More

    ಕುಸಿಯುತ್ತಿದೆ ಕ್ರೈಸ್ತರ ಸಂಖ್ಯೆ

    ಉಡುಪಿ: ಅನೇಕ ಕಾರಣಗಳಿಂದ ಪ್ರಜಾಪ್ರಭುತ್ವದ ಬೇರುಗಳು ದುರ್ಬಲಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ, ಎಲ್ಲರೂ ಒಗ್ಗೂಡುವ ಅಗತ್ಯವಿದೆ. 25 ವರ್ಷಗಳಿಗೆ ಹೋಲಿಸಿದರೆ ನಮ್ಮ ಧರ್ಮಪ್ರಾಂತ್ಯದಲ್ಲಿ ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಇತರ ಸಮುದಾಯಕ್ಕೆ ಹೋಲಿಸಿದರೆ ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
    ಕೆಥೊಲಿಕ್ ಉಡುಪಿ ಪ್ರದೇಶ್ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಉಡುಪಿ ಧರ್ಮಪ್ರಾಂತ್ಯಮಟ್ಟದ ಚಾರಿತ್ರಿಕ ಸಮ್ಮೇಳನ (ಸಮುದಾಯೋತ್ಸವ-2020) ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಕ್ರೈಸ್ತರು ನಾವು ಹಿಂಜರಿಯುವ ಗುಣದಿಂದಾಗಿ ನಮ್ಮ ಶಕ್ತಿಯನ್ನು ಅಥವಾ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅನೇಕ ಮಂದಿ ಎಲ್ಲದಕ್ಕೂ ಚರ್ಚನ್ನೇ ಅವಲಂಬಿಸುತ್ತಿದ್ದಾರೆ. ಸ್ವಂತ ಶಕ್ತಿ ಯಿಂದ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಶಕ್ತರಾಗದಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘಟಿತರಾಗಬೇಕಾಗಿದೆ ಎಂದು ಸಲಹೆ ನೀಡಿದರು. ಕ್ರೈಸ್ತ ಸಮುದಾಯದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ಎಂಬ ವಿಚಾರದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಪ್ರಧಾನ ಭಾಷಣ ಮಾಡಿದರು. ಎಡ್ವರ್ಡ್ ಲಾರ್ಸನ್ ಡಿಸೋಜ ಅವರ ನಮ್ಮ ಸಂವಿಧಾನ ಮತ್ತು ಹಕ್ಕುಗಳು ಕೊಂಕಣಿ ಪುಸ್ತಕ ಹಾಗೂ ಡಾ.ಜೆರಾಲ್ಡ್ ಪಿಂಟೊ ರಚಿತ ಕೆಥೊಲಿಕ್ ಸಭಾ ಚರಿತ್ರೆಯ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ನಿವೃತ್ತ ಕೆಎಎಸ್ ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ವಕೀಲ ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡ, ಹಿರಿಯ ಪತ್ರಕರ್ತ ಗ್ಯಾಬ್ರಿಯಲ್ ವಾಸ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಮುಂಬೈ ಮಾಡೆಲ್ ಬ್ಯಾಂಕಿನ ಆಲ್ಬರ್ಟ ಡಿಸೋಜ, ಎಐಸಿಯು ಕಾರ್ಯ ದರ್ಶಿ ಜೆನೆಟ್ ಡಿಸೋಜ, ಎಐಸಿಯು ಅಧ್ಯಕ್ಷ ಆಸ್ಸಿಸಿ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ರೋಲ್ಫಿ ಡಿಕೋಸ್ತ, ಜಾನ್ ಡಿಸಿಲ್ವ, ಡಾ.ಲೆಸ್ಲಿ ಕ್ಲಿಫರ್ಡ ಡಿಸೋಜ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಪ್ರಮೀಳಾ ಡೆಸಾ, ಎಲಿಯಾಸ್ ಡಿಸೋಜ ಸಂತೆಕಟ್ಟೆ, ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ, ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷ ರೋಬರ್ಟ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ವಲೆರೀಯನ್ ಫೆರ್ನಾಂಡಿಸ್, ಸಮುದಾಯೋತ್ಸವ ಸಂಚಾಲಕ ಎಲ್. ರೋಯ್ ಕಿರಣ್ ಕ್ರಾಸ್ಟೊ, ವಲಯ ಅಧ್ಯಕ್ಷ ರೊನಾಲ್ಡ್, ಹೆರಿಕ್, ಐಡಾ ಕರ್ನೆಲಿಯೊ ಉಪಸ್ಥಿತರಿದ್ದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ಸಮುದಾಯೋತ್ಸವ ಕಾರ್ಯದರ್ಶಿ ಮೇರಿ ಡಿಸೋಜ ವಂದಿಸಿದರು. ಲೆಸ್ಲಿ ಆರೋಜ, ಎಡ್ವರ್ಡ ಲಾರ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

    ಪ್ರತಿಭಟನೆಯಿಂದ ಆತಂಕದ ವಾತಾವರಣ: ಮುಖ್ಯ ಅತಿಥಿಯಾಗಿದ್ದ ಉತ್ತರಾಖಂಡದ ಮಾಜಿ ರಾಜ್ಯಪಾಲರೂ, ಹಿರಿಯ ರಾಜಕಾರಣಿಯೂ ಆಗಿರುವ ಮಾರ್ಗರೆಟ್ ಆಳ್ವ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ದೇಶದಲ್ಲಿ ಉಂಟಾಗಿರುವ ಹಲ್ಲೆ, ಪ್ರತಿಭಟನೆಗಳು ಆತಂಕಕ್ಕೆ ಕಾರಣವಾಗಿದೆ. ನಮ್ಮ ಪೌರತ್ವವನ್ನು ಸಾಬೀತುಪಡಿಸಲು ಹೇಳುತ್ತಿರುವ ಪ್ರಧಾನಿ, ಗೃಹಮಂತ್ರಿ ಅಮಿತ್ ಷಾ ಯಾವ ಹೋರಾಟಗಾರರು? ಇಂತಹ ಅನಕ್ಷರಸ್ಥ ನಾಯಕರು ಏನೂ ತಿಳಿಯದ ಬಡ ಜನರ ಪ್ರಮಾಣಪತ್ರಗಳನ್ನು ಕೇಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

    ದೇಶದಲ್ಲಿ ಪರೋಕ್ಷವಾಗಿ ಕ್ರೈಸ್ತ ಸಮುದಾಯವನ್ನು ವಿವಿಧ ರೀತಿಯಲ್ಲಿ ಬೆದರಿಸಲಾಗುತ್ತಿದೆ. ಇತ್ತೀಚೆಗೆ ಕನಕಪುರದಲ್ಲಿ ಕ್ರಿಸ್ತ ಪ್ರತಿಮೆ ನಿರ್ಮಾಣದಲ್ಲಿ ನಡೆಯುತ್ತಿರುವ ರಾಜಕೀಯ ನಾಚಿಕೆಗೇಡು. ದೇಶದಲ್ಲಿ ಬೇರೆಯವರ ಪ್ರತಿಮೆಗಳನ್ನು ನಿರ್ಮಿಸಲು ಯಾವುದೇ ವಿರೋಧ ಇಲ್ಲ, ಆದರೆ ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮಾತ್ರ ವಿರೋಧ ಏಕೆ?
    – ಮಾರ್ಗರೇಟ್ ಆಳ್ವ, ಹಿರಿಯ ರಾಜಕಾರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts