More

    ಡಬ್ಬಾ ಅಂಗಡಿಗಳ ತೆರವು ಕಾರ್ಯ ನಿಲ್ಲಿಸಿ

    ಮುದ್ದೇಬಿಹಾಳ: ಪಟ್ಟಣದ ತಹಸೀಲ್ದಾರ್ ಕಚೇರಿಯ ದಕ್ಷಿಣ ಭಾಗದಲ್ಲಿ ಸರ್ಕಾರಿ ನಿವೇಶನದಲ್ಲಿ ಇಟ್ಟಿರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸದೆ ಬಡವರು ಬದುಕಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಡಬ್ಬಾ ಅಂಗಡಿಕಾರರು ಶುಕ್ರವಾರ ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

    ತಹಸೀಲ್ದಾರ್ ಕಚೇರಿ ಬಳಿ ಹುಡ್ಕೋ ರಸ್ತೆಗೆ ಹೊಂದಿಕೊಂಡು ಚಿಕ್ಕಪುಟ್ಟ ಹೊಟೇಲ್, ಕಬ್ಬಿನ ಹಾಲಿನ ಅಂಗಡಿ, ಝರಾಕ್ಸ್ ಅಂಗಡಿ, ಆನ್‌ಲೈನ್ ಕೇಂದ್ರಗಳನ್ನಿಟ್ಟುಕೊಂಡು ಬದುಕು ನಡೆಸುತ್ತಿದ್ದೇವೆ. ಇವರಲ್ಲಿ ಬಹುತೇಕರು ಅಂಗವಿಕಲರು, ವಿಧವೆಯರು, ಎಸ್‌ಸಿ- ಎಸ್‌ಟಿ, ಹಿಂದುಳಿದ ಕಡುಬಡವರು ಇದ್ದಾರೆ. ಇವರೆಲ್ಲರ ಬದುಕು ತಹಸೀಲ್ದಾರ್ ಕಚೇರಿಗೆ ಕೆಲಸ ಕಾರ್ಯಗಳಿಗಾಗಿ ಬರುವವರನ್ನು ನಂಬಿಕೊಂಡು ನಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಕಚೇರಿಯ ಹತ್ತಿರದಿಂದ ಎಲ್ಲರನ್ನೂ ಖಾಲಿ ಮಾಡಿಸಿದರೆ ಬೇರೆ ಕಡೆಗಳಲ್ಲಿ ಇವರೆಲ್ಲರ ಬದುಕು ನಡೆಯುವುದೇ ಇಲ್ಲ. ಬಡವರಾದ ನಮ್ಮ ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿನ ವೃದ್ಧರ ಆರೈಕೆ, ಕುಟುಂಬ ನಿರ್ವಹಣೆ ಕಠಿಣವಾಗುತ್ತದೆ. ಮಕ್ಕಳ ಶಿಕ್ಷಣ ಮತ್ತು ವ್ಯಾಪಾರಕ್ಕಾಗಿ ಬಡ್ಡಿ ರೂಪದಲ್ಲಿ, ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಹಣ ತಂದಿದ್ದು ಅಂಗಡಿಗಳನ್ನೇ ಕಿತ್ತುಹಾಕಿದರೆ ಸಾಲ ಮರಳಿಸಲಾಗದೆ ಆತ್ಮಹತ್ಯೆ ಸಂದರ್ಭ ಬರಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ತಕ್ಷಣ ಅಂಗಡಿಗಳನ್ನು ತೆರವುಗೊಳಿಸದೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ಕೆಲವು ತಿಂಗಳು ಇದ್ದ ಸ್ಥಳದಲ್ಲೇ ಬದುಕಲು ಕಾಲಾವಕಾಶ ನೀಡಬೇಕು. ಇದರಿಂದ ನಮ್ಮ ಸಾಲದಲ್ಲಿ ಸ್ವಲ್ಪವನ್ನಾದರೂ ತೀರಿಸಿ ಮುಕ್ತರಾಗುತ್ತೇವೆ. ಅಂಗಡಿಕಾರರಿಂದ ಅವ್ಯವಸ್ಥೆ ಕಂಡು ಬಂದಿದ್ದರೆ ಅಂಥವರನ್ನು ಕರೆಸಿ ಸೂಕ್ತ ತಿಳಿವಳಿಕೆ, ಎಚ್ಚರಿಕೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಬಿ.ವಿ.ಪಾಟೀಲ, ಎಸ್.ಬಿ.ಕಡೇಮನಿ, ರವಿ ನಾಯಕ, ಜೆ.ಎನ್.ನದಾಫ್, ಕೆ.ಪಿ.ಲಮಾಣಿ, ಎಸ್.ಎಸ್.ಸಜ್ಜನ, ಎಸ್.ಎಲ್.ನಾಯ್ಕೋಡಿ, ಆರ್.ಪಿ.ಲಮಾಣಿ, ಆನಂದ ಬಿ.ಎಚ್., ಸಿ.ಎಸ್.ಬಿರಾದಾರ, ಎಂ.ಎಚ್.ಬಡಿಗೇರ ಸೇರಿ 32 ಜನರು ಮನವಿಗೆ ಸಹಿ ಮಾಡಿದ್ದಾರೆ.

    ವೀಡಿಯೋ ವೈರಲ್
    ಡಬ್ಬಾ ಅಂಗಡಿ ಕಿತ್ತಿಸಲು ಮುಂದಾಗಿರುವ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರ ಬಗ್ಗೆ ಅಂಗಡಿಕಾರನೊಬ್ಬ ಅವಾಚ್ಯ ಭಾಷೆ ಬಳಸಿ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದು ತಹಸೀಲ್ದಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರತೊಡಗಿದೆ. ಮೊದಲು ಕೂಡ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡಿರುವ ಕೆಲವರು ಬಡವರ ಶೋಷಣೆ ಮಾಡುತ್ತಾರೆ. ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಂದಿಗೆ ಏಜಂಟರ ಹಾಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಡಬ್ಬಾ ಅಂಗಡಿ ತೆರವುಗೊಳಿಸುವ ಒತ್ತಾಯ ಹೆಚ್ಚಾಗಿತ್ತು. ಇದೀಗ ತಹಸೀಲ್ದಾರ್ ಅವರನ್ನೇ ಅವಾಚ್ಯವಾಗಿ ನಿಂದಿಸಿರುವ ಆ ವ್ಯಕ್ತಿಯಿಂದಾಗಿ ಎಲ್ಲ ಅಂಗಡಿಕಾರರು ಆತಂಕಕ್ಕೀಡಾಗಿದ್ದಾರೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts