More

    ಟೌನ್‌ಹಾಲ್‌ನಲ್ಲಿರುವ ದೇವಾಲಯ, ದರ್ಗಾ ತೆರವಿಗೆ ಸಿದ್ಧತೆ

    ತುಮಕೂರು: ಟೌನ್‌ಹಾಲ್‌ನಲ್ಲಿರುವ ದರ್ಗಾ, ನಾಗರಕಟ್ಟೆ ಸೇರಿ ನಗರದ 7 ಸ್ಥಳಗಳಲ್ಲಿ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗಿರುವ ದೇವಾಲಯ, ದರ್ಗಾ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ.
    ನಗರದ ಚಿಲುಮೆ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಟೂಡಾ ಆಯುಕ್ತ ಯೋಗಾನಂದ ಸಾರ್ವಜನಿಕರ ಅಭಿಪ್ರಾಯ ಪಡೆದರು.

    ಜಿಲ್ಲಾಧಿಕಾರಿ ಮಾತನಾಡಿ, ಕೋರ್ಟ್ ಸೂಚನೆ ಹೊರತಾಗಿಯೂ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲರೂ ಕಟ್ಟಡಗಳ ತೆರವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಡಳಿತ ಯಾವುದೇ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ, ಒತ್ತುವರಿಯಾಗಿದ್ದರೆ ತೆರವು ಮಾಡುತ್ತೇವೆ, ಜಮೀನು ಯಾರಿಗಾದರೂ ಸೇರಿದ್ದರೆ ಪರಿಹಾರ ನೀಡುತ್ತೇವೆ ಎಂದರು.

    ಸಭೆಯ ಆರಂಭದಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಮಾತನಾಡಿ, ಇಂತಹ ಸಭೆಗಳು ಹಿಂದೆಯೂ ಸಾಕಷ್ಟು ನಡೆದಿದೆ. ಕಣಿ ಕೇಳುವ ಬದಲಾಗಿ ಧೈರ್ಯವಾಗಿ ಕಾನೂನು ಪಾಲಿಸಿ ಎಂದು ಸಲಹೆ ನೀಡಿದರು.
    ಶಿವಕುಮಾರ ಸ್ವಾಮೀಜಿ ವೃತ್ತದ ಅಲ್ಲಾಸಾಬ್ ಘೋರಿ ಅಧ್ಯಕ್ಷ ಮೊಹಮದ್ ಮಾತನಾಡಿ, ನಮ್ಮ ಘೋರಿ ರಸ್ತೆಯಿಂದ ಸಾಕಷ್ಟು ದೂರದಲ್ಲಿದೆ, ಎಲ್ಲ ದಾಖಲೆ ಹೊಂದಿದ್ದೇವೆ ಎಂದು ಕಟ್ಟಡ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದರು.

    ಹಿಂಜಾವೇ ಮುಖಂಡ ಜಿ.ಎಸ್.ಬಸವರಾಜು ಮಾತನಾಡಿ, ಕೋತಿತೋಪು ಇರುವ ಜಾಗ ವಕ್ಫ್‌ಬೋರ್ಡ್ ಆಸ್ತಿಯಾಗಿದೆ. ಆದರೆ, ಸ್ವಾಮೀಜಿ ವೃತ್ತದ ದಾಖಲೆ ಒಪ್ಪತಕ್ಕದ್ದಲ್ಲ ಎಂದು ಮೊಹಮದ್ ಮಾತಿಗೆ ಆಕ್ಷೇಪಿಸಿದರು.
    ಕುಣಿಗಲ್ ರಸ್ತೆ ಬನಶಂಕರಿ ದೇವಾಲಯದ ಬಗ್ಗೆ ಸ್ಥಳೀಯ ರೇವಣ್ಣಸಿದ್ದಯ್ಯ ಮಾತನಾಡಿ, ಕಾಲು ದಾರಿ, ಬಂಡಿಜಾಡು ಇಂದು ನೂರು ಅಡಿ ರಸ್ತೆಯಾಗಿದೆ, ಬನಶಂಕರಿ ಮುಖ್ಯರಸ್ತೆ 42 ಅಡಿ ಇದ್ದು ಪಾಲಿಕೆ 40 ಅಡಿ ಮಾತ್ರ ಬಯಸಿದೆ, ಇಲ್ಲಿ ತೆರವಿನ ಪ್ರಶ್ನೆ ಏಕೆ ಎಂದರು.
    ಕುಣಿಗಲ್ ಮುಖ್ಯರಸ್ತೆಯಲ್ಲಿ ನಮ್ಮಪ್ರಕಾರ 3 ಮೀ. ಒತ್ತುವರಿಯಾಗಿದ್ದು ತೆರವುಗೊಳಿಸಲು ನಮ್ಮ ಒಪ್ಪಿಗೆ ಇದೆ. ಪಾಲಿಕೆ ಪ್ರಕಾರ 4 ಮೀ ಎಂದು ಹೇಳುತ್ತಿದ್ದು ಮತ್ತೊಮ್ಮೆ ಅಳತೆ ಮಾಡಿ ಕಾರ್ಯಾಚರಣೆ ಮಾಡಿ ಎಂದರು.

    ಜೆ.ಸಿ.ರಸ್ತೆ ಅನ್ನಪೂರ್ಣೇಶ್ವರಿ ದೇವಾಲಯ ಸಂಪೂರ್ಣ ಚರಂಡಿ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿದೆ ಎಂದು ಟೂಡಾ ಆಯುಕ್ತ ಯೋಗಾನಂದ್ ಸಭೆಗೆ ಮಾಹಿತಿ ನೀಡಿದರು. ಕೋರ್ಟ್ ಆದೇಶ ಪಾಲನೆ ನಮ್ಮೆಲ್ಲರ ಕರ್ತವ್ಯ, ಮನುಷ್ಯ ಧರ್ಮ ಮುಖ್ಯವಾಗಲಿ. ಆಸ್ತಿ ನಿಮ್ಮದೇ ಆದರೂ ತೆರವಿಗೆ ಜಿಲ್ಲಾಡಳಿತ ಮುಂದಾಗಲೇಬೇಕು. ಅಗತ್ಯವಿರುವ ಕಡೆ ಪರಿಹಾರ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದರು.

    ಟೌನ್‌ಹಾಲ್ ದರ್ಗಾ ತೆರವಿಗೆ ಆಕ್ಷೇಪ!: ಬಿಜಿಎಸ್ ವೃತ್ತದ ಸಿದ್ಧಗಂಗಾ ಕಾಲೇಜು ಮುಂಭಾಗದಲ್ಲಿರುವ ದರ್ಗಾ ರಾಜ್ಯ ವಕ್ಫ್‌ಬೋರ್ಡ್‌ಗೆ ಸೇರಿದ್ದು, ಎಲ್ಲ ದಾಖಲೆಗಳಿವೆ ಎಂದು ವಕೀಲೆ ಫರ್ಹಾನಾ ಸಭೆಯಲ್ಲಿ ವಾದ ಮಂಡಿಸಿದರು. ಮತ್ತೊಬ್ಬ ವಕೀಲ ಇಮ್ತಿಯಾಜ್ ಮಾತನಾಡಿ, 1947ಕ್ಕಿಂತ ಮುಂಚಿತವಾಗಿಯೇ ದರ್ಗಾವನ್ನು ವಕ್ಫ್‌ಬೋರ್ಡ್‌ಗೆ ನೀಡಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿಲ್ಲ. ಆದ್ದರಿಂದ ಈ ದರ್ಗಾಕ್ಕೆ ಕೋರ್ಟ್ ತೀರ್ಪು ಅನ್ವಯವಾಗುವುದಿಲ್ಲ ಎಂದು ವಾದಿಸಿದರು. ನಾಗರಕಟ್ಟೆಗೆ ಪೂಜೆ ಸಲ್ಲಿಸಲು 1989ರಲ್ಲಿ ಜಿಲ್ಲಾಡಳಿತ ಅವಕಾಶ ನೀಡಿರುವ ದಾಖಲೆ ನಮ್ಮ ಬಳಿಯಿದೆ, ಸಾರ್ವಜನಿಕ ಹಿತದೃಷ್ಟಿಯಿಂದ ತೆರವುಗೊಳಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಜಿ.ಕೆ.ಶ್ರೀನಿವಾಸ್ ಹೇಳಿದರು.

    ಮುಂದಿನ ವಾರದಲ್ಲಿ ಒತ್ತುವರಿ ತೆರವು ಆರಂಭವಾಗಲಿದೆ. ಎಲ್ಲರೂ ಕೋರ್ಟ್ ಆದೇಶ ಪಾಲಿಸಲೇಬೇಕು, ಈ ಬಗ್ಗೆ ಪೊಲೀಸ್ ರಕ್ಷಣೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಶಾಂತಿ ಕದಡುವ ವದಂತಿಗಳಿಗೆ ಕಿವಿಗೊಡಬಾರದು.

    ಡಾ.ಕೆ.ರಾಕೇಶ್‌ ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts