More

    ಖೂಬಾ ಜತೆ ಕುಸ್ತಿಗೆ ಚವ್ಹಾಣ್ ಕಹಳೆ

    ಔರಾದ್: ಪಕ್ಷವನ್ನೇ ನನ್ನ ತಾಯಿ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ, ಜನರ ಹಾಗೂ ಕಾರ್ಯಕರ್ತರ ಹಿತಕ್ಕಾಗಿ ದುಡಿಯುತ್ತಿದ್ದೇನೆ. ಅಂತೆಯೇ ನಾಲ್ಕು ಚುನಾವಣೆಗಳಲ್ಲಿ ಸತತ ಜನತೆ ಆಶೀರ್ವಾದ ಮಾಡಿದ್ದಾರೆ. ಆದರೆ ಪಕ್ಷದಲ್ಲೇ ಇದ್ದುಕೊಂಡ ಕೆಲವರು
    ನನಗೆ ನಿರಂತರ ಕಿರಿಕಿರಿ ನೀಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಂತೂ ನನ್ನನ್ನು ಸೋಲಿಸಲು ಎಲ್ಲಿಲ್ಲದ ಪ್ರಯತ್ನ ಮಾಡಿದರು. ಇಷ್ಟು ದಿನ ತಾಳ್ಮೆಯಿಂದ ಎಲ್ಲವೂ ಸಹಿಸಿಕೊಂಡೆ. ಆದರೀಗ ಸುಮ್ಮನಿರಲಾರೆ. ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆಯುವವರ ವಿರುದ್ಧ ಕುಸ್ತಿಗಿಳಿಯುವೆ…
    ಹೀಗೆ ಹೂಂಕರಿಸಿ ತೊಡೆತಟ್ಟಿದವರು ಶಾಸಕ ಪ್ರಭು ಚವ್ಹಾಣ್. ಸ್ವಗ್ರಾಮ ಬೋಂತಿ ತಾಂಡಾದಲ್ಲಿ ಏರ್ಪಡಿಸಿದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರ ಹೆಸರು ಪ್ರಸ್ತಾಪ ಮಾಡದೆ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದರು. ಭಗವಂತ ಖೂಬಾ ಮತ್ತವರ ತಂಡಕ್ಕೆ ಬಿ. ಟೀಮ್ ಎಂದು ಸಂಬೋಧಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಇನ್ಮುಂದೆ ಸಮರ ಸಾರುವೆ ಎಂದು ರಣಕಹಳೆ ಮೊಳಗಿಸಿದರು.
    ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ವಿಭಿನ್ನವಾಗಿತ್ತು. ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಪಕ್ಷದೊಳಗಿರುವ ಕೆಲ ನಾಯಕರಿಂದಲೇ ಸಮಸ್ಯೆ ಎದುರಿಸಬೇಕಾಯಿತು. ಶತಾಯಗತಾಯ ನನಗೆ ಸೋಲಿಸಲು ಬಿ ಟೀಮ್ ಹಲವು ಕುತಂತ್ರಗಳನ್ನು ಮಾಡಿತು. ಕಾರ್ಯಕರ್ತರು ಎಲ್ಲ ಸಂಕಷ್ಟ-ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಐತಿಹಾಸಿಕ ಗೆಲುವು ನೀಡಿದ್ದಾರೆ. ಇದು ಕಾರ್ಯಕರ್ತರು ಹಾಗೂ ಮತದಾರರ ಜಯವಾಗಿದೆ. ಮಹಾಜನತೆಯ ಆಶೀರ್ವಾದ ಸಿಕ್ಕಿದೆ. ಮುಂದಿನ ಲಡಾಯಿಗೆ ಸಿದ್ಧ ಎಂದು ಘೋಷಿಸಿದರು.
    ಚುನಾವಣೆ ಸಂದರ್ಭದಲ್ಲಿ ಬಿ ಟೀಮ್ ನವರು ಇಲ್ಲಸಲ್ಲದ ಸುಳ್ಳು ಹೇಳಿ ನನ್ನ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದರು. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದು ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಮಹಾಸಂಚು ಮಾಡಿದ್ದರು. ಆದರೆ ಕಾರ್ಯಕರ್ತರ ಶಕ್ತಿಯ ಎದುರು ಅವೆಲ್ಲವೂ ವಿಫಲಗೊಂಡಿವೆ. ನಾನೆಂದು ಅಕಾರಕ್ಕಾಗಿ ಆಸೆಪಟ್ಟಿಲ್ಲ. ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ದೇಶವನ್ನು ಸಮೃದ್ಧಗೊಳಿಸಬೇಕೆಂಬ ಪಕ್ಷದ ಸಿದ್ಧಾಂತದಂತೆ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಕಾರ್ಯಕರ್ತರು ಸಹಕರಿಸಬೇಕು ಎಂದು ಕೋರಿದರು.
    ನಾಲ್ಕು ಅವಧಿಗೆ ಶಾಸಕನಾಗಿ ಮಾಡುವ ಮೂಲಕ ಕಾರ್ಯಕರ್ತರು ಮತ್ತು ಮಹಾಜನತೆ ನನಗೆ ಪಕ್ಷದ ಹಿರಿಯನನ್ನಾಗಿ ಮಾಡಿದ್ದಾರೆ. ಕಾರ್ಯಕರ್ತರೇ ಸರ್ವಸ್ವವಾಗಿದ್ದು, ಕ್ಷೇತ್ರದ ಜನತೆಯ ಅಭಿವೃದ್ಧಿಯ ಜತೆಗೆ ಕಾರ್ಯಕರ್ತರ ಹಿತರಕ್ಷಣೆಗೂ ಬದ್ಧನಾಗಿದ್ದೇನೆ. ಹಿಂದಿನ ತಪ್ಪು-ಒಪ್ಪು ಸರಿಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗುವೆ. ಈ ದಿಟ್ಟಿನಲ್ಲಿ ಎಲ್ಲರ ಸಹಕಾರ ಅವಶ್ಯಕ. ತಮ್ಮ ಗ್ರಾಮಗಳಲ್ಲಿ ಈವರೆಗೆ ಆಗಿರುವ ಕೆಲಸಗಳ ಬಗ್ಗೆ ಜನತೆಗೆ ತಿಳಿಸುವ ಜತೆಗೆ ಮುಂದೆ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಸಿದ್ದಪಡಿಸಿಕೊಡಬೇಕು. ಹಂತ ಹಂತವಾಗಿ ಎಲ್ಲ ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
    ಮಾಜಿ ಶಾಸಕ ಗುಂಡಪ್ಪ ವಕೀಲ್, ಬಿಜೆಪಿ ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ದೋನಿ, ಮುಖಂಡರಾದ ಸುರೇಶ ಭೋಸ್ಲೆ ಅವರು ಮಾತನಾಡಿ, ಹಿಂದಿನ ಚುನಾವಣೆಗಿಂತ ಈ ಬಾರಿಯ ಚುನಾವಣೆ ಸಾಕಷ್ಟು ವಿಭಿನ್ನವಾಗಿತ್ತು. ಕ್ಷೇತ್ರದಲ್ಲಿ ಕಾರ್ಯಕರ್ತರು ತಮ್ಮ ಶಕ್ತಿ ಏನು ಎಂಬುದನ್ನು ನಿರೂಪಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕ್ಷೇತ್ರದಲ್ಲಿ ಆಸ್ಪದ ನೀಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.

    ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅರಹಂತ ಸಾವಳೆ, ವಿಜಯಕುಮಾರ ಪಾಟೀಲ್ ಗಾದಗಿ, ಪ್ರಮುಖರಾದ ವಸಂತ ಬಿರಾದಾರ್, ಶಿವಾಜಿ ಪಾಟೀಲ್ ಮುಂಗನಾಳ, ಧೋಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ, ಶಕುಂತಲಾ ಮುತ್ತಂಗೆ, ಹಣಮಂತ ಸುರನಾರ ಇತರರಿದ್ದರು.


    ಹೂಮಳೆ ಸುರಿಸಿ ಕೃತಜ್ಞತೆ
    ಕಾರ್ಯಕರ್ತರಿಗೆ ಶಾಲು ಹೊದಿಸಿ ಶಾಸಕ ಪ್ರಭು ಚವ್ಹಾಣ್ ಅವರು ಸತ್ಕರಿಸಿದರು. ಕಾರ್ಯಕರ್ತರ ಮೇಲೆ ಹೂಮಳೆ ಸುರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ನಾಲ್ಕನೇ ಬಾರಿ ಕ್ಷೇತ್ರದಿಂದ‌ ಗೆಲ್ಲಿಸಿದ ಮತದಾರರು ಹಾಗೂ ಪಕ್ಷನಿಷ್ಠ ಕಾರ್ಯಕರ್ತರೇ ನನ್ನ ಪಾಲಿನ ದೇವರು ಎಂದು ನಮಿಸಿ ಕೃತಜ್ಞತೆ ಅರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts