More

    ತಿಳಮಾತಿ ಕಡಲ ತೀರ ಅಭಿವೃದ್ಧಿಗೆ ಅಸಡ್ಡೆ

    ಸುಭಾಸ ಧೂಪದಹೊಂಡ ಕಾರವಾರ

    ಅತಿ ಅಪರೂಪದ ಪ್ರವಾಸಿ ಸ್ಥಳವಾದ ತಿಳಮಾತಿ ಕಡಲ ತೀರದ ಅಭಿವೃದ್ಧಿಗೆ ಬಂದಿದ್ದ ನಬಾರ್ಡ್ ಹಣವು ಅಧಿಕಾರಿಗಳು, ಜನಪ್ರತಿನಿಧಿಗಳ ವಿಳಂಬ ನೀತಿಯಿಂದಾಗಿ ವಾಪಸಾಗಿದೆ.

    ತಿಳಮಾತಿ ಕಡಲ ತೀರಕ್ಕೆ ತೆರಳಲು ಸೇತುವೆ, ರಸ್ತೆ ನಿರ್ವಣದ ಯೋಜನೆಗೆ ನಬಾರ್ಡ್ ನಿಂದ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಪ್ರವಾಸೋದ್ಯಮ ಇಲಾಖೆಗೆ 3.23 ಕೋಟಿ ರೂ. 2017 ರಲ್ಲಿ ಬಿಡುಗಡೆ ಆಗಿತ್ತು. 600 ಮೀಟರ್ ಉದ್ದ ರಸ್ತೆ ಹಾಗೂ ಸಮುದ್ರ ದಾಟಲು ಮಿನಿ ಸೇತುವೆ ನಿರ್ಮಾಣ ಈ ಯೋಜನೆಯಲ್ಲಿ ಸೇರಿದೆ.

    ಪ್ರವಾಸೋದ್ಯಮ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಜವಾಬ್ದಾರಿ ವಹಿಸಿತ್ತು. ಆದರೆ, ಕಾಮಗಾರಿ ಪ್ರಗತಿ ತೋರಿಸದ ಹಿನ್ನೆಲೆಯಲ್ಲಿ ನಬಾರ್ಡ್ ನೀಡಿದ್ದ ಹಣ ಭರವಸೆ ಪತ್ರದ 18 ತಿಂಗಳ ಅವಧಿ ಮುಗಿದು ಹೋಗಿದೆ. ಈಗ ಮತ್ತೆ ಹಣ ನೀಡುವಂತೆ ಮರು ಅರ್ಜಿ ಸಲ್ಲಿಸಲಾಗಿದ್ದು, ಹಣ ಬಿಡುಗಡೆಗೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

    ವಿಳಂಬವೇಕೆ?: ತಿಳಮಾತಿ ಕಡಲ ತೀರದಲ್ಲಿ ಕಿರು ಸೇತುವೆ ನಿರ್ವಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ 1 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ, ಸಮಗ್ರ ಅಭಿವೃದ್ಧಿಗೆ ಆ ಹಣ ಸಾಕಾಗದು ಎಂದು ಮರು ಕ್ರಿಯಾ ಯೋಜನೆ ಮಾಡಿ 3.23 ಕೋಟಿ ರೂ. ಕೇಳಲಾಗಿತ್ತು. ಆ ಹಣವೂ 2017ರಲ್ಲಿ ಮಂಜೂರಾಗಿತ್ತು. ಆದರೆ, ಶಾಸಕರಾಗಲಿ, ಸಚಿವರಾಗಲಿ ಈ ಬಗ್ಗೆ ಮೇಲುಸ್ತುವಾರಿ ವಹಿಸದ ಕಾರಣ ತೂಗು ಸೇತುವೆ ಮಾಡಬೇಕೋ..? ಕಾಲು ಸಂಕ ಮಾಡಬೇಕೋ..? ಮೆಟ್ಟಿಲು ಮಾಡಬೇಕೋ ಅಥವಾ ರಸ್ತೆ ಮಾಡಬೇಕೋ ಎಂಬ ಗೊಂದಲದಲ್ಲೇ ಲೋಕೋಪಯೋಗಿ ಇಲಾಖೆಯು ಎರಡು ವರ್ಷ ಸಮಯ ಹಾಳು ಮಾಡಿತು. ಈಗ ತಾಂತ್ರಿಕ ಬಿಡ್ ತೆರೆಯಲಾಗಿದೆ. ಆರ್ಥಿಕ ಬಿಡ್ ಟೆಂಡರ್ ಕರೆಯಲು ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಕಚೇರಿಗೆ ಹೋದಾಗ ನಬಾರ್ಡ್ ಹಣ ಭರವಸೆ ಪತ್ರದ ಅವಧಿ ಮುಕ್ತಾಯವಾಗಿರುವುದು ಗಮನಕ್ಕೆ ಬಂದಿದೆ.

    ಕಿನಾರೆಯ ವೈಶಿಷ್ಟ್ಯ: ವಿಶ್ವದಲ್ಲಿ ಬೆರಳೆಣಿಕೆಯಷ್ಟು ತೀರಗಳಲ್ಲಿ ಮಾತ್ರ ಕಪ್ಪು ಮರಳು ಸಿಗುತ್ತದೆ. ದೇಶದಲ್ಲಿ ನಾಲ್ಕು ಮಾತ್ರ ಕಪ್ಪು ಮರಳು ಕಡಲ ತೀರಗಳಿವೆ. ಇವುಗಳಲ್ಲಿ ಕಾರವಾರದ ಮಾಜಾಳಿ ಗ್ರಾಪಂ ವ್ಯಾಪ್ತಿಯ ತಿಳಮಾತಿ ಕೂಡ ಒಂದು. ಉಳಿದಂತೆ ಕೇರಳದ ಕೋವಾಲಂ, ಮಹಾರಾಷ್ಟ್ರದ ನವಪುರ, ಗುಜರಾತ್​ನ ದುಮಾಸ್ ತೀರಗಳಲ್ಲಿ ಕಪ್ಪು ಮರಳಿದೆ. ಸ್ಥಳೀಯ ಕೊಂಕಣಿ ಭಾಷೆಯಲ್ಲಿ ತಿಳ ಎಂದರೆ ಎಳ್ಳು, ಮಾತಿ ಎಂದರೆ ಮರಳು. ಅಂದರೆ. ಕಪ್ಪು ಎಳ್ಳಿನ ಮಾದರಿಯ ಮರಳಿರುವ ತೀರ ಎಂಬ ಹೆಸರು ಇದಕ್ಕೆ ಬಂದಿದೆ. ಸಮುದ್ರದಡಿ ಹಾಗೂ ಮೇಲೆ ಇರುವ ಕಪ್ಪು ಶಿಲೆಗಳ ಕಾರಣ ತೀರದ ಮರಳು ಕಪ್ಪಾಗಿರುತ್ತದೆ ಎಂಬುದು ಭೂಗರ್ಭ ಶಾಸ್ತ್ರಜ್ಞರ ಅಭಿಮತ. ಚಿಕ್ಕದಾಗಿದ್ದರೂ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ತೀರದ ಸೌಂದರ್ಯ ಹೇಳತೀರದು. ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದ ಗೋವಾದ ಅತಿ ಸಮೀಪದಲ್ಲೇ ಇದ್ದರೂ ಇಲ್ಲಿನ ಆಡಳಿತ ವರ್ಗದ ನಿರ್ಲಕ್ಷ್ಯಂದಾಗಿ ಮೂಲ ಸೌಕರ್ಯವಿಲ್ಲದೆ, ಪ್ರವಾಸಿಗರಿಂದ ದೂರವೇ ಇದೆ. ಇಲ್ಲಿಗೆ ಗುಡ್ಡ ಹತ್ತಿ, ಇಳಿದು ಕಾಲು ಹಾದಿಯಲ್ಲಿ ತೆರಳಬೇಕಿದೆ. ಸಮುದ್ರ ಉಬ್ಬರವಿದ್ದಲ್ಲಿ ಹಳ್ಳ ದಾಟಬೇಕಾಗುತ್ತದೆ.

    ಕಾಲಿಡಲೂ ಹೇಸಿಗೆ: ತಿಳಮಾತಿ ಕಡಲ ತೀರದ ಬಗ್ಗೆ ಸ್ಥಳೀಯ ಗ್ರಾಪಂ ಕೂಡ ನಿರ್ಲಕ್ಷ್ಯ ವಹಿಸಿದೆ. ತೀರ ಕಸದ ಆಗರವಾಗಿದೆ. ಪ್ಲಾಸ್ಟಿಕ್, ಬಟ್ಟೆ, ಎಲ್ಲದಕ್ಕಿಂತ ಹೆಚ್ಚಾಗಿ ಬಿಯರ್ ಬಾಟಲಿ, ಟಿನ್​ಗಳ ರಾಶಿ ತುಂಬಿ ಹೋಗಿದೆ. ತೀರಕ್ಕೆ ಹೋಗುವ ಕಾಲು ದಾರಿಯಲ್ಲಿ ಸ್ಥಳೀಯರು ಬಯಲು ಶೌಚ ಮಾಡುತ್ತಿದ್ದು, ಕಾಲಿಡಲೂ ಹೇಸಿಗೆಪಡುವ ಪರಿಸ್ಥಿತಿ ಇದೆ. ಅಲ್ಲದೆ, ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಅಣಕಿಸುವಂತಿದೆ.

    ಆರ್ಥಿಕ ಮತ್ತು ತಾಂತ್ರಿಕ ಬಿಡ್​ಗಳಿಗೆ ಎಸ್​ಸಿ ಕಚೇರಿಯಿಂದ ಅನುಮತಿ ಬೇಕಿದೆ. ಇದರಿಂದಾಗಿ ಕಾಮಗಾರಿ ಪ್ರಾರಂಭಕ್ಕೆ ಕೊಂಚ ವಿಳಂಬವಾಗಿದೆ. ಈಗ ನಬಾರ್ಡ್ ಹಣ ಭರವಸೆ ಪತ್ರಕ್ಕೆ ಮತ್ತೆ ಮನವಿ ಸಲ್ಲಿಸಲಾಗಿದ್ದು, ಅದು ಸಿಕ್ಕ ನಂತರ ಕಾಮಗಾರಿ ಆರಂಭಿಸಲಾಗುವುದು. | ರಾಜು ಎಇಇ, ಪಿಡಬ್ಲ್ಯುಡಿ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts