More

    ತೆರಿಗೆ, ಬಾಡಿಗೆ ವಸೂಲಿಗೆ ಬಿಗಿ ಕ್ರಮಕೈಗೊಳ್ಳಿ

    ತೀರ್ಥಹಳ್ಳಿ: ಸ್ಥಳೀಯಾಡಳಿತ ಬಜೆಟ್ ಸಿದ್ಧತೆಗೆ ಮುನ್ನ ಸಾರ್ವಜನಿಕರ ಸಲಹೆ ಆಧರಿಸಿ ಯೋಜನೆ ರೂಪಿಸುವ ಪರಂಪರೆ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಅತ್ಯಂತ ಪರಿಣಾಮಕಾರಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಸ್ಥಳೀಯ ಪಟ್ಟಣ ಪಂಚಾಯಿತಿಯ 2020-21ನೇ ಸಾಲಿನ ಆಯ-ವ್ಯಯ ತಯಾರಿಸುವ ಕುರಿತು ಶನಿವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮೂಲ ಸೌಕರ್ಯವನ್ನು ಕರಾರುವಕ್ಕಾಗಿ ನೀಡಬೇಕು. ಅದರೊಂದಿಗೆ ಪಪಂ ಸಂಪನ್ಮೂಲವನ್ನು ಕ್ರೋಡೀಕರಿಸುವ ತೆರಿಗೆ, ಕಟ್ಟಡಗಳ ಬಾಡಿಗೆ ಮುಂತಾದವುಗಳ ಸಂಗ್ರಹಣೆಯಲ್ಲಿ ಬಿಗಿಕ್ರಮ ಅನುಸರಿಸಬೇಕು ಎಂದು ಸೂಚಿಸಿದರು.

    ಬಹಳ ಮುಖ್ಯವಾಗಿ ರಸ್ತೆ, ಸ್ವಚ್ಛತೆ ಮುಂತಾದ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಬಜೆಟ್ ಮಂಡನೆಗೆ ಮುನ್ನ ಬಜೆಟ್​ನ ಸಾಧಕ ಬಾಧಕಗಳ ಕುರಿತು ಕರಡು ಪ್ರತಿಯನ್ನು ಗಮನಿಸುವುದಾಗಿಯೂ ತಿಳಿಸಿ ಅನಿವಾರ್ಯ ಇರುವ ಸಂಗತಿಗಳ ಬಗ್ಗೆಯೂ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

    ಸಭೆಯಲ್ಲಿ ಪ್ರಸ್ತಾಪವಾದ ಸಾರ್ವಜನಿಕ ಕ್ರೀಡಾಂಗಣದ ಕುರಿತು ಮಾತನಾಡಿದ ಶಾಸಕರು, ಈ ಕ್ರೀಡಾಂಗಣದ ಅಭಿವೃದ್ಧಿಗೆ ದೊಡ್ಡ ಮೊತ್ತದ ಅಗತ್ಯವಿದೆ. ಈ ಬಗ್ಗೆ ಲೋಕಸಭಾ ಸದಸ್ಯರ ನೆರವಿನೊಂದಿಗೆ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಅನುದಾನ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದರು.

    ಸಭೆಯಲ್ಲಿ ಬಹಳ ಮುಖ್ಯವಾಗಿ ರಸ್ತೆ, ಚರಂಡಿ, ಉದ್ಯಾನ ನಿರ್ವಹಣೆ, ವಾಹನಗಳ ರ್ಪಾಂಗ್ ವ್ಯವಸ್ಥೆ, ಮೀನು ಮಾರುಕಟ್ಟೆ ಸ್ವಚ್ಛತೆ, ಬಡವರಿಗೆ ನಿವೇಶನ ವಿತರಣೆ, ಪ್ರಮುಖ ಕೆರೆಗಳ ಒತ್ತುವರಿ ತೆರವು, ಸಾರ್ವಜನಿಕ ಕ್ರೀಡಾಂಗಣ ಅಭಿವೃದ್ಧಿ, ಮಂಗಗಳು ಮತ್ತು ಬೀದಿ ನಾಯಿಗಳ ಹಾವಳಿ ನಿಯಂತ್ರಣ, ಕಸ ವಿಲೇವಾರಿ, ಕೊಳಚೆ ನೀರಿನ ಸದ್ಬಳಕೆ, ಸಿಸಿ ಕ್ಯಾಮರಾ ಅಳವಡಿಕೆ ಮುಂತಾದ ವಿಚಾರಗಳು ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಪ್ರಭಾವಿಗಳ ಮನೆ ಮುಂದಿನ ಬೀದಿದೀಪಗಳು ಸದಾ ಉರಿಯುತ್ತವೆ. ಆದರೆ ಕೆಲವೆಡೆ ದೀಪಗಳೇ ಇಲ್ಲವಾಗಿದೆ ಎಂದೂ ನಾಗರಿಕರು ದೂರಿದರು.

    ಬೀದಿ ವ್ಯಾಪಾರಿಗಳ ಸ್ಥಳಾಂತರಿಸಿ: ಪಪಂ ಮಳಿಗೆಗಳಿಂದ ಬರಬೇಕಿರುವ ಲಕ್ಷಾಂತರ ರೂ. ಬಾಡಿಗೆ ಬಾಕಿ ವಸೂಲಿ ಮತ್ತು ಸರ್ಕಾರದಿಂದ ಬಂದಿರುವ ಅನುದಾನವನ್ನು ಸಕಾಲದಲ್ಲಿ ಬಳಸಿಕೊಳ್ಳದಿರುವ ಬಗ್ಗೆ ಪಪಂ ಮಾಜಿ ಅಧ್ಯಕ್ಷ ಸಂದೇಶ್ ಜವಳಿ ಬೇಸರ ವ್ಯಕ್ತಪಡಿಸಿದರು. ನಿವೇಶನ ಹರಾಜಿನಿಂದ ಬಂದಿರುವ ಹಣ 1.75 ಕೋಟಿ ರೂ. ಬಳಸಿ ಪಪಂ ಮಳಿಗೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಬೀದಿ ವ್ಯಾಪಾರಿಗಳಿಂದಲೇ ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ತೀವ್ರ ಅಡಚಣೆ ಆಗುತ್ತಿದೆ. ಇದರ ಸಲುವಾಗಿ ಚರ್ಚ್ ರಸ್ತೆಯಲ್ಲಿ ಕಾದಿರಿಸಿರುವ ಸ್ಥಳಕ್ಕೆ ಇವರನ್ನು ಸ್ಥಳಾಂತರಿಸುವುದು ಸೂಕ್ತ ಎಂದರು.

    9 ಕೋಟಿ ರೂ. ಬಜೆಟ್ ಮಂಡನೆ: ಕಳೆದ ಸಾಲಿನಲ್ಲಿ 7.13 ಕೋಟಿ ರೂ. ಬಜೆಟ್ ಅಂಗೀಕಾರವಾಗಿದೆ. ಈ ಬಾರಿ 9 ಕೋಟಿ ರೂ.ಗಳ ಬಜೆಟ್ ಮಂಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಸಾಲಿನ ಮನೆ ಕಂದಾಯ 20 ಲಕ್ಷ ರೂ., ನೀರಿನ ಕರ 15 ಲಕ್ಷ ರೂ. ಬಾಕಿಯಿದೆ. ನೀರಿನ ಬಿಲ್ ಪಾವತಿಯನ್ನು ಸರಳೀಕರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಹೇಳಿದರು.

    ಹಿಂದಿನ ಪುರಸಭೆ ಮಾಜಿ ಅಧ್ಯಕ್ಷ ಡಾ. ಟಿ.ನಾರಾಯಣಸ್ವಾಮಿ, ಪಪಂ ಮಾಜಿ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಸೊಪ್ಪುಗುಡ್ಡೆ ರಾಘವೇಂದ್ರ, ಮಾಜಿ ಸದಸ್ಯರಾದ ನಯನಾ ಶೆಟ್ಟಿ, ಶಬಾನಂ, ನವೀನ್, ಸವಿತಾ ಉಮೇಶ್, ಸಿರಿಲ್ ಮಾರ್ಟಿಸ್, ಡಾನ್ ರಾಮಣ್ಣ, ಕೊಪ್ಪಲು ರಾಮಚಂದ್ರ, ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts