More

    ಧಾರವಾಡ ಜಿಲ್ಲೆಯಲ್ಲಿ ‘ಬ್ಲಡ್ ನೋ ಸ್ಟಾಕ್’

    ಧಾರವಾಡ: ಸಾಮಾನ್ಯವಾಗಿ ಅಂಗಡಿಗಳಲ್ಲಿ ನಾವೆಲ್ಲ ನೋ ಸ್ಟಾಕ್ ಎನ್ನುವ ಫಲಕ ನೋಡಿರುತ್ತೇವೆ. ಆದರೀಗ ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿನ ರಕ್ತ ಭಂಡಾರಗಳಿಗೆ ಬಂದಿದೆ. ಎಲ್ಲಿಯೂ ರಕ್ತ ಭಂಡಾರಗಳು ಹಾಗಂತ ಫಲಕ ಹಾಕಿಲ್ಲ. ಆದರೆ, ಜಿಲ್ಲೆಯಲ್ಲೀಗ ಯಾವುದೇ ರಕ್ತ ಭಂಡಾರದಲ್ಲಿ ಕೇಳಿದರೂ ರಕ್ತದ ಸಂಗ್ರಹ ಇಲ್ಲ ಎನ್ನುವ ಉತ್ತರವೇ ಬರುತ್ತಿದೆ. ಇದೆಲ್ಲದಕ್ಕೂ ಕಾರಣವಾಗಿದ್ದು ಕೋವಿಡ್ ಲಸಿಕಾ ಅಭಿಯಾನ.
    ಕರೊನಾ ಲಾಕ್​ಡೌನ್ ಸಮಯದಲ್ಲಿ ರಕ್ತದಾನ ಶಿಬಿರ ನಡೆಯದಿರುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನ ರಕ್ತದಾನ ಮಾಡಲು ಮುಂದಾಗದಿರುವ ಕಾರಣ ರಕ್ತದ ಕೊರತೆ ಈಗ ಜಿಲ್ಲೆಯಲ್ಲಿ ಉಲ್ಬಣಗೊಂಡಿದೆ. 18ರಿಂದ 44 ವಯೋಮಾನದವರಿಗೆ ಕೋವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಿದ ಬಳಿಕವೇ ರಕ್ತದ ಕೊರತೆ ಜಿಲ್ಲೆಯಲ್ಲಿ ಉದ್ಭವಿಸಿದೆಯಂತೆ. ರಕ್ತದಾನ ಮಾಡುವವರು ಬಹುತೇಕವಾಗಿ ಇದೇ ವಯೋಮಾನದವರಾಗಿರುತ್ತಾರೆ.
    ಕರೊನಾ ಮೊದಲ ಅಲೆಗೂ ಮುಂಚೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿನ ರಕ್ತ ಭಂಡಾರದಲ್ಲಿ ನಿತ್ಯ 300ರಷ್ಟು ಯುನಿಟ್ ರಕ್ತ ಸಂಗ್ರಹ ಆಗುತ್ತಿತ್ತು. ಸಾಕಷ್ಟು ರಕ್ತದಾನ ಶಿಬಿರಗಳು ನಡೆಯುತ್ತಿದ್ದವು. ಮೊದಲ ಅಲೆ ಮುಗಿದ ಬಳಿಕ ರಕ್ತದಾನ ಶಿಬಿರಗಳು ನಡೆಯದೆ ಇದ್ದರೂ ಜನರೇ ನೇರವಾಗಿ ರಕ್ತ ಭಂಡಾರಕ್ಕೆ ಅಗಮಿಸಿ ರಕ್ತ ನೀಡುತ್ತಿದ್ದರು. ಹೀಗಾಗಿ, ನಿತ್ಯ ಕನಿಷ್ಠ 40 ಯುನಿಟ್ ರಕ್ತ ಸಂಗ್ರಹ ಆಗುತ್ತಿತ್ತು. ಆದರೆ, ಈಗ ಲಾಕ್​ಡೌನ್ ತೆರವುಗೊಂಡಿದ್ದರೂ ನಿತ್ಯ 2ರಿಂದ 3 ಯುನಿಟ್ ಮಾತ್ರವೇ ಸಂಗ್ರಹ ಆಗುತ್ತಿದೆ. ಎಲ್ಲರೂ ಲಸಿಕೆಯತ್ತ ಗಮನ ಹರಿಸಿದ್ದರಿಂದ ಹಾಗೂ ಲಸಿಕೆ ಹಾಕಿಸಿಕೊಂಡ ಬಳಿಕ ಕೆಲ ಕಾಲ ರಕ್ತ ದಾನ ಮಾಡಲು ಬರುವುದಿಲ್ಲ. ಹೀಗಗಿ, ರಕ್ತದ ಸಂಗ್ರಹದ ಕೊರತೆ ಶುರುವಾಗಿದೆ.
    ಶನಿವಾರವೇ ಧಾರವಾಡದಲ್ಲಿ ಎ ಪಾಸಿಟಿವ್ ಮತ್ತು ಬಿ ಪಾಸಿಟಿವ್ ರಕ್ತಕ್ಕಾಗಿ ಧಾರವಾಡದಲ್ಲಿರೋ ಬ್ಲಡ್ ಬ್ಯಾಂಕ್ ಸಿಬ್ಬಂದಿಯೇ ಪರದಾಡುವಂತಹ ಸ್ಥಿತಿ ಬಂದಿತ್ತು. ರಕ್ತದ ಸಂಗ್ರಹ ಇಲ್ಲದೆ ಇದ್ದಾಗ ಯಾವುದಾದರೂ ಒಂದು ಗುಂಪಿನ ರಕ್ತವನ್ನು ರಿಪ್ಲೆಸ್ಮೆಂಟ್ ಅಂತಾ ಪಡೆದುಕೊಂಡು, ಅಗತ್ಯವಿರುವ ಗುಂಪಿನ ರಕ್ತ ನೀಡುವ ಪರಿಪಾಠ ಇದೆ. ಆದರೆ, ಈಗ ವಿಚಿತ್ರ ಎಂದರೆ ರಿಪ್ಲೇಸ್​ವೆುಂಟ್​ಗೂ ಜನ ಸಿಗದ ಸ್ಥಿತಿ ಎದುರಾಗಿದೆ.
    ಮುಖ್ಯವಾಗಿ ಗರ್ಭಿಣಿಯರ ಹೆರಿಗೆ ಸಮಯದಲ್ಲಿ ಹಾಗೂ ತಲೆಸಿಮಿಯಾ ರೋಗಿಗಳಿಗೆ ರಕ್ತದ ಅಗತ್ಯ ಹೆಚ್ಚು ಇರುತ್ತದೆ. ಬೇರೆ ಶಸ್ತ್ರ ಚಿಕಿತ್ಸೆಗಳ ಸಂದರ್ಭದಲ್ಲೂ ರಕ್ತದ ಬೇಡಿಕೆ ಬರುತ್ತದೆಯಾದರೂ ಗರ್ಭೀಣಿಯರಿಗೆ ಹಾಗೂ ತಲೆಸಿಮಿಯಾ ರೋಗಿಗಳ ಬೇಡಿಕೆ ನಿರಂತವಾಗಿ ಇರುವಂತಹುದು. ಆದರೆ, ಈಗ ಅವರಿಗೂ ರಕ್ತ ಇಲ್ಲದಂತಹ ಸಂದಿಗ್ಧ ಸ್ಥಿತಿ ಎದುರಾಗಿದೆ.
    ಜಾಗೃತಿ ಅಗತ್ಯ
    ಸದ್ಯ ಧಾರವಾಡ ಜಿಲ್ಲಾ ಆಸ್ಪತ್ರೆಯ ಎರಡು ಲಸಿಕಾ ಕೇಂದ್ರಗಳ ಹೊರಭಾಗದಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಮೊದಲು ರಕ್ತದಾನ ಮಾಡಿ, ಆ ಬಳಿಕ ಲಸಿಕೆ ಹಾಕಿಸಿಕೊಳ್ಳಿ’ ಎನ್ನುವ ಫಲಕ ಹಾಕಲಾಗಿದೆ. ಆದರೂ ಜನ ಇದನ್ನು ಗಮನಿಸುತ್ತಿಲ್ಲ. ಹೀಗಾಗಿ, ರಕ್ತದಾನ ಮಾಡಿದವರಿಗೆ ಆದ್ಯತೆ ಮೇರೆಗೆ ಲಸಿಕೆ ಒದಗಿಸಿಕೊಡಲಾಗುವುದು ಎನ್ನುವ ಯೋಜನೆಯನ್ನಾದರೂ ಜಾರಿಗೆ ತಂದಲ್ಲಿ ಜಿಲ್ಲೆಯಲ್ಲಿ ಉದ್ಭವಿಸಿರೋ ರಕ್ತದಾನದ ಕೊರತೆ ನೀಗಿಸಬಹುದಾಗಿದೆ ಎಂಬ ಸಲಹೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಧಾರವಾಡ ಜಿಲ್ಲಾ ಆಸ್ಪತ್ರಗೆ ಗರ್ಭೀಣಿಯರು ಹೆಚ್ಚಾಗಿ ಬರುತ್ತಾರೆ. ಮೇಲಾಗಿ ನಮಗೆ ತಲೆಸಿಮಿಯಾ ರೋಗಿಗಳ ಚಿಕಿತ್ಸೆಗೆ ಬೇಡಿಕೆಯೂ ಸಾಕಷ್ಟು ಇದೆ. ರಕ್ತ ದಾನ ಶಿಬಿರಗಳು ಆಗದೇ ಇರುವುದರಿಂದ ಹಾಗೂ ಎಲ್ಲರೂ ಲಸಿಕೆಯತ್ತ ಗಮನ ಹರಿಸಿದ್ದರಿಂದ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ರಕ್ತದ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಉಲ್ಬಣಿಸಿದೆ.
    ಡಾ. ಪ್ರಭು, ವೈದ್ಯಾಧಿಕಾರಿ, ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರ

    ಮೊದಲೆಲ್ಲ ವಾಟ್ಸಾಪ್​ನಲ್ಲಿ ಒಂದೇ ಒಂದು ಮೇಸೇಜ್ ಹಾಕಿದ್ರೆ ಸಾಕಿತ್ತು; ಸಾಕಷ್ಟು ಜನ ರಕ್ತದಾನ ಮಾಡಲು ಮುಂದೆ ಬರುತ್ತಿದ್ದರು. ರಕ್ತದಾನ ಶಿಬಿರಗಳು ನಡೆಯದೇ ಇದ್ದರೂ ತುರ್ತು ಇದ್ದಾಗ ಮೊಬೈಲ್ ಮೆಸೇಜ್ ನೋಡಿಯೇ ಅನೇಕರು ರಕ್ತದಾನ ಮಾಡಿದ್ದಾರೆ. ಆದರೆ, ಈಗ ಸಾಕಷ್ಟು ಹುಡುಕಾಡುವಂತಹ ಪರಿಸ್ಥಿತಿ ಬಂದಿದೆ.
    – ಅನಿಲಕುಮಾರ ಶೆಟ್ಟಿ ರಕ್ತದಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts