ನು ಸರ್ಕಾರ ಹಸ್ತಾಂತರಿಸಿದೆ. ಸದ್ಯ ಇಲ್ಲಿನ ಕೃಷಿ ಕ್ಷೇತ್ರದಲ್ಲಿ ವಿವಿಧ ತಳಿಗಳ ಪ್ರಯೋಗದ ಜತೆಗೆ 2 ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್ ಜಾರಿಯಲ್ಲಿದೆ. ಹಾಳುಬಿದ್ದಿದ್ದ ಕೃಷಿ ಇಲಾಖೆಯ ಜಾಗದಲ್ಲಿ ಚಟುವಟಿಕೆಗಳು ಹಸಿರಾಗಿವೆ. ಇಲ್ಲಿಯೇ ಕೃಷಿ ಪದವಿ ಕಾಲೇಜ್ ಶುರುವಾಗಲಿ ಎಂಬ ಬೇಡಿಕೆಯಿದೆ.

    ಕೃಷಿ ಕಾಲೇಜ್ ಯಾಕೆ ಬೇಕು?: ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಡಿಪ್ಲೊಮಾದಿಂದ ತಾಲೂಕಿನಲ್ಲಿ ರೈತ ಸಮುದಾಯಕ್ಕೆ ಮಹತ್ವದ ಪ್ರಯೋಜನವೇನೂ ಆಗಿಲ್ಲ ಎಂದರೆ ತಪ್ಪಲ್ಲ. ಉದಾಹರಣೆಗೆ ವನ್ನಳ್ಳಿ, ಹಂದಿಗೋಣದಲ್ಲಿ ನಾಲ್ಕು ವರ್ಷದ ಹಿಂದೆ ಸಿಹಿ ಈರುಳ್ಳಿಗೆ ಕಾಡಿದ ರೋಗ ಪತ್ತೆ ಹಚ್ಚಲು ಧಾರವಾಡದ ಕೃಷಿ ವಿವಿ ಪ್ರಯೋಗಾಲಯವೇ ಬೇಕಾಯಿತು. ಒಂದಿಡೀ ಬೆಳೆ ಹಾಳಾದರೂ ಪರಿಹಾರ ಕ್ರಮ ಗೊತ್ತಾಗಲಿಲ್ಲ. ಕೃಷಿ ಪದವಿ ಕಾಲೇಜ್ ಬಂದರೆ ಜೊತೆಜೊತೆಗೆ ಸೂಕ್ತ ಪ್ರಯೋಗಾಲಯ ಹಾಗೂ ತಜ್ಞರ ತಂಡವೇ ಇರುತ್ತದೆ. ಕೃಷಿಯನ್ನು ಅಧ್ಯಯನವಾಗಿ ತೆಗೆದುಕೊಂಡು ಬದುಕು ರೂಪಿಸಿಕೊಳ್ಳ ಬಯಸುವ ಯುವಜನತೆಗೆ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತದೆ.

    ಸಮಿತಿಯಿಂದ ಪ್ರಯತ್ನ: ಎರಡು ವರ್ಷಗಳ ಹಿಂದೆ ಕುಮಟಾದಲ್ಲಿ ಚಿಂತಕ ಮುರಳೀಧರ ಪ್ರಭು ಹೊಸಹೆರವಟ್ಟಾ ಅಧ್ಯಕ್ಷತೆಯಲ್ಲಿ ‘ಕರಾವಳಿ ಕೃಷಿ ಅಭಿವೃದ್ಧಿ ಮತ್ತು ಚಿಂತನಾ ಸಮಿತಿ’ ಸಂಘಟಿತವಾಗಿ 2017ರ ಮಾರ್ಚ್ 6ರಂದು ಸಭೆ ಸೇರಿ ಅಂದಿನ ಸರ್ಕಾರಕ್ಕೆ ಕೃಷಿ ಪದವಿ ಕಾಲೇಜಿಗಾಗಿ ಬೇಡಿಕೆ ಇಟ್ಟಿದ್ದರು. ಕುಮಟಾದಲ್ಲಿ ಕೃಷಿ ವಿಶ್ವ ವಿದ್ಯಾಲಯದಡಿ ಸಾಕಷ್ಟು ಭೂಮಿಯ ಲಭ್ಯತೆ ಇದೆ. ಜಿಲ್ಲೆಯ ಮಧ್ಯವರ್ತಿ ಸ್ಥಾನವೂ ಆಗಿರುವುದರಿಂದ ಕೃಷಿ ಪದವಿ ಕಾಲೇಜ್ ಸ್ಥಾಪಿಸಿದರೆ ಕೃಷಿ ಚಟುವಟಿಕೆಗಳು ಬೆಳೆಯಬಹುದು ಎಂದು ಮನವಿ ಮಾಡಿದ್ದರು. ಸರ್ಕಾರದ ನಿರ್ದೇಶನದ ಮೇರೆಗೆ ಕುಮಟಾದಲ್ಲಿ ಕೃಷಿ ಪದವಿ ಕಾಲೇಜ್ ಸ್ಥಾಪನೆಗೆ ಸಮಗ್ರ ವರದಿ ತಯಾರಿಸಿ 2018ರ ಜುಲೈನಲ್ಲಿ ನೀಡಲಾಗಿದೆ. ಉತ್ತರ ಇನ್ನೂ ಬರಬೇಕಿದೆ.

    ನನಸಾಗಲಿ ಕನಸು: ಮುಖ್ಯವಾಗಿ ಮುಂದಿನ ವರ್ಷ 2021ರ ಸೆಪ್ಟೆಂಬರ್​ನಲ್ಲಿ ಕೃಷಿ ಸಂಶೋಧನಾ ಕೇಂದ್ರಕ್ಕೆ ನೀಡಲಾದ 62 ಎಕರೆ ಭೂಮಿಯ ಲೀಸ್ ಅವಧಿ ಮುಕ್ತಾಯವಾಗಲಿದೆ. ಅಸಲಿಗೆ ಈ ಭೂಮಿ ಮೂಲತಃ ಅರಣ್ಯ ಇಲಾಖೆಯದ್ದಾಗಿದ್ದು 1919ರಲ್ಲಿ ಕೃಷಿ ಇಲಾಖೆಗೆ ಲೀಸ್ ನೀಡಲಾಗಿತ್ತು. ಭವಿಷ್ಯದಲ್ಲಿ ಲೀಸ್ ಜಾಗದ ಸಮಸ್ಯೆ ಬಾರದಂತೆ ಕೃಷಿ ವಿಶ್ವವಿದ್ಯಾಲಯ, ಸರ್ಕಾರ ಹಾಗೂ ರಾಜಕೀಯ ಶಕ್ತಿಗಳು ಕಾರ್ಯನಿರತವಾಗಬೇಕಿದೆ. ಕೃಷಿ ಪದವಿ ಕಾಲೇಜ್ ಸ್ಥಾಪಿಸಿ ಕರಾವಳಿ ಕೃಷಿಕರ ಬಹುಕಾಲದ ಕನಸು ನನಸಾಗಬೇಕಿದೆ.

    ಕುಮಟಾದಲ್ಲಿ ಕೃಷಿ ಪದವಿ ಕಾಲೇಜ್ ಬೇಕು. ಇದರಿಂದ ಕೃಷಿಕರಿಗೆ ಮಾತ್ರವಲ್ಲದೆ, ರೈತರಿಗೆ, ಯುವಜನತೆಗೆ, ಕೃಷಿಯ ಹೆಚ್ಚಿನ ಅಧ್ಯಯನಗಳಿಗೆ, ಉತ್ತಮ ಭವಿಷ್ಯಕ್ಕೆ ಪೂರಕವಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ಬಜೆಟ್​ನಲ್ಲಿ ಕೃಷಿ ಕಾಲೇಜ್ ಸ್ಥಾಪನೆಗೆ ಅನುದಾನ ಒದಗಿಸಬೇಕು.
    | ಮುರಲೀಧರ ಪ್ರಭು
    ಕುಮಟಾ ಕರಾವಳಿ ಕೃಷಿ ಅಭಿವೃದ್ಧಿ ಹಾಗೂ ಚಿಂತನಾ ಸಮಿತಿ ಅಧ್ಯಕ್ಷ

    ಕುಮಟಾದಲ್ಲಿ ಕೃಷಿ ಪದವಿ ಕಾಲೇಜ್ ಸ್ಥಾಪನೆಯಿಂದ ಸಂಪೂರ್ಣ ಕರಾವಳಿ ಜಿಲ್ಲೆಗಳಿಗೆ ಬಹಳ ಪ್ರಯೋಜನವಾಗಲಿದೆ. ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಕೃಷಿ ವಿವಿಗೆ ಕಳುಹಿಸಲಾಗಿದೆ.
    | ಡಾ. ಜಿ.ವಿ. ನಾಯಕ
    ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ

    ಈಗಾಗಲೇ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ಡಿಪ್ಲೊಮಾ ಇರುವುದರಿಂದ ಕುಮಟಾದಲ್ಲಿ ಕೃಷಿ ಪದವಿ ಕಾಲೇಜ್ ಆರಂಭಿಸುವುದು ಕಷ್ಟದ ಕೆಲಸವಲ್ಲ. ಆದರೆ, ರಾಜಕೀಯ ಇಚ್ಛಾಶಕ್ತಿ ಬೇಕಿದೆ. ಹಿಂದೆ ಕೃಷಿ ವಿವಿ ಕುಲಪತಿಗಳಾಗಿದ್ದ ಎಸ್.ಎಸ್. ಹಂಚಿನಾಳ ಅವರು ಕುಮಟಾಕ್ಕೆ ಕೃಷಿ ಪದವಿ ಕಾಲೇಜಿನ ಭರವಸೆ ನೀಡಿದ್ದರು.
    | ಎಸ್​ವಿ. ಹೆಗಡೆ ಭದ್ರನ್
    ನಿವೃತ್ತ ಕೃಷಿ ಸಹಾಯಕ ನಿರ್ದೇಶಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts