More

    ಚುನಾವಣೆ ತಯಾರಿಗೆ ಷಾ ಸೂಚನೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಬೆಳಗಾವಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯದ ನಾಯಕರಿಗೆ ವಿಶೇಷ ಸೂಚನೆ ಕೊಟ್ಟಿಲ್ಲ. ಆದರೆ, ರಾಜ್ಯ ಮಟ್ಟದಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಲ್. ಸಂತೋಷ ಅವರು ಪಕ್ಷದ ಸಂಘಟನಾತ್ಮಕ ವಿಷಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಬಾಗಲಕೋಟೆ, ವಿಜಯಪುರಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ವಿಚಾರವಿದ್ದರೂ ಅಂತಿಮವಾಗಿ ಪಕ್ಷದ ಹಿರಿಯರು ಹೇಳುವುದನ್ನು ನಾವು ಕೇಳುತ್ತೇವೆ. ಅದೇ ಆಗಿರುವುದು. ಬೆಳಗಾವಿಯಲ್ಲಿ ಭಿನ್ನಮತ ಇಲ್ಲ ಎಂದರು.

    ಚುನಾವಣೆ ಅಭ್ಯರ್ಥಿಗಳ ಪಟ್ಟಿ ವಿಷಯಕ್ಕೆ ಸಂಬಂಧಿಸಿ ಸಮೀಕ್ಷಾ ಕಾರ್ಯಗಳು ನಡೆಯುತ್ತಿವೆ. ಆದರೆ ಯಾವುದೂ ಅಧಿಕೃತವಾಗಿ ಆಗಿಲ್ಲ ಎಂದರು.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಒಂದು ದಿನದ ಭೇಟಿ ಸಂಚಲನ ಉಂಟು ಮಾಡಿದ್ದು, ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಬಹಳ ಗಟ್ಟಿ ಹಾಗೂ ಪ್ರಬಲವಾಗಿದೆ. ಅದಕ್ಕೆ ಇನ್ನಷ್ಟು ಶಕ್ತಿ, ಹುರುಪು, ಹುಮ್ಮಸ್ಸು ಅಮಿತ್ ಷಾ ತುಂಬಿದ್ದಾರೆ. ಸಾರ್ವಜನಿಕರ ಭಾವನೆಗಳು ಎಲ್ಲ ಸಭೆಗಳಲ್ಲೂ ವ್ಯಕ್ತವಾಗಿದೆ ಎಂದರು.

    ಕಾಂಗ್ರೆಸ್​ನವರು ನಾವೇ ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಫೋಸು ಕೊಡುತ್ತಿದ್ದಾರೆ. ಯಾರು ಏನೇ ಹೇಳಲಿ, ಸತ್ಯ ಬೇರೆಯೇ ಇದೆ. ನಮ್ಮ ನಾಯಕರು ಬಂದ ಸಂದರ್ಭದಲ್ಲಿ ಅದು ಅಭಿವ್ಯಕ್ತವಾಗುತ್ತಿದೆ. ಜನ ದೊಡ್ಡ ಸಂಖ್ಯೆಯಲ್ಲಿ ಬರುವುದಷ್ಟೇ ಅಲ್ಲ, ಹುರುಪು, ಸ್ಪೂರ್ತಿ ವ್ಯಕ್ತವಾಗುತ್ತಿರುವುದರಿಂದ ನಮ್ಮ ಗೆಲವು ಖಂಡಿತ. ಪಕ್ಷದ ಸಂಘಟನೆ ಬೂತ್ ಮಟ್ಟದಿಂದಲೇ ಪ್ರಬಲವಾಗಿದೆ ಎಂದರು.

    ವ್ಯಕ್ತಿ ಆಧಾರಿತವಲ್ಲ: ಕಳೆದ ಒಂದೂವರೆ ವರ್ಷಗಳಿಂದ ಆರೋಪ ಪ್ರತ್ಯಾರೋಪವನ್ನು ಮಾಡಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಮಾತುಗಳನ್ನಾಡಿದಾಗಲೂ ನಾನು ಅತ್ಯಂತ ಸಂಯಮದಿಂದ ಉತ್ತರ ಕೊಟ್ಟಿದ್ದೇನೆ. ಕರ್ನಾಟಕದ ರಾಜಕೀಯ ಸಂಸ್ಕೃತಿ ವ್ಯಕ್ತಿ ಆಧಾರಿತವಲ್ಲ, ಅಥವಾ ದ್ವೇಷಾಧಾರಿತವಲ್ಲ. ವಿಷಯಾಧಾರಿತ ಹಾಗೂ ಅಭಿವೃದ್ಧಿಯಾಧಾರಿತವಾಗಿದೆ. ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಇಟ್ಟುಕೊಂಡೇ ಜನರ ಮುಂದೆ ಹೋಗುತ್ತಿದ್ದೇವೆ. ನಕಾರಾತ್ಮಕ ವಿಚಾರಗಳಿಲ್ಲ. ಕಾಂಗ್ರೆಸ್​ನವರು ವಿಶೇಷವಾಗಿ ಬಹಳ ಹತಾಶರಾಗಿದ್ದಾರೆ. ಅವರು ಬಳಸುವ ಭಾಷೆಯಲ್ಲಿಯೇ ಅದು ವ್ಯಕ್ತವಾಗಿದೆ. ಕರ್ನಾಟಕದ ರಾಜಕಾರಣದಲ್ಲಿ ಎಂದೆಂದೂ ಬಳಸದ ಭಾಷೆ ಬಳಸುವುದನ್ನು ನಾವು ಕಾಣುತ್ತಿದ್ದೇವೆ. ಇದು ಹತಾಶೆಯ ಸಂಕೇತ ಎಂದರು.

    ದೊಡ್ಡದು ಮಾಡಬೇಡಿ: ಮಂಡ್ಯ ಉಸ್ತುವಾರಿ ಬದಲಾವಣೆಯಾಗಿರುವುದಕ್ಕೆ ‘ಗೋ ಬ್ಯಾಕ್ ಅಶೋಕ್’ ಪ್ರತಿಭಟನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಯಾರೋ ನಾಲ್ವರು ಪ್ರತಿಭಟನೆ ಮಾಡುತ್ತಾರೆ. ಇದನ್ನು ಮಾಧ್ಯಮಗಳು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts