More

    ಜಾತಿ-ಧರ್ಮದ ಸೆಳೆತ ಸಲ್ಲ; ಬಂಡಾಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹನುಮಂತಯ್ಯ ಅಭಿಮತ

    ವಿಜಯಪುರ: ಮನುಷ್ಯ ಹುಟ್ಟುವಾಗ ಜಾತಿ-ಧರ್ಮಗಳ ನಂಟಿಲ್ಲದೆ ವಿಶ್ವಮಾನವನಾಗಿರುತ್ತಾನೆ. ಆದರೆ ಬೆಳೆಯುತ್ತಾ ಜಾತಿ-ಧರ್ಮಗಳ ಸೆಳೆತಕ್ಕೆ ಸಿಲುಕಿ ಕುಬ್ಜ ಮಾನವನಾಗುತ್ತಾನೆ ಎಂದು ಬಂಡಾಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಲ್.ಹನುಮಂತಯ್ಯ ತಿಳಿಸಿದರು.

    ಪಟ್ಟಣದ ಗಾಂಧಿ ಚೌಕದ ಬಂಡಾಯ ಸಾಹಿತ್ಯ ದಿಗ್ಗಜ ಚನ್ನಣ್ಣ ವಾಲಿಕರ್ ಮಂಟಪದಲ್ಲಿ ಬೆಂ.ಗ್ರಾ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂ.ನಗರ ಜಿಲ್ಲಾ ಕಸಾಪ, ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಹಾಗೂ ಅಖಿಲ ಕರ್ನಾಟಕ ಮಿತ್ರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

    ಬಂಡಾಯ ಸಾಹಿತ್ಯ ಶತಮಾನಗಳ ಇತಿಹಾಸ ಹೊಂದಿದ್ದು, 12ನೇ ಶತಮಾನದಲ್ಲಿ ವಚನಗಳ ಮೂಲಕ ಕ್ರಾಂತಿ ಮಾಡಿದ ಬಸವಣ್ಣ ಹಾಗೂ ಶರಣರು ಅದಕ್ಕೂ ಮುನ್ನ ಭಗವಾನ್ ಬುದ್ಧ ಸಹ ಬಂಡಾಯ ಸಾಹಿತಿ ಆಗಿದ್ದು, ವಿವೇಚನಾ ಶಕ್ತಿ ಬೆಳೆಸುವ ಯಾವುದೇ ಸಾಹಿತ್ಯವನ್ನು ಎಲ್ಲರೂ ಒಪ್ಪಬೇಕಾಗಿದ್ದು, ಮೊದಲಿಗೆ ತನ್ನೊಳಗಣ್ಣು ತೆರೆದು ನೋಡುವಂತಾಗಬೇಕೆಂದರು.

    ಹಿರಿಯ ಬಂಡಾಯ ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿ, ನೊಂದವರಿಂದ ಹೊರಬರುವ ನುಡಿಯೇ ಬಂಡಾಯ ಸಾಹಿತ್ಯ ಎಂದು ತಿಳಿಸಿದರು.

    ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಪಟ್ಟಣದ ಇದೇ ವೇದಿಕೆಯಲ್ಲಿ 35 ವರ್ಷಗಳ ಹಿಂದೆ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್‌ರವರ ನೇತೃತ್ವದಲ್ಲಿ ನಡೆದಿದ್ದ ಪ್ರಥಮ ಬಂಡಾಯ ಸಾಹಿತ್ಯವನ್ನು ನೆನಪಿಸಿಕೊಂಡರು.

    ಬೆಂಗಳೂರು ನಗರ ಜಿಲ್ಲಾ ಉತ್ಸವಾಧ್ಯಕ್ಷ, ಎಎಸ್‌ವಿಎನ್‌ವಿ ಸಂಘದ ಕಾರ್ಯದರ್ಶಿ ಎಚ್.ಆರ್.ಬಸವರಾಜು, ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿದರು.

    ಮಾಜಿ ಸಚಿವೆ ಲಲಿತಾ ನಾಯಕ್ ರಾಷ್ಟ್ರ ಧ್ವಜಾರೋಹಣ, ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ್ ಪರಿಷತ್ತಿನ ಧ್ವಜಾರೋಹಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಶಿವಕುಮಾರ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರ ಗೀತೆ, ನಾಡಗೀತೆ ಹಾಗೂ ಕನ್ನಡ ಗೀತೆಯನ್ನು ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ಅವರ ನಿರ್ದೇಶನದಲ್ಲಿ ಮಹಾತ್ಮಾಂಜನೇಯ, ಕೆ.ಎಚ್.ಚಂದ್ರಶೇಖರ್, ಎ.ಎಂ.ನಾರಾಯಣಸ್ವಾಮಿ ಹಾಡಿದರು.

    ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಪುರಸಭಾ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಚೌಡೇಗೌಡ, ನೆಲಮಂಗಲ ಕಸಾಪ ಅಧ್ಯಕ್ಷ ಉಮೇಶ್‌ಗೌಡ, ಮುನಿವೆಂಕಟರಮಣಪ್ಪ ಚಾಲನೆ ನೀಡಿದರು.

    ಪ್ರಥಮ ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದ ರೂವಾರಿ ಸಿ.ನಾರಾಯಣಸ್ವಾಮಿ, ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಜಿಲ್ಲಾ ಕಸಾಪ ಉಪಾಧ್ಯಕ್ಷ ರಾಜಗೋಪಾಲ್, ಮತ್ತಿತರರು ಉಪಸ್ಥಿತರಿದ್ದರು.

    ಪ್ರಶಸ್ತಿ ಪ್ರದಾನ: ಹಿರಿಯ ಕವಿ ಟಿ.ಯಲ್ಲಪ್ಪ ಅವರಿಗೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ಕಾಳೇಗೌಡ ನಾಗವಾರ್ ಅವರಿಗೆ ಚನ್ನಣ್ಣ ವಾಲೀಕರ್ ಪ್ರಶಸ್ತಿ, ಎಚ್.ಎಲ್.ಪುಷ್ಪಾ ಅವರಿಗೆ ಡಿ.ಆರ್.ನಾಗರಾಜ್ ಪ್ರಶಸ್ತಿ, ಶಿಡ್ಲಘಟ್ಟ ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಕಾಸಿಂಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪ್ರಶಸ್ತಿ, ಕಾಮಾಕ್ಷಮ್ಮ ಅವರಿಗೆ ಡಾ.ಜ.ಚ.ನಿ. ಪ್ರಶಸ್ತಿ, ನಾಗಾರ್ಜುನ್ ಅವರಿಗೆ ಎಚ್.ನರಸಿಂಹಯ್ಯ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts