More

    ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ

    ಧಾರವಾಡ: ಜಿಲ್ಲೆಯಲ್ಲಿ ಮತದಾರರ ಯಾದಿ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಮತಗಟ್ಟೆ ಮಟ್ಟದ ಅಕಾರಿಗಳಿಗೆ ಸಮರ್ಪಕ ತರಬೇತಿ ನೀಡಿ ಮತದಾರರ ಯಾದಿ ನೋಂದಣಿಯ ನಮೂನೆ 6 ಮತ್ತು 7 ಹಾಗೂ ಉಳಿದ ದಾಖಲೆಗಳ ನಿರ್ವಹಣೆ ಅಚ್ಚುಕಟ್ಟಾಗಿ ನಡೆಯಬೇಕು. ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ಹಿರಿಯ ಐಎಎಸ್ ಅಧಿಕಾರಿ ಹಾಗೂ ಮತದಾರರ ಯಾದಿ ಪರಿಷ್ಕರಣೆಯ ಜಿಲ್ಲಾ ವೀಕ್ಷಕಿ ತುಳಸಿ ಮದ್ದಿನೇನಿ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಮತದಾರರ ಯಾದಿ ವಿಶೇಷ ಪರಿಷ್ಕರಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯ ಜನಸಂಖ್ಯೆ ಹಾಗೂ ನೋಂದಾಯಿತ ಮತದಾರರ ಅನುಪಾತ ಕ್ರಮಬದ್ಧವಾಗಿರಬೇಕು. ಮತದಾರರು 2 ಕಡೆಗಳಲ್ಲಿ ಹೆಸರು ಹೊಂದಿದ್ದರೆ ಗುರುತಿಸಿ ಸೂಕ್ತ ದಾಖಲೆಗಳೊಂದಿಗೆ ತೆಗೆದು ಹಾಕಲು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಮತದಾರರ ನೋಂದಣಿಗಾಗಿ ಇಬ್ಬರು ನೋಂದಣಾಧಿಕಾರಿಗಳು ಹಾಗೂ 7 ಜನ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಎಲ್ಲ 1,634 ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 592 ಬಿಎಲ್​ಒಗಳು ಸ್ಥಳೀಯ ಮತಗಟ್ಟೆಗಳಲ್ಲಿಯೇ ನೋಂದಣಿಯಾದವರಾಗಿದ್ದಾರೆ. ಬಿಎಲ್​ಒಗಳು ಮತದಾರರ ನೋಂದಣಿಗಾಗಿ ನೀಡುವ ನಮೂನೆ 6, 7, 8 ಹಾಗೂ 8 (ಎ) ಅರ್ಜಿಗಳ ನಿರ್ವಹಣೆಯಲ್ಲಿ ಲೋಪ ಎಸಗಬಾರದು. 1950 ಸಹಾಯವಾಣಿ ಮೂಲಕ ದಾಖಲಾಗುವ ದೂರು ಮತ್ತು ಅಹವಾಲುಗಳನ್ನು ಸಕಾಲದಲ್ಲಿ ಪರಿಹರಿಸಬೇಕು. ಆನ್​ಲೈನ್ ಆಧಾರಿತ ದೂರು ನಿರ್ವಹಣಾ ವ್ಯವಸ್ಥೆ ಕಾಲಮಿತಿಯೊಳಗೆ ನಡೆಯಬೇಕು. ಮತದಾರರ ಜಾಗೃತಿಗಾಗಿ ಸ್ವೀಪ್ ಚಟುವಟಿಕೆಗಳು ನಿರಂತರವಾಗಿರಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ನ. 18ರಂದು ಪ್ರಕಟವಾಗಿರುವ ಮತದಾರರ ಕರಡುಪಟ್ಟಿ ಎಲ್ಲ ತಹಸೀಲ್ದಾರ್ ಕಚೇರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿವೆ. ಮುಖ್ಯ ಚುನಾವಣಾ ಅಧಿಕಾರಿಗಳ ವೆಬ್​ಸೈಟ್ ಹಾಗೂ ಜಿಲ್ಲಾಡಳಿತದ ವೆಬ್​ಸೈಟ್​ನಲ್ಲಿ ಆನ್​ಲೈನ್​ನಲ್ಲಿ ಸಾರ್ವಜನಿಕರು ಮತದಾರರ ಪಟ್ಟಿ ವೀಕ್ಷಿಸಬಹುದು. ಜಿಲ್ಲೆಯಲ್ಲಿ ಡಿ. 13ರಂದು ಮತದಾರರ ಯಾದಿ ಪರಿಷ್ಕರಣೆ ವಿಶೇಷ ಆಂದೋಲನ ನಡೆಯಲಿದೆ ಎಂದರು.

    ಜಿ.ಪಂ. ಸಿಇಒ ಡಾ. ಬಿ. ಸುಶೀಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪ ವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಹಾಗೂ ಎಲ್ಲ ತಹಸೀಲ್ದಾರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts