More

    ಜೀವನಶೈಲಿಯೇ ರೋಗಕ್ಕೆ ಕಾರಣ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಜನರಲ್ಲಿ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದ್ದು, ತುರ್ತಾಗಿ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಿ ಮುನ್ನಡೆಯಬೇಕು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ ಹೇಳಿದರು.
    ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಚಿಕ್ಕವೀರೇಶ್ವರ ಸ್ವಾಮೀಜಿ 73ನೇ ಪುಣ್ಯಾರಾಧನೆ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ಚಿನ್ನದ ಕಂತಿ ಪ್ರಶಸ್ತಿ ಸ್ವೀಕರಿಸಿದ ಅವರು, ಫ್ರಿಜ್, ಟಿವಿ, ಮೊಬೈಲ್, ಕಂಪ್ಯೂಟರ್ನಂಥ ಆಧುನಿಕ ವಸ್ತುಗಳು ಮನುಷ್ಯನ ಮನಶಾಂತಿ ಹಾಳು ಮಾಡುವುದರ ಜತೆಗೆ ಅನಾರೋಗ್ಯಕ್ಕೂ ಕಾರಣವಾಗುತ್ತಿವೆ ಎಂದರು.
    ಹೃದಯಾಘಾತ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಸಾಮಾನ್ಯವಾಗುತ್ತಿದೆ. 20-25 ವಯಸ್ಸಿನ ಯುವಕರು ಹೃದಯಾಘಾತ, ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಬದುಕಿನ ನೈಜತೆ, ಸರಳತೆ, ಸಹಜತೆ, ಅವಿಭಕ್ತ ಕುಟುಂಬ ಕಣ್ಮರೆ ಆಗುತ್ತಿರುವುದೇ ಅಧಿಕ ಸಮಸ್ಯೆಗಳಿಗೆ ಮೂಲ. ಮನುಷ್ಯ ಮನುಷ್ಯನೊಂದಿಗೆ ಮಾತನಾಡುವುದನ್ನು ಬಿಟ್ಟು ಮೊಬೈಲ್ ದಾಸರಾಗುತ್ತಿರುವುದರಿಂದ ಖಿನ್ನತೆ, ಏಕಾಂಗಿತನ, ನಿರಾಶೆ ಹುಟ್ಟಿಕೊಳ್ಳುತ್ತಿದೆ. ಒತ್ತಡದಿಂದ ಮುಕ್ತರಾಗಿ ಎಲ್ಲರೊಂದಿಗೂ ಪ್ರೀತಿಯಿಂದ ನಗುತ್ತ ಮಾತನಾಡುವುದೇ ದಿವ್ಯ ಔಷಧ ಎಂದು ತಿಳಿಹೇಳಿದರು.
    ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ ಆಶೀರ್ವಚನ ನೀಡಿ, ಜಯದೇವ ಸಂಸ್ಥೆ ಮೂಲಕ ಡಾ.ಮಂಜುನಾಥ ನಾಡಿನ ಜನರ ಹೃದಯ ಕಾಪಾಡುವ ಹೃದಯವಂತ ವೈದ್ಯರಾಗಿದ್ದಾರೆ. ಹೀಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
    ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಮಮದಾಪುರ ಶ್ರೀ ಅಭಿನವ ಮುರುಘೇಂದ್ರ ಸ್ವಾಮೀಜಿ, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯ, ಮುಳವಾಡದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ನೇತೃತ್ವದಲ್ಲಿ ಶಾಸಕ ಬಸವರಾಜ ಮತ್ತಿಮೂಡ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದರು.
    ಚಿಂತಕ ಸುಭಾಷ ರಾಠೋಡ್ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಉದ್ಯಮಿ ಬಸವರಾಜ ಭೀಮಳ್ಳಿ, ವೈದ್ಯರಾದ ಡಾ.ಶರಣಬಸಪ್ಪ ಹರವಾಳ, ಡಾ.ವೀರೇಶ ಪಾಟೀಲ್ ಹೆಬ್ಬಾಳ, ಸ್ವಾಗತ ಸಮಿತಿ ಅಧ್ಯಕ್ಷ ಶಿವಾನಂದ ಸಾಹುಕಾರ ಉಪ್ಪಿನ, ಪಾಲಿಕೆ ಸದಸ್ಯ ಶಿವು ಸ್ವಾಮಿ ಇತರರಿದ್ದರು. ಶ್ರವಣಕುಮಾರ ಮಠ ಪ್ರಾರ್ಥಿಸಿದರು. ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಣೆ ಮಾಡಿದರು. ರವಿ ಶಹಾಪುರಕರ ವಂದಿಸಿದರು. 

    ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ 300 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಮಾಚ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮೂರು ವರ್ಷಗಳಿಂದ ಜಯದೇವ ಹೃದ್ರೋಗ ಸಂಸ್ಥೆಯಿಂದ ಎರಡು ಲಕ್ಷಕ್ಕೂ ಅಧಿಕ ಜನ ಚಿಕಿತ್ಸೆ ಪಡೆದುಕೊಂಡಿದ್ದಾರೆ.
    | ಡಾ.ಸಿ.ಎನ್. ಮಂಜುನಾಥ
    ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts