More

    ದಂಡದಲ್ಲೂ ಕೋಟಿ ಗಳಿಸಿದ ಪಾಲಿಕೆ

    ಹುಬ್ಬಳ್ಳಿ: ಹು-ಧಾ ಅವಳಿ ನಗರದ ಸ್ಥಿರಾಸ್ತಿ ಮಾಲೀಕರು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿ ಜತೆಗೆ ಮಹಾನಗರ ಪಾಲಿಕೆಗೆ ದಂಡ ರೂಪದಲ್ಲಿಯೇ ದೊಡ್ಡ ಮೊತ್ತವನ್ನು ಸಂದಾಯ ಮಾಡುತ್ತಿದ್ದಾರೆ. ಇದು ಕೋಟಿ ಲೆಕ್ಕದಲ್ಲಿದೆ. ಇದರಿಂದ ಕಳೆದ 3 ವರ್ಷಗಳ ಅವಧಿಯಲ್ಲಿ ಪಾಲಿಕೆಗೆ ಅನಾಯಾಸವಾಗಿ 28.85 ಕೋಟಿ ರೂ. ಆದಾಯ ಬಂದು ಸೇರಿದೆ.

    ಆಸ್ತಿ ತೆರಿಗೆ ಪಾವತಿಸಲು ವಿಳಂಬವಾದಲ್ಲಿ ಸ್ಥಿರಾಸ್ತಿ ಮಾಲೀಕರು ದಂಡ ಕಟ್ಟಬೇಕಾಗುತ್ತದೆ. ಹೀಗೆ 2019-20ನೇ ಸಾಲಿನಲ್ಲಿ ಜನವರಿ 7ರವರೆಗೆ 7.48 ಕೋ. ರೂ. ದಂಡ ತುಂಬಿದ್ದಾರೆ. ಈ ಮೊತ್ತ ವರ್ಷಾಂತ್ಯದ ವೇಳೆ 10 ಕೋ. ರೂ. ದಾಟಬಹುದು. ಏಕೆಂದರೆ ಪ್ರಸಕ್ತ ಸಾಲಿನಲ್ಲಿ ಪಾಲಿಕೆಗೆ ಆಸ್ತಿ ತೆರಿಗೆ ರೂಪದಲ್ಲಿ ಇನ್ನೂ 24 ಕೋ.ರೂ. ಬರಬೇಕಿದೆ. ಸ್ಥಿರಾಸ್ತಿ ಮಾಲೀಕರು 2018-19ರಲ್ಲಿ 9.11 ಕೋ. ರೂ. ಹಾಗೂ 2017-18ರಲ್ಲಿ 12.26 ಕೋ.ರೂ. ದಂಡ ತುಂಬಿರುವ ಮಾಹಿತಿ ‘ವಿಜಯವಾಣಿ’ಗೆ ಲಭ್ಯವಾಗಿದೆ.

    ಆಸ್ತಿ ಮಾಲೀಕರು ಆಯಾ ಸಾಲಿನ ತೆರಿಗೆಯನ್ನು ಅದೇ ಸಾಲಿನಲ್ಲಿ ಪಾವತಿಸಬೇಕು. ಏಪ್ರಿಲ್​ನಲ್ಲಿ ಪಾವತಿಸಿದರೆ ಶೇ. 5ರಷ್ಟು ರಿಯಾಯಿತಿ ಸಿಗುತ್ತದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಜುಲೈ ತಿಂಗಳಿಂದ ದಂಡ ಆಕರಣೆ ಪ್ರಾರಂಭ. ಜುಲೈನಿಂದ ವರ್ಷಾಂತ್ಯ (ಮಾರ್ಚ್ ತಿಂಗಳು)ದವರೆಗೆ ಪ್ರತಿ ತಿಂಗಳಿಗೆ ಶೇ. 2 ರಷ್ಟು ದಂಡ ವಿಧಿಸಲಾಗುತ್ತದೆ. ಅಂದರೆ, ಮಾರ್ಚ್ ನಲ್ಲಿ ಆಸ್ತಿ ತೆರಿಗೆ ಪಾವತಿಸಿದರೆ ಶೇ. 18ರಷ್ಟು ದಂಡ ಕಟ್ಟಬೇಕು. ಮಾರ್ಚ್​ನಲ್ಲೂ ಕಟ್ಟದಿದ್ದರೆ ಮುಂದಿನ ಸಾಲಿನ ಏಪ್ರಿಲ್​ಗೆ ಶೇ. 24ರಷ್ಟು ದಂಡ ಆಕರಿಸಲಾಗುತ್ತದೆ. ಇದು ಸ್ವಯಂ ಘೊಷಿತ ಆಸ್ತಿ ತೆರಿಗೆ ಪದ್ಧತಿಯ ಬಳುವಳಿ. 2005ರಿಂದಲೇ ರಾಜ್ಯದಲ್ಲಿ ಇದು ಜಾರಿಯಲ್ಲಿದೆ.

    ಹು-ಧಾ ಅವಳಿ ನಗರದಲ್ಲಿ ವಸತಿ ಯೋಗ್ಯ, ವಾಣಿಜ್ಯ, ಕೈಗಾರಿಕೆ, ಉದ್ದಿಮೆ ಸೇರಿ ಸುಮಾರು 2.65 ಲಕ್ಷ ಆಸ್ತಿಗಳಿವೆ. ಶೇ. 5ರಷ್ಟು ರಿಯಾಯಿತಿ ಇರುವುದರಿಂದ ಅವಳಿ ನಗರದ ಬಹುಪಾಲು ಆಸ್ತಿ ಮಾಲೀಕರು ಏಪ್ರಿಲ್ ತಿಂಗಳಲ್ಲಿಯೇ ತೆರಿಗೆ ಪಾವತಿಸುತ್ತಾರೆ. ಆ ತಿಂಗಳಲ್ಲಿ ಹು-ಧಾ ಒನ್ ಕೇಂದ್ರಗಳಲ್ಲಿ ಉದ್ದನೆಯ ಸರದಿ ಸಾಲು ಕಂಡು ಬರುತ್ತದೆ. ಎಲ್ಲ ಕೌಂಟರ್​ಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಆಸ್ತಿ ತೆರಿಗೆ ರೂಪದಲ್ಲಿ ಪಾಲಿಕೆಗೆ ಏಪ್ರಿಲ್ ಒಂದೇ ತಿಂಗಳಲ್ಲಿ 30-35 ಕೋ. ರೂ. ಜಮೆ ಆಗಿರುತ್ತದೆ.

    ಸಕಾಲದಲ್ಲಿ ತೆರಿಗೆ ಪಾವತಿಸುವಂತೆ, ರಿಯಾಯಿತಿಯ ಪ್ರಯೋಜನ ಪಡೆಯುವಂತೆ ಹಾಗೂ ದಂಡ ಕ್ರಮದಿಂದ ತಪ್ಪಿಸಿಕೊಳ್ಳುವಂತೆ ಮಹಾನಗರ ಪಾಲಿಕೆ ಪ್ರತಿ ವರ್ಷ ಮುಂಚಿತವಾಗಿಯೇ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವ, ಹು-ಧಾ ಒನ್ ಕೇಂದ್ರಗಳಲ್ಲಿ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸುವ ಮೂಲಕ ತಿಳಿವಳಿಕೆ ನೀಡಲಾಗುತ್ತದೆ. ಆದರೂ, ಏಪ್ರಿಲ್-ಮೇ-ಜೂನ್ ತಿಂಗಳನ್ನು ಮೀರಿ ದಂಡದೊಂದಿಗೆ ಆಸ್ತಿ ತೆರಿಗೆ ಪಾವತಿಸುವ ಜನರಿದ್ದಾರೆ ಎಂಬುದು ಅಚ್ಚರಿಯ ಸಂಗತಿ. ಅದು ಸಹ ಕೋಟಿ ಕೋಟಿ ಲೆಕ್ಕದಲ್ಲಿ ದಂಡ ಪಾವತಿಸಿರುವುದು ಸಖೇದಾಶ್ಚರ್ಯ.

    ಶೇ. 18ರಿಂದ 24ರಷ್ಟು ದಂಡ ಆಕರಣೆ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಗಳಿವೆ. ಇದು ಬಡ್ಡಿ ನಿಯಂತ್ರಣ ಕಾಯ್ದೆಗೆ ವಿರುದ್ಧವಾದದ್ದು ಎಂದು ಅವರು ಅಭಿಪ್ರಾಯಿಸುತ್ತಾರೆ. ಯಾರಾದರೂ ವಾರ್ಷಿಕವಾಗಿ ಶೇ. 20ಕ್ಕಿಂತ ಹೆಚ್ಚು ಬಡ್ಡಿ ಆಕರಣೆ ಮಾಡಿದರೆ ಕಾನೂನು ಬಾಹಿರ ಎಂದು ಒಂದು ಕಡೆ ಸರ್ಕಾರವೇ ಹೇಳುತ್ತದೆ. ಮೀಟರ್ ಬಡ್ಡಿ ಎಂದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಇನ್ನೊಂದೆಡೆ ಆಸ್ತಿ ತೆರಿಗೆ ಮೇಲೆ ಶೇ. 18ರಿಂದ 24ರಷ್ಟು ದಂಡ ಆಕರಣೆ ಮಾಡಲಾಗುತ್ತಿದೆ.

    ಈ ದಂಡದ ಮೊತ್ತವನ್ನು ಹು-ಧಾ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಬಾಬತ್ತಿನಲ್ಲಿ ಪ್ರತ್ಯೇಕವಾಗಿ ತೆಗೆದುಕೊಳ್ಳುತ್ತದೆ. ಆಯಾ ಸಾಲಿನ ತೆರಿಗೆ ಸಂಗ್ರಹಣೆ ಗುರಿ, ಸಂಗ್ರಹವಾದ ಮೊತ್ತ ಹಾಗೂ ಬಾಕಿ-ಈ ಶೀರ್ಷಿಕೆಯಡಿ ದಂಡದ ಮೊತ್ತ ಸೇರ್ಪಡೆಯಾಗುವುದಿಲ್ಲ.

    ಆಸ್ತಿ ತೆರಿಗೆ ಪಾವತಿ ವಿಳಂಬವಾದಲ್ಲಿ ಪ್ರತಿ ತಿಂಗಳು ಶೇ. 2ರಷ್ಟು ದಂಡ ಆಕರಣೆ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಪಾಲಿಕೆ ಏನೂ ಮಾಡಲು ಬರುವುದಿಲ್ಲ. ಕಾನೂನಿಗೆ ತಿದ್ದುಪಡಿ ತರಲು ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು.

    | ಡಾ. ಪಾಂಡುರಂಗ ಪಾಟೀಲ,

    ಮಾಜಿ ಮೇಯರ್

    ಆಸ್ತಿ ತೆರಿಗೆ ಪಾವತಿ ವಿಳಂಬವಾದಲ್ಲಿ ಪ್ರತಿ ತಿಂಗಳು ಶೇ. 2ರಷ್ಟು ದಂಡ ಆಕರಣೆ ಮಾಡಲು ಕಾನೂನಿನಲ್ಲಿಯೇ ಅವಕಾಶವಿದೆ. ಸಕಾಲದಲ್ಲಿ ತೆರಿಗೆ ಪಾವತಿಸುವಂತೆ, ರಿಯಾಯಿತಿಯ ಲಾಭ ಪಡೆಯುವಂತೆ ಪ್ರತಿ ವರ್ಷ ಸಾಕಷ್ಟು ಪ್ರಚಾರ ಮಾಡಲಾಗುತ್ತದೆ.

    | ಪಿ.ಡಿ. ಗಾಳೆಮ್ಮನವರ್

    ಉಪ ಆಯುಕ್ತರು (ಕಂದಾಯ) ಹುಧಾಮಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts