More

    ಜಿಎಂಐಟಿ ಕಾಲೇಜಿನಲ್ಲಿ ಪದವಿ ಪ್ರದಾನ  -ಘನತ್ಯಾಜ್ಯ ನಿರ್ವಹಣೆಯಲ್ಲಿ ಆವಿಷ್ಕಾರವಾಗಲಿ -ಪ್ರೊ. ಕಟ್ಟೀಮನಿ 

    ದಾವಣಗೆರೆ: ಘನತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಸಾಕಷ್ಟು ಆವಿಷ್ಕಾರಗಳಿಗೆ ಅವಕಾಶಗಳಿವೆ. ಹಾಗಾಗಿ ಇದರಲ್ಲಿ ಸಂಶೋಧನೆಗೆ ತೊಡಗಬೇಕು ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ವಿ. ಕಟ್ಟೀಮನಿ ಇಂಜಿನಿಯರಿಂಗ್ ಪದವೀಧರರಿಗೆ ಸಲಹೆ ನೀಡಿದರು.
    ಇಲ್ಲಿನ ಜಿಎಂಐಟಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 18ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
    ದೇಶದಲ್ಲಿ ಬಡತನ, ಹಸಿವು ಹಾಗೂ ಲಿಂಗ ತಾರತಮ್ಯ ನಿವಾರಣೆ ನಿಮ್ಮಿಂದ ಆಗಬೇಕಿದೆ. ಜನರಿಗೆ ಶುದ್ಧ ನೀರು, ನೈರ್ಮಲ್ಯ ಕಲ್ಪಿಸಲು ಶ್ರಮಿಸಬೇಕು. ಮೂಲ ಸೌಲಭ್ಯ, ಕೈಗಾರಿಕೆ ಬೆಳವಣಿಗೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪಾತ್ರ ನಿಭಾಯಿಸಬೇಕಿದೆ ಎಂದರು.
    ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ(ಎಸ್‌ಟಿಇಎಂ) ಜಗತ್ತಿನಲ್ಲಿ ವೇಗವಾಗಿ ಮುಂದುವರಿದಿದ್ದು, ಯುವ ಎಂಜಿನಿಯರ್‌ಗಳು ಹೊಸ ಆವಿಷ್ಕಾರಗಳ ಮೂಲಕ ಜಗತ್ತನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.
    ಜೀವನದ ಪ್ರಮುಖ ಘಟ್ಟವಾದ ಪದವಿ ಹಂತವನ್ನು ಪೂರ್ಣಗೊಳಿಸಿದ್ದೀರಿ. ಕಠಿಣ ಪರಿಶ್ರಮದ ಮೂಲಕ ಜ್ಞಾನ, ತಂತ್ರಜ್ಞಾನ ಮತ್ತು ಕೌಶಲಗಳನ್ನು ಅಳವಡಿಸಿಕೊಳ್ಳಲು ಶ್ರಮಿಸಿದ್ದೀರಿ. ಕಲಿಕೆ ನಿರಂತರ. ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
    ತಂತ್ರಜ್ಞಾನ ಪ್ರಗತಿಯ ವೇಗವು ಉಸಿರುಕಟ್ಟುವ ವಾತಾವರಣ ನಿರ್ಮಿಸಿದೆ. ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್, 3-ಡಿ ಪ್ರಿಂಟಿಂಗ್, ಮತ್ತು ಇ-ಮೊಬಿಲಿಟಿ, ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ, ಸುಸ್ಥಿರ ಶಕ್ತಿ ಮತ್ತು ಗಾಳಿ, ಜಲವಿದ್ಯುತ್ ಮೊದಲಾದ ನವೀಕರಿಸಬಹುದಾದ ಇಂಧನ, ಒಳಚರಂಡಿ ಸಂಸ್ಕರಣಾ ವಿಜ್ಞಾನಗಳು ನಮ್ಮ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಜ್ಞಾನ-ತಂತ್ರಜ್ಞಾನದ ಪಾತ್ರ ಮಹತ್ವದ್ದು ಎಂದರು.
    ಭೀಮ ಸಮುದ್ರದ ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಜಿ.ಎಂ.ಲಿಂಗರಾಜು, ಸಿಇಒ ಯು.ಚಂದ್ರಶೇಖರ್, ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯ ಕೆ.ದಿವ್ಯಾನಂದ, ಪ್ರಾಚಾರ್ಯ ಎಂ.ಬಿ.ಸಂಜಯ್‌ಪಾಂಡೆ, ಬಿ.ಟಿ.ಬಕ್ಕಪ್ಪ ಇದ್ದರು. 9 ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts