More

    ಜನತಾ ಕರ್ಫ್ಯೂ ಮರೆತು ಸಂಚಾರ

    ಹುಬ್ಬಳ್ಳಿ: ಅಗತ್ಯ ವಸ್ತುಗಳ ಖರೀದಿಗೆ ವಿಧಿಸಿದ್ದ ಗಡುವಿನ ಅವಧಿ ಮುಗಿದರೂ ಮನಬಂದಂತೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ನಗರದಲ್ಲಿ ಶುಕ್ರವಾರ ಬಿಸಿ ಮುಟ್ಟಿಸಿದರು.

    ಜನತಾ ಕರ್ಫ್ಯೂವಿನ ಎರಡೂ ದಿನಗಳಲ್ಲಿ ಕಾಣದ ವಾಹನಗಳ ಸಂಚಾರ 3ನೇ ದಿನವಾದ ಶುಕ್ರವಾರ ಕಂಡುಬಂದಿತು. ಹೊಸೂರು ವೃತ್ತ, ಚನ್ನಮ್ಮ ವೃತ್ತ, ಹಳೇ ಕೋರ್ಟ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸವೋದಯ ಸರ್ಕಲ್, ಉಣಕಲ್ಲ, ವಿದ್ಯಾನಗರ ಸೇರಿ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರೂ, ಅನೇಕ ಬೈಕ್, ಆಟೋ ಹಾಗೂ ಕಾರುಗಳು ಒಳ ರಸ್ತೆಗಳಲ್ಲಿ ಸಂಚರಿಸುತ್ತಿದ್ದವು.

    ಕಳೆದ 2 ದಿನಗಳಲ್ಲಿ ರಸ್ತೆಗಳಲ್ಲಿ ಕಾಣಿಸದ ಆಟೋಗಳು ಶುಕ್ರವಾರ ಸಂಚಾರ ಪ್ರಾರಂಭಿಸಿದ್ದವು. ವಾಹನಗಳ ಸಂಚಾರ ಹೆಚ್ಚುತ್ತಿದ್ದಂತೆಯೇ ಪೊಲೀಸ್ ಆಯುಕ್ತ ಲಾಭೂರಾಮ್ ಸ್ವತಃ ರಸ್ತೆಗಿಳಿದು, ಅನಗತ್ಯ ಸಂಚರಿಸುತ್ತಿದ್ದ ವಾಹನಗಳ ಸವಾರರಿಗೆ ಬಿಸಿ ಮುಟ್ಟಿಸತೊಡಗಿದರು.

    ವಿವಿಧ ವೃತ್ತಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಸೂಕ್ತ ದಾಖಲೆಗಳು ಇಲ್ಲದ ವಾಹನಗಳನ್ನು ಸೀಜ್ ಮಾಡುವಂತೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಕೆಲ ಸಮಯ ಕಡಿಮೆಯಾಯಿತಾದರೂ, ಒಳ ರಸ್ತೆಗಳಲ್ಲಿ ಸಂಚಾರ ಹೆಚ್ಚಾಯಿತು. ಮಧ್ಯಾಹ್ನ ಸುಮಾರು 1 ಗಂಟೆಯ ನಂತರ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಸಂಖ್ಯೆ ಕಡಿಮೆಯಾಗಿದ್ದರಿಂದ ಅಲ್ಲಿಯೂ ವಾಹನಗಳ ಸಂಖ್ಯೆ ಹೆಚ್ಚಾಯಿತು.

    ಈ ಮಧ್ಯೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ನೀಡಿದ್ದ ಅವಧಿಯಲ್ಲಿ ಕಳೆದ ಎರಡು ದಿನಗಳಂತೆ ಸಾರ್ವಜನಿಕರು ತರಕಾರಿ, ಹಣ್ಣು, ದಿನಸಿ ಖರೀದಿಸಿದರು. ಆದರೆ, ಕಳೆದ 2 ದಿನಗಳಲ್ಲಿ ಕಾಣಿಸಿದಂತೆ ಹೆಚ್ಚು ದಟ್ಟಣೆ ಶುಕ್ರವಾರ ಕಂಡುಬರಲಿಲ್ಲ.

    ಧಾರವಾಡದಲ್ಲಿ ನಿಯಮ ಪಾಲನೆ

    ಧಾರವಾಡ: ಕೋವಿಡ್ 2ನೇ ಅಲೆ ತಡೆಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ಜನತಾ ಕರ್ಫ್ಯೂ ನಗರದಲ್ಲಿ ಕಟ್ಟು ನಿಟ್ಟಾಗಿ ಅನುಷ್ಠಾನಗೊಂಡಿದೆ. ಶುಕ್ರವಾರ ಸಹ 10 ಗಂಟೆ ಬಳಿಕ ಇಡೀ ನಗರ ಸ್ತಬ್ಧವಾಗಿತ್ತು. ಇದೀಗ ಕೆಲ ಬಡಾವಣೆಗಳಲ್ಲೇ ತರಕಾರಿ ವ್ಯಾಪಾರ ಆರಂಭಿಸಿದ್ದರಿಂದ ಮಾರುಕಟ್ಟೆಗೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಜನರನ್ನು ನಿಯಂತ್ರಣ ಮಾಡುವಲ್ಲಿ ಹೈರಾಣಾಗಿದ್ದ ಪೊಲೀಸರು ಕೊಂಚ ನಿರಾಳರಾಗಿದ್ದಾರೆ.

    ಅಗತ್ಯ ಸೇವೆ ಹೊರತುಪಡಿಸಿ ಬೇರೆ ಯಾರಿಗೂ ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಕಾರಣ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡುತ್ತಿದ್ದಾರೆ. ಇಲ್ಲವಾದಲ್ಲಿ ದಂಡ ವಿಧಿಸಿ, ವಾಹನ ಸೀಜ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಜನರ ನಿರ್ಲಕ್ಷ್ಯ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಜನರು ನಿಯಮ ಪಾಲಿಸಬೇಕು ಎಂದು ಜಿಲ್ಲಾಡಳಿತ ಹೇಳುತ್ತಲೇ ಇದೆ. ಜನರು ಮಾತ್ರ ಇದ್ಯಾವುದನ್ನೂ ಲೆಕ್ಕಿಸುತ್ತಿಲ್ಲ. ನಗರದ ಸುಭಾಷ್ ರಸ್ತೆ, ನೆಹರು ಮಾರುಕಟ್ಟೆ ಹಾಗೂ ಎಪಿಎಂಸಿಗೆ ತರಕಾರಿ, ಅಗತ್ಯ ವಸ್ತುಗಳ ಖರೀದಿಗೆ ತೆರಳುವ ಜನರು ನಿಯಮ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸದೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ ತೊಡಗಿರುವುದು ಸಾಮಾನ್ಯವಾಗಿತ್ತು.

    ಅಣ್ಣಿಗೇರಿ ಸಂತೆಯಲ್ಲಿ ಜನದಟ್ಟಣೆ

    ಅಣ್ಣಿಗೇರಿ: ಪಟ್ಟಣದ ವಾರದ ಸಂತೆ ದಿನವಾದ ಶುಕ್ರವಾರ ಕಿಕ್ಕಿರಿದು ಸೇರಿದ್ದ ಜನರು ಮಾಸ್ಕ್ ಧರಿಸದೇ ಪರಸ್ಪರ ಅಂತರ ಮರೆತು ತರಕಾರಿ ಖರೀದಿಸುವಲ್ಲಿ ನಿರತರಾಗಿದ್ದರು. ಕೋವಿಡ್ ನಿಯಮಾವಳಿಗಳನ್ನು ಯಾರೊಬ್ಬರು ಪಾಲಿಸಿದಂತೆ ಕಂಡು ಬರಲಿಲ್ಲ. ಅಗತ್ಯ ವಸ್ತು ಖರೀದಿಗೆ ಪ್ರತಿದಿನ ಬಳಗ್ಗೆ 6ರಿಂದ 10ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಜನರು ಅನಗತ್ಯ ಓಡಾಟ ನಡೆಸಿರುವುದು ಕಂಡು ಬಂದಿತು. ಈಗಾಗಲೇ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ನಾಲ್ಕು ಗಂಟೆ ಅವಕಾಶ ಮಾಡಿಕೊಡಲಾಗಿದೆ. ಈ ಅವಧಿಯಲ್ಲಿಯೇ ತಹಸೀಲ್ದಾರ್ ಕೊಟ್ರೇಶ ಗಾಳಿ ಅವರು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

    ಕಲಘಟಗಿಯಲ್ಲಿ ಬೇಕಾಬಿಟ್ಟಿ ಓಡಾಡಿದವರಿಗೆ ದಂಡ

    ಕಲಘಟಗಿ: ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಮೂರನೇ ದಿನವಾದ ಶುಕ್ರವಾರ ಸರ್ಕಾರಿ ಕಚೇರಿಗಳು ಹಾಗೂ ಬಸ್ ನಿಲ್ದಾಣ ಜನದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು.

    ಪ್ರಮುಖ ಬೀದಿಗಳಲ್ಲಿ ಅನಗತ್ಯವಾಗಿ, ಗುಂಪಾಗಿ ಓಡಾಡುವವರನ್ನು, ವಾಹನಗಳನ್ನು, ಮಾಸ್ಕ್ ಧರಿಸದವರನ್ನು ಹಿಡಿದು ದಂಡ ವಸೂಲಿ ಮಾಡುತ್ತಿರುವುದು ಕಂಡು ಬಂತು. ಬೆಳಗ್ಗೆ 10 ಗಂಟೆಗೂ ಮುನ್ನವೇ ಪೊಲೀಸರು, ಪಟ್ಟಣ ಪಂಚಾಯಿತಿ ಅಧಿಕಾರಿ ಸಿಬ್ಬಂದಿ ವರ್ಗದವರು, ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿರಿ, ಮುಚ್ಚರೀ.. ಎಂದು ಧ್ವನಿವರ್ಧಕಗಳಲ್ಲಿ ಎಚ್ಚರಿಸುತ್ತ, ವಾಹನದಲ್ಲಿ ಓಡಾಡುತ್ತಿದ್ದರು. ಅದರಂತೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿದರು.

    ಸಿಪಿಐ ಪ್ರಭು ಸೂರಿನ್, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಅವರು ಸಿಬ್ಬಂದಿಯೊಂದಿಗೆ ಪಟ್ಟಣದ ಬಸ್​ನಿಲ್ದಾಣ, ಹಳಿಯಾಳ, ಮುಂಡಗೋಡ, ಧಾರವಾಡದ ರಸ್ತೆ ಮಾರ್ಗಗಳಲ್ಲಿ ಕರೊನಾ ನಿಯಂತ್ರಣದ ಮುಂಜಾಗ್ರತೆ ಕ್ರಮವಾಗಿ ಕಾರ್ಯ ನಿರ್ವಹಿಸಿದರು.

    ಎಪಿಎಂಸಿಯಲ್ಲಿ ಅಂತರ ಕಾಯ್ದುಕೊಂಡರು..

    ನಿತ್ಯ ಗೌಜು ಗದ್ದಲ, ಜನದಟ್ಟಣೆಯಿಂದ ಕೂಡಿರುತ್ತಿದ್ದ ಹುಬ್ಬಳ್ಳಿ ಎಪಿಎಂಸಿ ಪ್ರಾಂಗಣದ ತರಕಾರಿ ಮಾರುಕಟ್ಟೆಯಲ್ಲಿ ಈಗ ಜನರು ಪರಸ್ಪರ ಅಂತರ ಕಾಯ್ದುಕೊಂಡು ವ್ಯಾಪಾರದಲ್ಲಿ ತೊಡಗುತ್ತಿದ್ದಾರೆ. ವ್ಯಾಪಾರಸ್ಥರು ಸಹ ಒಂದೇ ಮಳಿಗೆ ಎದುರು ಐದಾರು ಜನ ಖರೀದಿದಾರರನ್ನು ನಿಲ್ಲಿಸಿಕೊಂಡು ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದರು. ಪೊಲೀಸರು ಹಾಗೂ ಎಪಿಎಂಸಿ ಪದಾಧಿಕಾರಿಗಳು, ಅಧಿಕಾರಿಗಳು ಸೇರಿ ಒಂದು ವಾರದಿಂದ ಇದಕ್ಕಾಗಿ ಶ್ರಮಿಸಿ ಇದೀಗ ವ್ಯವಸ್ಥೆ ಮಾಡಿಕೊಟ್ಟಿದ್ದು, ದಟ್ಟಣೆ ಕಡಿಮೆಯಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts