More

    ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು

    ಚಿತ್ರದುರ್ಗ: ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಬರ ನಿರ್ವಹಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಆರು ತಾಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವಂತ ಗ್ರಾಮಗಳ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ರೂಪಿಸಿ, ತ್ವರಿತ ಸರಬರಾಜಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಾಕೀತು ಮಾಡಿದರು.

    ಜಿಲ್ಲೆಯಲ್ಲಿ ಸಮಸ್ಯಾತ್ಮಕ 125 ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ. ಪೂರೈಕೆ ಸಂಬಂಧ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾಹಿತಿ ನೀಡಿದರು.

    ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈಗಾಗಲೇ ಸಮಸ್ಯೆ ಇರುವ ಹಳ್ಳಿಗಳಲ್ಲಿ ಕೊಳವೆಬಾವಿ ಕೊರೆಸಲು ಮಾರ್ಗಸೂಚಿ ಸರಳಗೊಳಿಸಬೇಕು. ಪೈಪ್‌ಲೈನ್, ಮೋಟಾರ್ ಅಳವಡಿಕೆ ಕಾರ್ಯವೂ ತ್ವರಿತವಾಗಿ ಆಗಬೇಕು ಎಂದು ಸೂಚಿಸಿದರು.

    ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಈ ವಿಚಾರವಾಗಿ ಪಿಡಿಒ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಗಳ ವಿಶೇಷ ತಂಡ ರಚಿಸಿ, ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳ್ಳಬೇಕು ಎಂದು ಒತ್ತಾಯಿಸಿದರು.

    ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಬರ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ಅದಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ, ತೊಂದರೆ ಉಂಟಾದ ಕಡೆ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚಿಸಿದರು.

    ಆರ್‌ಒ ಘಟಕ ದುರಸ್ತಿಗೊಳಿಸಿ: ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತ್ವರಿತವಾಗಿ ದುರಸ್ತಿಗೊಳಿಸಿ, ಕಾರ್ಯಾರಂಭ ಮಾಡಬೇಕು. ನಿರ್ವಹಣೆಯಲ್ಲಿ ನಿರ್ಲಕ್ಷೆ ತೋರಿದ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಘುಮೂರ್ತಿ ಒತ್ತಾಯಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಸಿಇಒ ಸ್ಪಷ್ಟಪಡಿಸಿದರು.

    ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಕೊಳವೆಬಾವಿ ಕೊರೆಸಲು ಅವಕಾಶವಿದೆ. ಅಗತ್ಯ ಇರುವೆಡೆ ಕೊರೆಸಬಹುದು. ಅಂತಹ ಗ್ರಾಮಗಳ ವಿವರ ಜಿಲ್ಲಾಡಳಿತಕ್ಕೆ ಸಲ್ಲಿಸಿ ಎಂದು ಸೂಚಿಸಿದರು.

    ಮೇವು ಮಾಹಿತಿ ನಿಖರವಾಗಿರಲಿ: ಬರದ ಕಾರಣಕ್ಕೆ ಮೇವಿನ ಅಭಾವ ತೀವ್ರವಾಗುತ್ತಿದ್ದು, ಜಿಲ್ಲೆಯಲ್ಲಿನ ವಾಸ್ತವಾಂಶದ ನಿಖರ ಮಾಹಿತಿ ನೀಡಿ ಎಂದು ಸಚಿವರು ತಾಕೀತು ಮಾಡಿದರು. ತಪ್ಪು ಮಾಹಿತಿ ನೀಡಬಾರದು, ಹೋಬಳಿಗೊಂದು ಗೋಶಾಲೆ ತೆರೆಯಬೇಕು. ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಎಂದು ಶಾಸಕರು ಸೂಚಿಸಿದರು.

    ನರೇಗಾದಡಿ ಕೆಲಸ ನೀಡಿ: ಬರದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಕೆಲಸ ನೀಡಬೇಕು ಎಂದು ರಘುಮೂರ್ತಿ ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಗೋಕಟ್ಟೆ, ನಾಲೆಗಳ ಹೂಳು ತೆಗೆಯುವುದು ಸೇರಿ ಹೆಚ್ಚೆಚ್ಚು ಮಾನವ ದಿನ ಸೃಜಿಸುವ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಈ ವರ್ಷ ನರೇಗಾದಡಿ 48 ಲಕ್ಷ ಗುರಿಗೆ 41 ಲಕ್ಷ ಮಾನವ ದಿನ ಸೃಜಿಸಿ ಶೇ 85ರಷ್ಟು ಸಾಧನೆಯಾಗಿದೆ ಎಂದು ಸೋಮಶೇಖರ್ ಪ್ರತಿಕ್ರಿಯಿಸಿದರು.

    13 ಸಾವಿರ ಮೇವಿನ ಕಿಟ್ ಪೂರೈಕೆ: ಬರ ನಿರ್ವಹಣೆಗಾಗಿ ಮೇವು ಬೆಳೆಯುವುದನ್ನು ಉತ್ತೇಜಿಸಲು ಈಗಾಗಲೇ ಜಿಲ್ಲೆಗೆ 13 ಸಾವಿರ ಮೇವಿನ ಬೀಜದ ಕಿಟ್ ಪೂರೈಕೆಯಾಗಿದೆ. ಮೊಳಕಾಲ್ಮುರು ತಾಲೂಕಿಗೆ 968, ಚಳ್ಳಕೆರೆ-1,019, ಚಿತ್ರದುರ್ಗ-1,310 ಮೇವಿನ ಕಿಟ್ ನೀಡಲಾಗಿದೆ. ಉಳಿದೆಡೆಯೂ ಅಗತ್ಯಕ್ಕೆ ಅನುಗುಣವಾಗಿ ಶೀಘ್ರ ಕಿಟ್ ವಿತರಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಮಾಹಿತಿ ನೀಡಿದರು.

    ಶಾಸಕ ಬಿ.ಜಿ.ಗೋವಿಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts