More

    ಗಿಡ ನೆಟ್ಟು ಪರಿಸರ ದಿನಾಚರಣೆ

    ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಗಿಡನೆಟ್ಟರು.
    ಶಾಲಾ ಆಡಳಿತಾಧಿಕಾರಿ ಕಾಂತಿ ನಾಯಕ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಾಯು, ಜಲಮಾಲಿನ್ಯ, ಭೂಮಾಲಿನ್ಯ ಅಲ್ಲದೆ ಶಬ್ದಮಾಲಿನ್ಯವೂ ಹೆಚ್ಚಾಗುತ್ತಿದೆ. ಇದರಿಂದ ಜನರು, ಪ್ರಾಣಿ, ಪಕ್ಷಿಗಳು ಅನಾರೋಗ್ಯಕ್ಕೀಡಾಗುತ್ತಿವೆ. ಆದ್ದರಿಂದ ಪ್ಲಾಸ್ಟಿಕ್ ತ್ಯಜಿಸಿ ಅತಿಯಾದ ವಾಹನ, ಮೊಬೈಲ್ ಬಳಕೆಯಿಂದ ದೂರ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಇಂಗಾಲದ ಡೈಆಕ್ಸೈಡ್ ಹೆಚ್ಚಿ ಕಲುಷಿತ ವಾತಾವರಣ ನಮಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಪರೀತ ಪರಿಣಾಮ ಬೀರುತ್ತಿದೆ. ವಾತಾವರಣದಲ್ಲಿ ಕ್ಲೋರೋಫ್ಲೋರೋ ಕಾರ್ಬನ್ ಸೂರ್ಯನ ನೇರವಾದ ಕಿರಣಗಳನ್ನು ತಡೆದು ನಮಗೆ ರಕ್ಷಣೆ ನೀಡುತ್ತಿದೆ. ಆದರೆ ಇದು ನಾಶವಾದರೆ ಮನುಷ್ಯ ಚರ್ಮದ ಕ್ಯಾನ್ಸರ್‌ನಂತಹ ಹಲವಾರು ರೋಗಗಳಿಗೆ ತುತ್ತಾಗುತ್ತಾನೆ. ಹಾಗಾಗಿ ಗಿಡಮರಗಳನ್ನು ಹೆಚ್ಚು ಬೆಳೆಸಿದರೆ ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿರುತ್ತದೆ. ಇದರಿಂದ ಮಳೆ-ಬೆಳೆ, ಪ್ರಾಣಿ-ಪಕ್ಷಿಗಳು ಹಾಗೂ ಮನುಷ್ಯರು ಆರೋಗ್ಯದಿಂದ ಸುರಕ್ಷಿತವಾಗಿರುತ್ತಾರೆ ಎಂದರು.
    ಮುಖ್ಯ ಶಿಕ್ಷಕ ಫಾರೂಕ್ ಮೊಹಮ್ಮದ್ ಮಾತನಾಡಿ, ಪರಿಸರ ಮಾಲಿನ್ಯಕ್ಕೆ ಬಹುಮುಖ್ಯ ಪ್ಲಾಸ್ಟಿಕ್ ಕಾರಣವಾಗಿರುವುದರಿಂದ ಮೊದಲು ಅದನ್ನು ಮುಕ್ತವನ್ನಾಗಿ ಮಾಡಬೇಕು. ನಮ್ಮ ಆಧುನಿಕ ಜೀವನದಲ್ಲಿ ಅನವಶ್ಯಕ ವಸ್ತುಗಳನ್ನು ಬಳಸುವ ಪರಿಣಾಮ ಅಮೇಜಾನ್ ಕಾಡು ಸುಮಾರು ಶೇ.60ರಷ್ಟು ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಜನರಲ್ಲಿ ನಿಧಾನವಾಗಿ ಪರಿಸರ ಜಾಗೃತಿ ಮೂಡುತ್ತಿದೆ. ಸ್ಥಳೀಯ ಆಡಳಿತದಿಂದ ರಾಜ್ಯ, ಕೇಂದ್ರ ಸರ್ಕಾರಗಳು ಹೆಚ್ಚಾಗಿ ಪರಿಸರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನಾವು ನಮ್ಮ ಪರಿಸರಕ್ಕೆ ಏನಾದರೂ ಕೊಡುಗೆ ನೀಡುವುದಾದರೆ ಮೊದಲು ಪ್ಲಾಸ್ಟಿಕ್ ತ್ಯಜಿಸಬೇಕು ಎಂದು ಕೋರಿದರು.
    ಮೈಸೂರನ್ನು ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿ ಮಾಡಲು ಪಣ ತೊಡಬೇಕು. ಪ್ರತಿಯೊಬ್ಬರೂ ಅವಶ್ಯಕತೆ ಇದ್ದಾಗ ಮಾತ್ರ ಇಂಧನ ವಾಹನ ಬಳಸಬೇಕು. ಪರಿಸರವನ್ನು ಮಾಲಿನ್ಯ ಮುಕ್ತಗೊಳಿಸಬೇಕೆಂದು ತಿಳಿಸಿದರು.
    ಪ್ರತಿಯೊಬ್ಬರೂ ಜಾಥಾ ಹೋಗುವಾಗ ಮನೆಗೊಂದು ಗಿಡ, ಊರಿಗೊಂದು ವನ, ಮರ ಬೆಳೆಸಿ-ನಾಡು ಉಳಿಸಿ, ಮರವನ್ನು ಬೆಳೆಸಿ-ಮಳೆಯನ್ನು ತರಿಸಿ, ಹಸಿರೇ ಉಸಿರು, ಕಾಡೇ ನಮ್ಮ ಜೀವನಾಡಿ, ಮರವನ್ನು ನೆಟ್ಟಿ-ಬರವನ್ನು ಅಟ್ಟಿ, ಪರಿಸರವನ್ನು ಉಳಿಸಿ-ಭವಿಷ್ಯವನ್ನು ಕಾಪಾಡಿ, ಪರಿಸರ ನಾಶ-ನಮ್ಮ ವಿನಾಶ ಎಂದು ಮಕ್ಕಳು ಘೋಷಣೆ ಕೂಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts