More

    ಜನರು ತಪ್ಪು ಭಾವನೆಯಿಂದ ಹೊರಬರಲಿ

    ಧಾರವಾಡ: ದೇಶದ ಭವಿಷ್ಯ ರೂಪಿಸುವಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಪಾತ್ರ ದೊಡ್ಡದು. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತ ಜ್ಞಾನ ವೃದ್ಧಿಯಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

    ಕರ್ನಾಟಕ ವಿದ್ಯಾವರ್ಧಕ ಸಂಘವು ಗದಿಗೆಯ್ಯ ಹೊನ್ನಾಪುರಮಠ ದತ್ತಿ ನಿಮಿತ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ’ ವಿಷಯ ಕುರಿತು ಅವರು ಮಾತನಾಡಿದರು.

    ಪಾಲಕರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ವ್ಯಾಮೋಹ ಹೆಚ್ಚಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತರೆ ಜಾಣರಾಗುವುದಿಲ್ಲ ಎಂಬ ಭಾವನೆ ಬಂದಿದೆ. ಇದು ಪೂರ್ವಾಗ್ರಹ ಪೀಡಿತ, ಅರ್ಥ ರಹಿತ ಮತ್ತು ತಪ್ಪು ಭಾವನೆಯಾಗಿದೆ. ಹೀಗಾಗಿ ತಪ್ಪು ಭಾವನೆಯಿಂದ ಹೊರಬಂದು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

    ಕನ್ನಡ ಶಾಲೆಗಳನ್ನು ಮುಚ್ಚಬೇಕು, ಕನ್ನಡ ಶಾಲೆ ಪ್ರವೇಶ ಸಂಖ್ಯೆ ಕುಸಿದಿದೆ ಎಂಬ ಇತರ ಕೂಗು ಪದೇ ಪದೆ ಕೇಳುತ್ತಿವೆ. ಇದಕ್ಕೆ ನೈಜ ಕಾರಣ ಕಂಡು ಹಿಡಿಯಬೇಕಿದೆ. ಇಂತಹ ಪರಿಸ್ಥಿತಿ ನಿರ್ವಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ಶಿಕ್ಷಕ ಪದದ ಅರ್ಥ ತಿಳಿದು ನಡೆಯಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ಇಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ಮೋಸ ಮಾಡುವ ಕೆಲಸ ನಡೆಯುತ್ತಿದೆ. ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕ. ಸಮಾಜದಲ್ಲಿ ಪ್ರತಿಯೊಬ್ಬರು ಶರಣರು, ಸಂತರು, ದಾರ್ಶನಿಕರ ಆದರ್ಶ ಮೈಗೂಡಿಸಿಕೊಂಡು ನಡೆಯಬೇಕು. ಇಂತಹ ಆದರ್ಶಗಳನ್ನು ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಿದ ಗದಿಗೆಯ್ಯ ಹೊನ್ನಾಪುರಮಠ ಸದಾ ಸ್ಮರಣೀಯರು ಎಂದರು.

    ದತ್ತಿದಾನಿ ಜಗದೇವಿ ಅಣ್ಣಾಸಾಹೇಬ ಹೊನ್ನಾಪುರಮಠ, ಪ್ರೊ. ವಿಮಲಾ ಪಾಟೀಲ, ಸದಾನಂದ ಶಿವಳ್ಳಿ, ವಿಶ್ವೇಶ್ವರಿ ಹಿರೇಮಠ, ಡಾ. ಹೇಮಾ ಪಟ್ಟಣಶೆಟ್ಟಿ, ಶಿವಶಂಕರ ಹಿರೇಮಠ, ಶಾರದಾ ಕೌದಿ, ಮಲ್ಲಿಕಾರ್ಜುನ ಚಿಕ್ಕಮಠ, ಬಿ. ಎಸ್. ಶಿರೋಳ, ಜಿ. ಬಿ. ಹೊಂಬಳ, ಕೆ. ಜಿ. ದೇವರಮನಿ, ಚನಬಸಪ್ಪ ಅವರಾದಿ, ಹೊನ್ನಾಪುರಮಠ ಪರಿವಾರದವರು, ಇತರರು ಇದ್ದರು. ನಿಂಗಣ್ಣ ಕುಂಟಿ ಸ್ವಾಗತಿಸಿದರು. ಪ್ರಕಾಶ ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts