More

    ಜೀತ ಪದ್ಧತಿಯಲ್ಲಿ ಸಿಲುಕಿದ್ದ 19 ಮಂದಿ ಅಮಾಯಕರ ರಕ್ಷಣೆ:ಇಬ್ಬರು ಆರೋಪಿಗಳ ಬಂಧನ

    ಹಾಸನ: ಜೀತ ಪದ್ಧತಿ ನಿಷೇಧಿಸಿದ್ದರೂ ಕೂಡ ಬಡವರು, ನಿರ್ಗತಿಕರನ್ನು ಕೂಲಿ ಕೆಲಸಕ್ಕಾಗಿ 19 ಮಂದಿಯನ್ನು ಕೂಡಿ ಹಾಕಿ ಅವರಿಂದ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿ ಚಲುವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
    ಈ ಸಂಬಂಧ ಬುಧವಾರ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ಹರಿರಾಂ ಶಂಕರ್, ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿ ಚಲುವನಹಳ್ಳಿ ಗ್ರಾಮದ ಸರ್ವೆ ನಂಬರ್ 25ರಲ್ಲಿ ಬೇರೆ ಬೇರೆ ಜಿಲ್ಲೆಯ 28ರಿಂದ 45 ವರ್ಷದೊಳಗಿನ 19 ಪುರುಷರನ್ನು ಕೂಡಿ ಹಾಕಿ ಇವರಿಂದ ಶುಂಠಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಾಣಾವರ ಪೊಲೀಸರು, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಇನ್ನಿತರರನ್ನು ಒಳಗೊಂಡ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಅಮಾಯಕರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಅರಸೀಕೆರೆ ತಾಲ್ಲೂಕಿನ ಅಣ್ಣಾಯ್ಕನಹಳ್ಳಿ ಮೇಗಳಹಟ್ಟಿ ಗ್ರಾಮದ ಮುನೇಶ (44), ಮತ್ತು ಇದೇ ಗ್ರಾಮದ ಅನಿಲ್ ಅಲಿಯಾಸ್ ನರೇಶ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 19 ಮಂದಿ ನಿರ್ಗತಿಕರನ್ನು ರಕ್ಷಿಸಿ, ಅವರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಘಟನೆ ವಿವರ
    ಅರಸೀಕೆರೆ ಸೇರಿದಂತೆ ಜಿಲ್ಲೆಯ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ನಿರ್ಗತಿಕರು, ಭಿಕ್ಷೆ ಬೇಡುವವರು ಮತ್ತು ಒಬ್ಬಂಟಿಯಾಗಿರುವವರನ್ನು ಅನಿಲ್ ಎಂಬಾತ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರ ಮಾಹಿತಿ ಸಂಗ್ರಹಿಸಿ ಅವರ ಹಿನ್ನೆಲೆ ಅರಿತು ‘ನಿಮಗೆ ಆಶ್ರಯ ನೀಡುವ ಜತೆಗೆ ದಿನಕ್ಕೆ 500 ರೂ. ಕೂಲಿ ನೀಡುವುದಾಗಿ,’ ಆಸೆ ತೋರಿಸಿ ಕರೆದುಕೊಂಡು ಹೋಗಿ ಇವರನ್ನು ಚಲುವನಹಳ್ಳಿ ಜಮೀನಿನ ಶೆಡ್‌ನಲ್ಲಿ ಕೂಡಿ ಹಾಕಲಾಗುತ್ತಿತ್ತು.
    ಅರಸೀಕೆರೆಯ ಚಿತ್ರ ಸ್ಟುಡಿಯೋ ಮಾಲೀಕನಾದ ಮುನೇಶ್ ಎಂಬಾತ ಶುಂಠಿ ಕೆಲಸದ ಗುತ್ತಿಗೆದಾರನಾಗಿದ್ದಾನೆ. ಈತ ತಾಲ್ಲೂಕಿನ ಸುತ್ತಮುತ್ತಲ ಕೃಷಿ ಕೆಲಸಗಳನ್ನು ಗುತ್ತಿಗೆ ಪಡೆದುಕೊಳ್ಳುತ್ತಿದ್ದ. ನಂತರ ಈ ಅಮಾಯಕರನ್ನು ವಾಹನವೊಂದರಲ್ಲಿ ತುಂಬಿಕೊಂಡು ಹೋಗಿ ಕೆಲಸ ಮಾಡಿಸಿಕೊಂಡು ನಂತರ ಅವರನ್ನು ಮತ್ತೆ ಅದೇ ವಾಹನದಲ್ಲಿ ಕರೆದುಕೊಂಡು ಬಂದು ಶೆಡ್‌ಗೆ ಬಿಡಲಾಗುತ್ತಿತ್ತು.
    19 ಜನ ಪುರುಷರಿಗೆ ಹೊರಗಿನ ಪ್ರಪಂಚದ ಯಾವುದೇ ಅರಿವು ಸಿಗದಂತೆ ಮತ್ತು ಯಾರ ಸಂಪರ್ಕಕ್ಕೂ ಸಿಗದ ರೀತಿಯಲ್ಲಿ ಕೂಡಿ ಹಾಕಲಾಗಿತ್ತು. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಎಬ್ಬಿಸಿ ಕೆಲಸಕ್ಕೆ ಕರೆದುಕೊಂಡು ಹೋದರೆ ಮತ್ತೆ ಸಂಜೆ 6 ಗಂಟೆಗೆ ಮತ್ತೆ ಶೆಡ್‌ಗೆ ಕರೆತಂದು ಬಿಡಲಾಗುತ್ತಿತ್ತು. ಪ್ರತಿದಿನ ಅವರಿಗೆ ತಿಂಡಿ, ಊಟದ ಜತೆಗೆ ಕುಡಿಯಲು ಮದ್ಯ ಕೊಡುತ್ತಿದ್ದುದನ್ನು ಬಿಟ್ಟರೆ 2 ತಿಂಗಳಿನಿಂದ ಒಂದು ರುಪಾಯಿ ಹಣವನ್ನು ಯಾರಿಗೂ ನೀಡಿಲ್ಲ ಎಂದು ಎಸ್ಪಿ ವಿವರ ನೀಡಿದರು.
    ದೌರ್ಜನ್ಯಕ್ಕೊಳಗಾದ 19 ಮಂದಿಯನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಅವರನ್ನು ರಕ್ಷಣೆ ಮಾಡಲಾಗಿದೆ. ಆರೋಪಿ ಮುನೇಶ್‌ನನ್ನು ಸ್ಥಳದಲ್ಲೇ ಬಂಧಿಸಿದ್ದು, ಪರಾರಿಯಾಗಿದ್ದ ಅನಿಲ್‌ನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಕೆಲಸಕ್ಕೆ ಬಳಸುತ್ತಿದ್ದ 2 ಮಚ್ಚು, 10 ಪ್ಲಾಸ್ಟಿಕ್ ಬಕೆಟ್‌ಗಳು, 4 ಕಬ್ಬಿಣದ ಕುಂಟಾಣಿಗಳು ಸೇರಿದಂತೆ ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದ 407 ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಪ್ರಕರಣವನ್ನು ಭೇದಿಸಿದ ಬಾಣಾವರ ಠಾಣೆಯ ಪಿಎಸ್‌ಐ ಅಜಿತ್‌ಕುಮಾರ್ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಹರಿರಾಂ ಶಂಕರ್ ಅಭಿನಂದಿಸಿದರು.

    ಹಳೇ ಚಾಳಿ ಬಿಡದ ಮುನೇಶ್
    ಈ ಹಿಂದೆಯೂ ಕೂಡ ಆರೋಪಿ ಮುನೇಶ್ 2018, 2022ರಲ್ಲಿ ಎರಡು ಬಾರಿ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಆ ನಂತರವೂ ಕೂಡ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದಾನೆ. ಈ ಹಿಂದೆಯೂ ಇಂತಹದ್ದೆ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ಅಮಾಯಕರನ್ನು ಹಿಂಸಿಸಿ ಅವರಿಂದ ದುಡಿಸಿಕೊಳ್ಳುತ್ತಿದ್ದ ದುರುಳ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ. ಪದೇಪದೆ ಇದೇ ರೀತಿಯ ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಆತನ ವಿರುದ್ಧ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸರಿಯಾದ ರೀತಿ ಕ್ರಮ ಕೈಗೊಳ್ಳದೇ ಇರುವುದರಿಂದಲೇ ಪದೇಪದೆ ಅಮಾಯಕರನ್ನು ಜೀತ ಪದ್ಧತಿಗೆ ತಳ್ಳುತ್ತಿದ್ದಾನೆ.

    ಗೂಂಡಾ ಕಾಯ್ದೆ ಪ್ರಕರಣಕ್ಕೆ ಚಿಂತನೆ: ಎಸ್‌ಪಿ
    ಮುನೇಶ್ ಈ ಹಿಂದೆ ನಾಲ್ಕು ಬಾರಿ ಜೀತ ಪದ್ಧತಿಗೆ ಅಮಾಯಕರನ್ನು ತಳ್ಳಿ ಜೈಲಿಗೆ ಹೋಗಿ ಬಂದರೂ ಕೂಡ ಪದೇಪದೆ ಇದನ್ನೇ ಮುಂದುವರಿಸುತ್ತಿರುವುದರಿಂದ ಈತನ ಮೇಲೆ ಗೂಂಡಾ ಕಾಯ್ದೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಚಿಂತನೆ ನಡೆಸಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದ ಕಾಯ್ದೆ, ಜೀತ ಪದ್ಧತಿ ಕಾಯ್ದೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts