More

    ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ಮಂಜೂರು

    ಶಿವಮೊಗ್ಗ: ನಗರಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯ ಒದಗಿಸಲು ಹಾಗೂ ಸಮಗ್ರ ಅಭಿವೃದ್ಧಿ ಕೇಂದ್ರೀಕರಿಸಿ ಪೌರಸೇವೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ವಿಸ್ತರಿಸುವ ಕುರಿತು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಡಿಸಿ ಕಚೇರಿಯಲ್ಲಿ ಮಂಗಳವಾರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖವಾಗಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ತಯಾರಿಸಿದ್ದ ಕ್ರಿಯಾಯೋಜನೆ ಅನುಮೋದನೆ ಸಭೆಯಲ್ಲಿ ಮಾತನಾಡಿದರು.

    ಯೋಜನೆಗೆ ರಾಜ್ಯದ 10 ಜಿಲ್ಲೆ ಆಯ್ಕೆಯಾಗಿವೆ. ಮೈಸೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡಕ್ಕೆ ತಲಾ 150 ಕೋಟಿ, ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ವಿಜಯಪುರ, ತುಮಕೂರು ಮತ್ತು ಶಿವಮೊಗ್ಗಕ್ಕೆ ತಲಾ 125 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

    ಮಂಜೂರಾದ ಅನುದಾನದ ಸದ್ಬಳಕೆಗಾಗಿ ಮಾರ್ಗಸೂಚಿಯನ್ವಯ ಕ್ರಿಯಾಯೋಜನೆ ತಯಾರಿಸಿದ್ದು, ಶೀಘ್ರವೇ ಸರ್ಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

    ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಪಾಲಿಕೆ ಸದಸ್ಯರು, ಶಾಸಕರಿಗೆ ಮಾರ್ಗಸೂಚಿಯೊಂದಿಗೆ ಮಾಹಿತಿ ನೀಡಿ, ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಕೈಗೊಳ್ಳುವ ಕಾಮಗಾರಿ ಒಂದೇ ಆಗಿದ್ದು, ಒಂದು ಕೋಟಿ ರೂ. ಮಿತಿಯೊಳಗಿರುವಂತೆ ನೋಡಿಕೊಳ್ಳಬೇಕು. ಈ ಅನುದಾನದಲ್ಲಿ ಅಮೃತ ಯೋಜನೆ ಅನುಷ್ಠಾನಕ್ಕೆ 13 ಕೋಟಿ ಕಾಯ್ದಿರಿಸಲಾಗಿದೆ. ನಗರದ ಉದ್ಯಾನಗಳ ಅಭಿವೃದ್ಧಿಗೂ 2.75 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಆಯಕ್ತರಿಗೆ ತಿಳಿಸಿದರು.

    ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ, ಎಡಿಸಿ ಜಿ.ಅನುರಾಧಾ, ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಳ್ಳಿ, ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts