More

    ಧೂಮಪಾನ ನಿಷೇಧ ನಾಮಫಲಕ ಕಡ್ಡಾಯ – ಠಾಣಾಧಿಕಾರಿಗಳಿಗೆ -ಎಸ್ಪಿ ಉಮಾ ಪ್ರಶಾಂತ್ ಸೂಚನೆ -ಪೊಲೀಸರಿಗೆ ತರಬೇತಿ

    ದಾವಣಗೆರೆ: ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧಿಕಾರಿಗಳಿಗೆ ಸೂಚಿಸಿದರು.
    ತಂಬಾಕು ಮಾರಾಟ ಪರವಾನಗಿ ವಿಚಾರವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಶನಿವಾರ ಪೊಲೀಸ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸಾರ್ವಜನಿಕರು ಕಂಡಕಂಡಲ್ಲಿ ಧೂಮಪಾನ ಮಾಡದಂತೆ ಸೂಕ್ತ ಕ್ರಮ ವಹಿಸಬೇಕು. ಹಿಂದಿನ ವರ್ಷಕ್ಕಿಂತ ಪ್ರಸ್ತುತ ವರ್ಷದಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಬೇಕು. ಪರಿಣಾಮಕಾರಿಯಾಗಿ ಕೋಟ್ಪಾ ಪಾಲನೆಗೆ ಈ ತರಬೇತಿ ಮುನ್ನುಡಿಯಾಗಬೇಕು ಎಂದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡಿ, ತಂಬಾಕು ಬಳಕೆಯಲ್ಲಿ ಭಾರತ ಪ್ರಪಂಚದಲ್ಲಿಯೇ (ಶೇ.28.6) 2 ನೇ ರಾಷ್ಟ್ರವಾಗಿದೆ. ಅದರಲ್ಲಿ ಪುರುಷರು ಶೇ.42.4, ಮಹಿಳೆಯರು 14.2 ರಷ್ಟು ಬಸುತ್ತಿದ್ದಾರೆ. ಪ್ರತಿವರ್ಷ 15 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದರು.
    ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನ ಮಾರಾಟಗಾರರಿಗೆ ಪರವಾನಗಿ ನೀತಿ ಜಾರಿಗೊಳಿಸಿದ್ದು, ಎಲ್ಲೆಂದರಲ್ಲಿ ತಂಬಾಕು ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ಕೋಟ್ಪಾ ಅನುಷ್ಠಾನಕ್ಕೆ ತರಬೇಕು. ಮಕ್ಕಳು-ಯುವಕರು ತಂಬಾಕಿನ ದಾಸರಾಗಿ ಬಲಿಯಾಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ ಎಂದರು.
    ಡಿಎಚ್‌ಒ ಡಾ. ಎಸ್. ಷಣ್ಮುಖಪ್ಪ ಮಾತನಾಡಿ ಧೂಮಪಾನಿಗಳು ಶೇ.40 ರಷ್ಟು ಕ್ಷಯರೋಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ತಂಬಾಕು ಬಳಕೆಯಿಂದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಧುಮೇಹ, ನಪುಂಸಕತೆ ಕಾಡಲಿದೆ. ಇದನ್ನು ತಪ್ಪಿಸಲು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್, ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಪಿ.ಎಂ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಕೆ.ಪಿ. ದೇವರಾಜ್, ಮಂಗಳಾ, ನಾಗಭೂಷಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts