More

    ಗಾಳಿಪಟ ಉತ್ಸವಕ್ಕೆ ತೆರೆ

    ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಂಗಳವಾರ ಅದ್ದೂರಿ ತೆರೆ ಬಿದ್ದಿತು.

    ದೇಶ-ವಿದೇಶಗಳ ನೂರಕ್ಕೂ ಹೆಚ್ಚು ಗಾಳಿಪಟ ಹಾರಿಸುವ ಪಟುಗಳು ಪಾಲ್ಗೊಂಡು ತರಹೇವಾರಿ ಗಾಳಿಪಟ ಹಾರಿಸಿ ಸಾವಿರಾರು ಜನ ನೋಡುಗರಿಗೆ ಅದ್ಭುತ ಅನುಭವ ನೀಡಿದರು. ನೆದರ್​ಲ್ಯಾಂಡ್, ಇಂಗ್ಲೆಂಡ್, ಇಂಡೊನೇಷಿಯಾ ಸೇರಿ ಹತ್ತಾರು ದೇಶಗಳು, ಭಾರತದ ಗುಜರಾತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಪಟುಗಳು ಹಾರಿಸಿದ ಗಾಳಿಪಟಗಳು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿದವು.

    ಸತತ ಮೂರನೇ ವರ್ಷ ಅಚ್ಚುಕಟ್ಟಾಗಿ ಗಾಳಿಪಟ ಉತ್ಸವ ಆಯೋಜನೆ ಮಾಡುವ ಮೂಲಕ ಗಾಳಿಪಟದ ವೈಶಿಷ್ಟ್ಯತೆ ಪರಿಚಯಿಸಿದ ಕ್ಷಮತಾ ಸೇವಾ ಸಂಸ್ಥೆಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

    ದೇಶವಿದೇಶಗಳ ಪಟುಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು.

    ನಂತರ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಜನರ ಬೆಂಬಲದೊಂದಿಗೆ ಆರಂಭಿಸಿದ ಗಾಳಿಪಟ ಉತ್ಸವ ಅದ್ಭುತ ಯಶಸ್ಸು ಕಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಉತ್ಸವದ ಅಂಗವಾಗಿ ಮಕ್ಕಳು, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

    ಕ್ಷಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಜ್ಯೋತಿ ಪ್ರಲ್ಹಾದ ಜೋಶಿ, ಬಿಜೆಪಿ ಮುಖಂಡರು, ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಹಾಸ್ಯ ಸಂಜೆ: ಗಾಳಿಪಟ ಉತ್ಸವದ ವಿಶೇಷ ಆಕರ್ಷಣೆಯಾಗಿ ಮಂಗಳವಾರ ಸಂಜೆ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಹಾಮನೆ ಅವರ ತಂಡದಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಾಣೇಶ ಅವರ ತಂಡದ ಹಾಸ್ಯ ಚಟಾಕಿಗಳು ತಡರಾತ್ರಿವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದವು.

    ಪ್ರಧಾನಿ ಮೋದಿ, ಗೃಹ ಸಚಿವರ ಭಾವಚಿತ್ರದ ಪಟ

    ಹುಬ್ಬಳ್ಳಿ: ಇಲ್ಲಿನ ಕುಸುಗಲ್ಲ ರಸ್ತೆಯಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭಾವಚಿತ್ರವುಳ್ಳ ಗಾಳಿಪಟ ಹಾರಿಸುವ ಮೂಲಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಗಮನ ಸೆಳೆದರು.

    ಶೋಲೆ ಚಲನಚಿತ್ರದ ‘ಏ ದೋಸ್ತಿ ಹಮ್ ನಹಿ ತೋಡೆಂಗೆ…ತೋಡೆಂಗೆ ದಮ್ ಅಗರ..ತೇರಾ ಸಾಥ್ ನಾ ಚೋಡೆಂಗೆ….’ ಹಾಡಿನ ಸಾಲುಗಳನ್ನು ಬರೆದಿರುವ ಪ್ರಧಾನಿ ಹಾಗೂ ಗೃಹ ಸಚಿವರ ಭಾವಚಿತ್ರ ಹೊಂದಿದ ಗಾಳಿಪಟವನ್ನು ಸಚಿವ ಜೋಶಿ ಹಾರಿಸಿದರು.

    ಆಕ್ಟೋಪಸ್, ವಿಮಾನ ಮತ್ತಿತರ ಮಾದರಿಯ ಗಾಳಿಪಟಗಳನ್ನು ಸಹ ಸಚಿವ ಜೋಶಿ ಹಾರಿಸಿದರು. ನಂತರ ವಿದೇಶಗಳಿಂದ ಆಗಮಿಸಿದ್ದ ಕೈಟ್ ಫ್ಲೈಯರ್ಸ್​ರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.

    ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕ್ಷಮತಾ ಸಂಸ್ಥೆ ಟ್ರಸ್ಟಿ ಗೋವಿಂದ ಜೋಶಿ, ಆಕ್ಸ್​ಫರ್ಡ್ ಕಾಲೇಜಿನ ವಸಂತ ಹೊರಟ್ಟಿ, ಬಿಜೆಪಿಯ ಈರೇಶ ಅಂಚಟಗೇರಿ, ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ರವಿ ನಾಯಕ, ರಾಘವೇಂದ್ರ ರಾಮದುರ್ಗ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಕುಂದಗೋಳಮಠ, ನಾರಾಯಣ ಜರತಾರಘರ, ಉಮೇಶ ದುಶಿ, ಹನುಮಂತಪ್ಪ ದೊಡ್ಡಮನಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts