More

    ಕೀಳರಿಮೆ, ಭಯ ತೊರೆದರೆ ಸಾಧನೆ ಸರಾಗ

    ಗದಗ: ಯುವಜನರಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಕೀಳರಿಮೆ, ಭಯ ತೊರೆದು ಇಚ್ಛಾಶಕ್ತಿ ಮತ್ತು ಜ್ಞಾನಶಕ್ತಿಯಿಂದ ಯುವಕರು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

    ನಗರದ ಎಪಿಎಂಸಿ ಆವರಣದಲ್ಲಿರುವ ವಿವೇಕಾನಂದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜನ್ಮ ದಿನ, ಷಿಕಾಗೊ ಉಪನ್ಯಾಸದ 125ನೇ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪೂರ್ತಿ ಹುಟ್ಟಿಸುವಂತಹ ಶಿಕ್ಷಣವನ್ನು ಮಕ್ಕಳಿಗೆ ಶಾಲೆಯಲ್ಲಿ ಹೇಳಿಕೊಡುವುದು ಇಂದಿನ ಅವಶ್ಯಕವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮುಖ್ಯ ಉದ್ದೇಶವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. 125 ವರ್ಷಗಳ ಹಿಂದಿನ ವಿವೇಕಾನಂದರ ಷಿಕಾಗೊ ಉಪನ್ಯಾಸದ ಸಂದೇಶಗಳು ಇಂದಿಗೂ ಅತ್ಯವಶ್ಯಕವಾಗಿವೆ ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಯುವಕರೇ ದೇಶದ ಭವಿಷ್ಯದ ಆಶಾಕಿರಣ. ದೇಶವನ್ನು ಬಲಿಷ್ಠಗೊಳಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯ ಸೆಲೆ. ಮನೋಬಲದಿಂದ ಯಶಸ್ಸು ಪಡೆಯಬಹುದು ಎನ್ನುವುದನ್ನು ಸ್ವಾಮಿ ವಿವೇಕಾನಂದರು ಸಾರಿದ್ದಾರೆ ಎಂದರು.

    ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಸಾಗರದ ಸದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ವಾಮಿ ವಿವೇಕಾನಂದ ಷಿಕಾಗೊ ಉಪನ್ಯಾಸದ 125ನೇ ವರ್ಷಾಚರಣೆ ಸಮಿತಿಯ ಕಾರ್ಯಾಧ್ಯಕ್ಷ ಡಿ.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಸ್ವಾಮಿ ವಿವೇಕಾನಂದರ ಹೆಸರೇ ಒಂದು ಶಕ್ತಿ. ವಿವೇಕಾನಂದರ ತತ್ತÌಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. 125ನೇ ವರ್ಷಾಚರಣೆ ನಿಮಿತ್ತ ಜಿಲ್ಲೆಯ ವಿವಿಧ ಸಂಸ್ಥೆಗಳಲ್ಲಿ 201 ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು 35 ಸಂಪನ್ಮೂಲ ವ್ಯಕ್ತಿಗಳು ವಿವೇಕಾನಂದರ ಸಂದೇಶಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಿದ್ದಾರೆ ಎಂದರು.

    ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಜಿಪಂ ಸಿಇಒ ಡಾ. ಆನಂದ್ ಕೆ, ಉಪವಿಬಾಗಾಧಿಕಾರಿ ರಾಯಪ್ಪ ಹುಣಸಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಕೆ.ಎಚ್. ಬೇಲೂರ, ಕೆ.ಬಿ. ತಳಗೇರಿ, ಡಾ. ಎಸ್.ವೈ. ಚಿಕ್ಕಟ್ಟಿ ವೇದಿಕೆ ಮೇಲಿದ್ದರು. ಜೆ.ಕೆ. ಜಮಾದಾರ, ವಿವೇಕಾನಂದ ಗೌಡ ಪಾಟೀಲ ನಿರೂಪಿಸಿದರು.

    ಯುವ ಸಮುದಾಯದ ಪ್ರೇರಕ ಶಕ್ತಿ

    ಮುಂಡರಗಿ: ಸ್ವಾಮಿ ವಿವೇಕಾನಂದರು ಯುವಜನಾಂಗದ ಪ್ರೇರಕ ಶಕ್ತಿಯಾಗಿದ್ದಾರೆ. ಯುವ ಸಮುದಾಯವು ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಆರ್.ಎಲ್. ಪೊಲೀಸ್ ಪಾಟೀಲ ಹೇಳಿದರು.

    ಪಟ್ಟಣದ ಜಗದ್ಗುರು ತೋಂಟದಾರ್ಯ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಸಂದೇಶಗಳು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿವೆ. ಯುವ ಸಮೂಹ ದೇಶದ ಅಭಿವೃದ್ಧಿ ಪರ ಚಿಂತನೆ ಮಾಡಬೇಕು ಎಂದರು.

    ಪ್ರಾಚಾರ್ಯ ಎಸ್.ಆರ್. ಚಿಗರಿ ಮಾತನಾಡಿದರು. ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ಮಹಾಂತೇಶ ಕೊರಡಕೇರಿ, ಉಪನ್ಯಾಸಕಿ ಅಕ್ಕಮಹಾದೇವಿ ಹಿರೇಮಠ, ವಿದ್ಯಾರ್ಥಿನಿ ಹೀನಾ ಕೌಸರ್ ಮಾತನಾಡಿದರು. ಕಾಲೇಜ್ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ, ಪ್ರಕಾಶಗೌಡ ಪಾಟೀಲ, ಉಪನ್ಯಾಸಕರಾದ ಕಾವೇರಿ, ಡಾ.ನಾಗರಾಜ ಹಾವಿನಾಳ, ಡಾ.ವಾದಿರಾಜ ತಂಗೋಡ, ಎಂ.ಎ. ನವಲಗುಂದ, ವಂಸತ ಸಿಂಗಾಡಿ ಉಪಸ್ಥಿತರಿದ್ದರು.

    ವಿವೇಕ ಸಂಪತ್ ಸೇವಾ ಕೇಂದ್ರ: ವಿವೇಕ ಸಂಪತ್ ಸೇವಾ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ, ಮನೋಜ್ ಗುಂಡಿಕೇರಿ, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ಶಿವಕುಮಾರ ಕುರಿ, ಮಹಾಂತೇಶ ಕೊರಡಕೇರಿ, ಶಿವಕುಮಾರ ಇಟಗಿ, ಶರಣು ಪೊಲೀಸಪಾಟೀಲ, ಮಂಜುನಾಥ ಅಂಕಲಿ ಇತರರಿದ್ದರು.

    ಡಂಬಳದಲ್ಲಿ ಸ್ವಚ್ಛತಾ ಜಾಥಾ

    ಡಂಬಳ: ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಗ್ರಾಮದ ಮಹಿಳಾ ಸ್ವ ಸಹಾಯ ಸಂಘದಿಂದ ಭಾನುವಾರ ಸ್ವಚ್ಛತಾ ಜಾಥಾ ಜರುಗಿತು. ಗ್ರಾಮದ ಶ್ರೀ ಮಳಿಂಗರಾಯ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಮಹಿಳೆಯರು ಸ್ವಚ್ಛತಾ ಕಾರ್ಯ ಕೈಗೊಂಡರು.

    ಸಂಘದ ಪ್ರತಿನಿಧಿ ಶಾಂತವ್ವ ಕದಡಿ ಜಾಥಾಕ್ಕೆ ಚಾಲನೆ ನೀಡಿದರು. ಪ್ರೇಮಾ ಮಠದ, ಪ್ರೇಮಾ ಆಪ್ತಗಿರಿ, ಸಿದ್ದಮ್ಮ ಜಂತ್ಲಿ, ಸುಧಾ ಒಂಟೆಭೋವಿ, ಶಂಕ್ರವ್ವ ಪಾರಪ್ಪನವರ, ಮಂಜವ್ವ ಪಾರಪ್ಪನವರ, ಹುಲಿಗೆಮ್ಮ ಭೋವಿ, ಶಂಕ್ರವ್ವ ಹೊಸಕೇರಿ, ಶೋಭಾ ಯಲಬೋವಿ, ಸಿದ್ದವ್ವ ನಾಯಕರ, ಕೃಷ್ಣಮ್ಮ ಪಾರಪ್ಪನವರ, ಬಸವಣ್ಣೆವ್ವ ಜೊಂಡಿ, ಶೋಭಾ ಯಲಿಗಾರ, ಮಮತಾಜ ಹಳ್ಳಿಕೇರಿ, ಪಾರಪ್ಪನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts