More

    ಜಾನಪದ ಕಲೆ ಉಳಿವಿಗೆ ತರಬೇತಿ ಅಗತ್ಯ

    ಬಂಕಾಪುರ: ಜಾನಪದ ಕಲೆಗಳು ಉಳಿಯಬೇಕಾದರೆ ಶಾಲಾ ಕಾಲೇಜ್​ಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಹೇಳಿದರು.

    ಬಾಡದ ಕನಕ ಅರಮನೆ ಮುಂಭಾಗದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಾನಪದ ಸಂಕ್ರಾತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಶಾಲಾ ಕಾಲೇಜ್​ಗಳಲ್ಲಿ ಜಾನಪದ ತರಬೇತಿ ಜತೆಗೆ 18ರಿಂದ 35 ವಯಸ್ಸಿನ ಯುವಕರಿಗೆ ಚರ್ಮ ವಾದ್ಯ, ಜಾನಪದ ಕಲೆ ಹಮ್ಮಿಕೊಳ್ಳಲಾಗುತ್ತಿದೆ. ಇದಲ್ಲದೆ ಬಾಡದ ಪುಣ್ಯಕ್ಷೇತ್ರದಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ 7 ತಂಡಗಳಿಗೆ ಚರ್ಮ ವಾದ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಇದರಿಂದ ಈ ಭಾಗದ ಕಲಾವಿದರಿಗೆ ಅನುಕೂಲವಾಗಲಿದೆ ಎಂದರು.

    ಹಲವಾರು ಮಂಗಳಮುಖಿಯರು ವಿವಿಧ ಜಾನಪದ ಕಲೆಗಳನ್ನು ಕಲಿತಿದ್ದಾರೆ. ಆದರೆ, ಅವರಿಗೆ ಸರಿಯಾದ ವೇದಿಕೆ ಸಿಕ್ಕಿಲ್ಲ. ಅವರಿಗೆಲ್ಲ ಸಮರ್ಪಕ ವೇದಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಅವರಿಗೆ ಜೋಗತಿ ನೃತ್ಯ, ಚೌಟಗಿ ಪದ, ಹಲಗೆ, ಕಂಸಾಳೆ ಕಲೆಗಳ ತರಬೇತಿ ಕೊಡಲು ರೂಪುರೇಷೆ ಹಾಕಿಕೊಳ್ಳಲಾಗುತ್ತಿದೆ. ಕಲಾವಿದರು ಹಣದ ಹಿಂದೆ ಬೆನ್ನತ್ತಬಾರದು, ಕಲೆಯ ಹಿಂದೆ ಬೆನ್ನತ್ತಬೇಕು. ಮಾಡುವ ಕರ್ತವ್ಯದಲ್ಲಿ ಭಕ್ತಿ, ಶ್ರದ್ಧೆ ಕಾಣಬೇಕು. ದೇವರು ದೇವಸ್ಥಾನದಲ್ಲಿ ಇಲ್ಲ. ನಾವು ಮಾಡುವಂತಹ ಕಾಯಕದಲ್ಲಿದ್ದಾನೆ ಎಂದರು.

    ಬಾಡ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಮಾತನಾಡಿ, ಮುಂದಿನ ದಿನಗಳಲ್ಲಿ ಕನಕ ಅರಮನೆ ಆವರಣದಲ್ಲಿ ಕನಕದಾಸರನ್ನು ಆಧಾರವಾಗಿಟ್ಟುಕೊಂಡು ಅವರ ಕೀರ್ತನೆಗಳಲ್ಲಿನ ಜಾನಪದವನ್ನು ಜನರಿಗೆ ಉಣಬಡಿಸುವ ಕೆಲಸ ಮಾಡಲಾಗುತ್ತದೆ ಎಂದರು.

    ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ ಮಾತನಾಡಿದರು. ನಂತರ ಬಿ.ಮಂಜಮ್ಮ ಜೋಗತಿ ಅವರು ಜಿಲ್ಲೆಯ ಕಲಾವಿದರ ಕುಂದು ಕೊರತೆಗಳ ಕುರಿತು ಚರ್ಚೆ ನಡೆಸಿದರು. ಭಜನೆ, ಗೀಗೀ, ಕೋಲಾಟ, ಜಾನಪದ, ಲಾವಣಿ ಪದಗಳ ಕಾರ್ಯಕ್ರಮ ಮನಸೂರೆಗೊಂಡಿತು.

    ತಾ.ಪಂ. ಅಧ್ಯಕ್ಷೆ ಪಾರವ್ವ ಆರೇರ, ಎಚ್.ಪ್ರಕಾಶ, ರಂಗ ಶಿಕ್ಷಕ ಕೃಷ್ಣಮೂರ್ತಿ ಎನ್, ನಿಂಗಪ್ಪ ಬಾಡದ, ರಾಮಕೃಷ್ಣ ಆಲದಕಟ್ಟಿ, ಪ್ರಾಚಾರ್ಯ ಎಸ್.ವಿ. ಕುಲಕರ್ಣಿ, ಬಸವರಾಜ ಶಿಗ್ಗಾಂವಿ ಜಾನಪದ ಕಲಾ ತಂಡದವರು ಇತರರು ಇದ್ದರು.

    ಮಂಗಳಮುಖಿಯಾಗಿರುವ ಬಿ.ಮಂಜಮ್ಮ ಜೋಗತಿ ಅವರು, ಹೊಟ್ಟೆಪಾಡಿಗಾಗಿ ಜೋಗತಿ ನೃತ್ಯ ಕಲಿತು ಹಲವಾರು ಕಷ್ಟ ಕಾರ್ಪಣ್ಯಗಳ ಮಧ್ಯೆ ಬೆಳೆದಿದ್ದಾರೆ. ಇಂದು ಅದೇ ಕಲೆಯಿಂದಲೇ ಜನರ ಪ್ರೀತಿ, ವಿಶ್ವಾಸ ಗಳಿಸಿ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವುದು ದೇಶದ ಇತಿಹಾಸದಲ್ಲಿಯೇ ಮೊದಲು.
    | ಡಾ. ಜಗನ್ನಾಥ ಗೇನಣ್ಣವರ, ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts