More

    ಕೊಚ್ಚಿ ಹೋದ ರಸ್ತೆಗಿಲ್ಲ ದುರಸ್ತಿ ಭಾಗ್ಯ

    ರಾಣೆಬೆನ್ನೂರ: ತಾಲೂಕಿನ ಕುಪ್ಪೇಲೂರ ಗ್ರಾಮದ ಬಳಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಆಗಸ್ಟ್ ಹಾಗೂ ಅಕ್ಟೋಬರ್​ನಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದೆ. ಆದರೆ, ಈವರೆಗೂ ದುರಸ್ತಿ ಕಾರ್ಯ ನಡೆಸದೆ ಇರುವುದರಿಂದ ಸ್ಥಳೀಯ ರೈತರಿಗೆ ತೀವ್ರ ತೊಂದರೆಯುಂಟಾಗಿದೆ.

    ನಾಲ್ಕು ವರ್ಷದ ಹಿಂದೆ ಕುಪ್ಪೇಲೂರ ಗ್ರಾಪಂ ವತಿಯಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ವಿುಸಲಾಗಿತ್ತು. ಈ ರಸ್ತೆ ಕುಪ್ಪೇಲೂರ, ಚಿಕ್ಕಮಾಗನೂರ, ಹಿರೇಮಾಗನೂರ ಸೇರಿ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಗೆ ಅಡ್ಡಲಾಗಿ ಚಿಕ್ಕ ಹಳ್ಳ ಹರಿದಿದೆ. ಅದಕ್ಕೆ ಪೈಪ್ ಹಾಕಿ ದಾರಿ ಮಾಡಿಕೊಡಲಾಗಿತ್ತು.

    ಕಳೆದ ಬಾರಿ ಸುರಿದ ಮಳೆಗೆ ಹಳ್ಳದ ನೀರು ಹರಿದು ಹೋಗಲು ಹಾಕಿದ್ದ ಪೈಪ್ ಸಮೇತ ಸಂಪೂರ್ಣ ರಸ್ತೆ ಕೊಚ್ಚಿ ಹೋಗಿದೆ. ಈ ಮಾರ್ಗದಿಂದ ಜಮೀನುಗಳಿಗೆ ತೆರಳುವ ರೈತರು ತೊಂದರೆ ಅನುಭವಿಸುವಂತಾಗಿದೆ. ದಾರಿ ಬಂದ್ ಆಗಿರುವುದರಿಂದ ರೈತರು ಅಕ್ಕಪಕ್ಕದ ಜಮೀನುಗಳ ಮೂಲಕ ಓಡಾಡುತ್ತಿದ್ದಾರೆ. ಆದರೆ, ಬೆಳೆ ಹಾಳಾಗುತ್ತದೆ ಎನ್ನುವ ಕಾರಣ ಬೇರೆಯವರ ಜಮೀನುಗಳಲ್ಲಿ ಓಡಾಡಲು ಕೊಡುತ್ತಿಲ್ಲ. ದಾರಿ ಸಲುವಾಗಿ ನಿತ್ಯ ಬೈಗುಳ ಕೇಳಬೇಕಾಗಿದೆ. ಹೀಗಾಗಿ ಕೃಷಿ ಮಾಡುವುದನ್ನೇ ಬಿಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ರೈತರ ದಾರಿ ಬಂದ್ ಆಗಿದ್ದರಿಂದ ಚಿಕ್ಕಮಾಗನೂರ, ಯುಟಿಪಿ ಕಾಲುವೆ ದಾರಿ ಸೇರಿ ಬೇರೆ ಬೇರೆ ಮಾರ್ಗವಾಗಿ ನಾಲ್ಕೈದು ಕಿ.ಮೀ.ನಷ್ಟು ಸುತ್ತುವರಿದು ಜಮೀನುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಹಾಳಾಗಿರುವ ದಾರಿಯನ್ನು ದುರಸ್ತಿ ಪಡಿಸಿಕೊಡುವಂತೆ ಗ್ರಾಪಂ ಪಿಡಿಒ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಮೂರು ತಿಂಗಳು ಕಳೆದರೂ ಗ್ರಾಪಂನವರು ಯಾವುದೇ ಕಾರ್ಯ ಮಾಡುತ್ತಿಲ್ಲ. ನರೇಗಾ ಯೋಜನೆಯಡಿ ಮಾಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು ಇತ್ತ ಗಮನವನ್ನೇ ನೀಡಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ರಸ್ತೆ ನಿರ್ವಿುಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಕಳೆದ ಆಗಸ್ಟ್ ನಲ್ಲಿ ಸುರಿದ ಮಳೆಗೆ ಗ್ರಾಮದ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಅದನ್ನು ದುರಸ್ತಿ ಪಡಿಸುವಂತೆ ಪಿಡಿಒ ಅವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ರಸ್ತೆ ನಿರ್ವಿುಸಿಕೊಡಬೇಕು. ಇಲ್ಲವಾದರೆ ಗ್ರಾಪಂ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. – ಹೇಮರೆಡ್ಡಿ ಮಲ್ಲರೆಡ್ಡೇರ, ಕುಪ್ಪೇಲೂರ ರೈತ

    ಕುಪ್ಪೇಲೂರ ರೈತರ ಜಮೀನಿನ ರಸ್ತೆ ಸಮಸ್ಯೆ ಕುರಿತು ಪಿಡಿಒ ಅವರಿಂದ ಮಾಹಿತಿ ಪಡೆದು ಆದಷ್ಟು ಬೇಗ ರಸ್ತೆಯನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. – ಎಸ್.ಎಂ. ಕಾಂಬಳೆ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts