More

    ಗಾಂಜಾ ಮಾರಾಟಗಾರರ ಬಂಧನ

    ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣ ಬಳಿಯ ರಾಜಗೋಪಾಲನಗರದಲ್ಲಿ ಬುಧವಾರ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಶಹರ ಠಾಣೆ ಪೊಲೀಸರು ಬಂಧಿಸಿ 9,000 ರೂ. ಮೌಲ್ಯದ 450 ಗ್ರಾಂ ಗಾಂಜಾ, 510 ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಬಮ್ಮಾಪುರ ಓಣಿ ನಿವಾಸಿ ಅಲ್ತಾಫ ನದಾಫ (38), ಮೌಲಾಲಿ ಬ್ಲಾಕ್​ನ ನಿಂಗಪ್ಪ ಚಿಕ್ಕೋಪ (25), ಮಿಲ್ಲತ ನಗರದ ವಾಸಿಂ ಶೇಖ (28) ಹಾಗೂ ಅರಳಿಕಟ್ಟಿ ಓಣಿಯ ರೋಹನ ಹಬೀಬ (19) ಬಂಧಿತರು.

    ರಾಜಗೋಪಾಲನಗರದ ಬಳಿ ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ಹಾಗೂ ಪಿಎಸ್​ಐ ಬಿ.ಎನ್. ಸಾತನ್ನವರ ನೇತೃತ್ವದ ತಂಡ ದಾಳಿ ನಡೆಸಿದೆ. ಶಹರ ಪೊಲೀಸ್ ಠಾಣೆಯಲ್ಲಿ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಇಬ್ಬರ ಬಂಧನ, ಆಭರಣ ವಶ

    ನವಲಗುಂದ: ತಾಲೂಕಿನ ಹಾಳಕುಸುಗಲ್ ಗ್ರಾಮದ ಮನೆಯೊಂದರಲ್ಲಿ ಕಳೆದ ಏ.18ರಂದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

    ಹಾಳಕುಸುಗಲ್ ಗ್ರಾಮದ ಶಿವಪ್ಪ ಸಿದ್ದಲಿಂಗಪ್ಪ ಮೊರಬದ(30) ಹಾಗೂ ಕ್ರೖೆಂ ಪತ್ರಿಕೆಯೊಂದರ ವರದಿಗಾರ ಶ್ರೀಕಾಂತ ಮಲ್ಲಿಕಾರ್ಜುನ ಭದ್ರಣ್ಣವರ(28) ಎಂಬುವರನ್ನು ಬಂಧಿಸಿದ್ದು, ಆಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್​ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಶ್ರೀನಿವಾಸ ಶ್ರೀಕಾಂತ ಬೆಳವಡಿ ಎಂಬುವವರ ಮನೆಯಲ್ಲಿ ಕಳವಾಗಿದ್ದು, ಏ.19ರಂದು ದೂರು ದಾಖಲಿಸಿದ್ದರು. ಎಸ್​ಪಿ ವರ್ತಿಕಾ ಕಟಿಯಾರ, ಡಿಎಸ್​ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸಿ.ಜಿ. ಮಠಪತಿ ಹಾಗೂ ಪಿಎಸ್​ಐ ಜಯಪಾಲ ಪಾಟೀಲ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

    ಕೊಲೆ ಬೆದರಿಕೆ, ಇಬ್ಬರ ಸೆರೆ

    ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಇಬ್ಬರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ಕಮಲಾಪುರದ ಮಹ್ಮದಜಾಫರ್ ಪೀರಜಾದೆ (38), ಹಾವೇರಿಪೇಟೆಯ ಮಹ್ಮದಆಸೀಫ ಮುಲ್ಲಾ (25) ಬಂಧಿತರು. ಬಂಧಿತರ ಪೈಕಿ ಓರ್ವ ತಾನು ಫ್ರುಟ್ ಇರ್ಫಾನ್ ಬಾಡಿ ಗಾರ್ಡ್ ಎಂದು ಹೇಳಿಕೊಂಡು, ಮೋಸದಿಂದ ಇರ್ಫಾನ್ ಮೇಲೆ ಹಲ್ಲೆ ನಡೆಸಿದ್ದೀರಿ, ನಾನು ನಿಮ್ಮನ್ನು ನೇರವಾಗಿ ಹೊಡೆಯುತ್ತೇನೆ ಎಂದು ಹೇಳಿ ಸೆ. 4ರಂದು ಸಂಭಾಷಣೆ ಮಾಡಿ ಹರಿಬಿಟ್ಟಿದ್ದಾನೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಬಂಧಿತರು ಸೇರಿ ಮಲಿಕಜಾನ್ ಪಟೇಲ್ ಎಂಬುವವರ ಮೇಲೆ ದೂರು ದಾಖಲಾಗಿತ್ತು.

    ತನಿಖೆ ನಡೆಸಿದ ಉಪನಗರ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಯ ತಪ್ಪಿ ನಾಲೆಗೆ ಬಿದ್ದು ಮಗು ಸಾವು

    ಹುಬ್ಬಳ್ಳಿ: ಆಟವಾಡಲು ಹೋಗಿ 2 ವರ್ಷದ ಮಗು ನಾಲೆಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಪ್ರಿಯದರ್ಶಿನಿ ಕಾಲನಿಯಲ್ಲಿ ಬುಧವಾರ ಸಂಭವಿಸಿದೆ.

    ಶ್ರೀಜೀತ ನವಲೇಕರ (2) ಮೃತಪಟ್ಟ ಮಗು. ಅಮ್ಮನ ಕೈ ತುತ್ತು ತಿಂದು ಮಗು ಆಟವಾಡುತ್ತಿತ್ತು. ತಟ್ಟೆಯಲ್ಲಿದ್ದ ಅನ್ನ ಖಾಲಿಯಾಯಿತೆಂದು ತಾಯಿ ಅಡುಗೆ ಮನೆಗೆ ಹೋಗಿ ಬರುವಷ್ಟರಲ್ಲಿ ಮಗು ಆಕಸ್ಮಿಕವಾಗಿ ನಾಲೆಗೆ ಬಿದ್ದು ಸಾವನ್ನಪ್ಪಿದೆ. ಬಳಿಕ ಮನೆಯವರಿಗೆ ಮಾಹಿತಿ ಗೊತ್ತಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗೋಕುಲ ರೋಡ್ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts